ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಬ್ಯಾನರ್ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಕರ್ನಾಟಕ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತರನ್ನು ಯಾಸೀನ್, ಮೊಹಮ್ಮದ್ ಮತ್ತು ಸೊಹೈಲ್ ಎಂದು ಗುರುತಿಸಲಾಗಿದೆ.
ಬಿಜೆಪಿ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಚಿತ್ರವಿದ್ದ ಬ್ಯಾನರ್ ಅನ್ನು ಆರೋಪಿಗಳು ಹರಿದು ಹಾಕಿದ್ದರು. ಗಣೇಶ ಹಬ್ಬದ ಶುಭಾಶಯ ಕೋರಲು ಇದನ್ನು ಹಾಕಲಾಗಿತ್ತು. ಬ್ಯಾನರ್‌ನಲ್ಲಿ ಗಣೇಶ ಮತ್ತು ಶಿವಾಜಿ ಮಹಾರಾಜರ ಚಿತ್ರಗಳಿದ್ದವು.
ಬಳಿಕ ಬ್ಯಾನರ್ ಹರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಶಾಸಕ ಯತ್ನಾಳ್ ಬೆಂಬಲಿಗ ರಘು ವಿಜಯಪುರದ ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಇದು ನಗರದಲ್ಲಿ ಕೋಮು ಸೌಹಾರ್ದ ಹಾಳು ಮಾಡುವ ಪ್ರಯತ್ನವಾಗಿದೆ ಎಂದು ದೂರಿದರು.
ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಗಣೇಶ ಚತುರ್ಥಿ ಆಚರಿಸಿದ್ದು, ಈದ್ ಆಚರಣೆ ವೇಳೆ ಯುವಕರ ಗುಂಪು ಉದ್ದೇಶಪೂರ್ವಕವಾಗಿ ಹಿಂದೂ ದೇವರುಗಳ ಫೋಟೋ ಇರುವ ಬ್ಯಾನರ್ ಹರಿದು ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.