ಯಾವುದೇ ಸಂದರ್ಭದಲ್ಲಿ ನಾವು ಪಡೆಯುವ ಚಿಕಿತ್ಸೆಯಲ್ಲಿ ನಮಗೆ ಸಂಶಯ ಬಂದರೆ ಇನ್ನೊಬ್ಬ ವೈದ್ಯರ ಸಲಹೆ ಅಭಿಪ್ರಾಯ ಪಡೆದು ಮುಂದುವರೆಯುವುದು ಒಳಿತು. ನಾನು ಕಂಡ ಘಟನೆಯೊಂದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ- ಶೋಭಲತ ಸಿ. ಸ್ಟಾಫ್ ನರ್ಸ್, ಕಾಸರಗೋಡು
ಸುಮಾರು 20 ವರ್ಷಗಳ ಹಿಂದೆ ಒಂದು ದಿನ ಗಿರೀಶ ನಗುಮುಖದಿಂದ ಬಂದ. ಏನೋ ಸಂತಸದ ಸುದ್ದಿ ತಂದಿರಬೇಕು ಅಂದುಕೊಂಡೆ.
‘ಏನೋ ಗಿರೀಶಾ, ಏನಿವತ್ತು ವಿಶೇಷ?’
‘ ಅಕ್ಕಾ, ತಂಗಿ ಸುಜಾತ ಗರ್ಭಿಣಿ ಅಂತೆ. 3 ತಿಂಗಳು ಕಳೆಯಿತಂತೆ ‘
‘ಓಹೋ… ಮದುವೆಯಾಗಿ ಎರಡು ವರ್ಷ ಕಳೆಯಿತಲ್ಲಾ… ಸಂತೋಷ’
ಗಿರೀಶನಿಗೆ ಮನೆಯ ವಿಷಯಗಳನ್ನು ಆಗಾಗ ಹೇಳುವ ಹವ್ಯಾಸ… ಅವನ ಸಂತೋಷದಲ್ಲಿ ನನಗೂ ಪಾಲು.
‘ಡಾಕ್ಟರ್ ಗೆ ತೋರಿಸುತ್ತಿದ್ದಾರಲ್ಲಾ.. ಡಾಕ್ಟರ್ ಹೇಳಿದಂತೆ ನಡೆಯಿರಿ.. ಮಾವ ಆಗ್ತಾ ಇದ್ದೀಯಲ್ಲಾ…’ ಕಿಚಾಯಿಸಿದೆ.
‘ಹೌದಕ್ಕಾ … ಮುಂದಿನ ತಿಂಗಳು ಸ್ಕ್ಯಾನಿಂಗ್ ಮಾಡಲು ಹೇಳಿದ್ದಾರಂತೆ ..’
ಒಂದು ತಿಂಗಳು ಕಳೆದು ಬಂದ ಗಿರೀಶನ ಮುಖದಲ್ಲಿ ನಗು ಇರಲಿಲ್ಲ. ಏನೋ ತಿಳಿಯಲು ಆತುರದಿಂದ ಬಂದಂತಿದ್ದ.
‘ಏನೋ ಗಿರೀಶಾ, ಏನಾಯಿತು?’ ನನ್ನ ಪ್ರಶ್ನೆಗೆ, ‘ಅಕ್ಕಾ, ಸುಜಾತಳಿಗೆ ನಿನ್ನೆ ಸ್ಕ್ಯಾನಿಂಗ್ ಮಾಡಿಸಿದರಂತೆ, ಮಗುವಿಗೆ ಏನೋ ಅಂಗವೈಕಲ್ಯ ಇದೆಯಂತೆ. ವಿಕಲಾಂಗ ಮಗು ಜನಿಸುವುದಕ್ಕಿಂತ ಅದನ್ನು ಅಬಾರ್ಷನ್ ಮಾಡಿ ತೆಗೆಯುವುದು ಒಳ್ಳೆಯದೆಂದು ಡಾಕ್ಟರ್ ಹೇಳಿದರಂತೆ’ ಅವನ ಮಾತಿನಲ್ಲಿ ಬೇಸರ ಕಾಣಿಸಿತು.
‘ಅವಸರ ಮಾಡಬೇಡ. ಸ್ಕ್ಯಾನಿಂಗ್ ಮೆಷಿನ್ ಗಳು ಕೆಲವೊಮ್ಮೆ ಸರಿಯಾಗಿ ತೋರಿಸುವುದಿಲ್ಲ. ಒಳ್ಳೆಯ ಸ್ಕ್ಯಾನಿಂಗ್ ಸೆಂಟರ್ ಗೆ ಹೋಗಿ ಇನ್ನೊಮ್ಮೆ ಸ್ಕ್ಯಾನ್ ಮಾಡಿ ತಜ್ಞರ ಅಭಿಪ್ರಾಯ ತಿಳಿದು ಅಗತ್ಯ ಬಂದಲ್ಲಿ ಮತ್ತೆ ಅಬಾರ್ಷನ್ ಮಾಡಬಹುದಲ್ಲಾ…’ ನನ್ನದೊಂದು ಚಿಕ್ಕ ಸಲಹೆ. ಆಗ ಸಣ್ಣ ಸಣ್ಣ ಆಸ್ಪತ್ರೆಗಳಲ್ಲಿ ಇಂದಿನ ರೀತಿಯ ಸ್ಕ್ಯಾನಿಂಗ್ ಯಂತ್ರಗಳು ಬಂದಿರಲಿಲ್ಲ.
‘ಹೌದಕ್ಕಾ .. ನಾನೂ ಹಾಗೆ ಹೇಳಿದೆ. ಆದರೆ ಭಾವನವರು ಎಲ್ಲಾ ಡಾಕ್ಟರ್ ಗಳು ಹೇಳುವುದು ನಮ್ಮ ಹಿತಕ್ಕೆ ತಾನೆ? ಡಾಕ್ಟರ್ ಮೇಲೆ ವಿಶ್ವಾಸ ಬೇಕು. ಮುಂದೆ ಗರ್ಭ ಧರಿಸಲು ತೊಂದರೆ ಇಲ್ಲವಲ್ಲಾ ಎಂದು ಅಬಾರ್ಷನ್ ಮಾಡಿಸಲು ಕರೆದುಕೊಂಡು ಹೋಗಿದ್ದಾರೆ…’
ನಾನು ಮೌನವಾಗಿ ಅವನ ಮುಖ ನೋಡಿದೆ. ಆತ ಹಿಂತಿರುಗಿದ.
ಮರುದಿನ ಬಂದವನೇ, ‘ ಅಕ್ಕಾ, ಸುಜಾತಳಿಗೆ ಅಬಾರ್ಷನ್ ಆಯಿತು. ಆದರೆ ಮಗುವಿನ ಅಂಗಾಂಗಗಳು ಸರಿ ಇತ್ತಂತೆ. ಇನ್ನೊಮ್ಮೆ ಸ್ಕ್ಯಾನ್ ಮಾಡಿ ನೋಡಬಹುದಿತ್ತು ಎಂದು ಡಾಕ್ಟರ್ ನೊಂದುಕೊಂಡರಂತೆ ‘
‘ಹಾಗಾ,… ಇರಲಿ ಬಿಡು… ಮುಂದೆ ಗರ್ಭ ಧರಿಸಬಹುದು’ ನಿಟ್ಟುಸಿರು ಬಿಟ್ಟೆ.
ಮತ್ತೆ 3 ತಿಂಗಳು ಕಳೆದು ಸುಜಾತ ಮತ್ತೆ ಗರ್ಭಿಣಿಯಾದಳು. ಆದರೆ, ಐದು ತಿಂಗಳು ತುಂಬುತ್ತಲೇ, ತನ್ನಿಂದ ತಾನಾಗಿಯೇ ಅಬಾರ್ಷನ್ ಆಗಿ ಹೋಯಿತು.
ಕೆಲವು ತಿಂಗಳು ಕಳೆದು ಮತ್ತೆ ಗರ್ಭಿಣಿಯಾದಳು ಸುಜಾತ. ಈ ಸಲ ಡಾಕ್ಟರ್ ಎಚ್ಚರಿಕೆಯಿಂದ ನೋಡಿಕೊಳ್ಳತೊಡಗಿದರು..ಆರು ತಿಂಗಳು ತುಂಬಿ ಏಳನೇ ತಿಂಗಳಿಗೆ ಕಾಲಿರಿಸಿದಾಗಲೇ ಸೀಮಂತವೂ ನಡೆಯಿತು. ಆದರೆ ಅದೊಂದು ದಿನ ಹೆರಿಗೆ ನೋವು ತಟ್ಟನೆ ಕಾಣಿಸಿಕೊಂಡು ಹೆರಿಗೆ ನಡೆದೇ ಹೋಯಿತು. ಹಳ್ಳಿಯಲ್ಲಿ ಸೂಕ್ತ ಚಿಕಿತ್ಸೆ ಸಕಾಲದಲ್ಲಿ ಸಿಗದೆ ಮಗು ತೀರಿಕೊಂಡಿತು. ಸಂತಸದ ಕುಟುಂಬದಲ್ಲಿ ದುಃಖ ಕಾಣಿಸಿಕೊಂಡಿತು. ಕೆಲ ದಿನಗಳ ಬಳಿಕ ಅವರು ತಜ್ಞ ವೈದ್ಯರನ್ನು ಭೇಟಿಯಾಗಲು ತೀರ್ಮಾನಿಸಿದರು.
ಮತ್ತೆ ಸುಜಾತ ಗರ್ಭಿಣಿಯಾದಳು. ಅವರಾಗಲೇ ತೀರ್ಮಾನಿಸಿದಂತೆ ಪಟ್ಟಣದ ತಜ್ಞರ ಸಲಹೆ ಪಡೆದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದು ಒಂಭತ್ತು ತಿಂಗಳು ತುಂಬಿ ಆಕೆ ಮುದ್ದಾದ ಮಗುವಿಗೆ ಜನ್ಮ ನೀಡಿದಳು. ಆ ಕುಟುಂಬದಲ್ಲಿ ಸಂತಸ ತುಂಬಿತು. ಜೊತೆಗೆ ನಾನೂ ಖುಶಿ ಪಟ್ಟೆ.
ಇದೊಂದು ನಾನು ಕಂಡ ಘಟನೆ. ಇಂದು ಆಧುನಿಕ ತಂತ್ರಜ್ಞಾನ, ಔಷಧಿಗಳ ಲಭ್ಯತೆ ಇದ್ದರೂ ಕೆಲವು ವರ್ಷಗಳ ಹಿಂದೆ ಎಲ್ಲಾ ಕಡೆ ಸೂಕ್ತ ಸೌಕರ್ಯ, ಚಿಕಿತ್ಸಾ ಕ್ರಮಗಳು ಲಭ್ಯವಾಗುತ್ತಿರಲಿಲ್ಲ. ಮಾಹಿತಿಯ ಕೊರತೆಯಿಂದ ಅಪಾಯಗಳು ಸಂಭವಿಸುತ್ತಿದ್ದವು. ಆದರೆ ಮುಂದುವರಿದ ಈ ದಿನಗಳಲ್ಲಿ ಕೂಡಾ ಅಚಾತುರ್ಯಗಳು ನಡೆಯುತ್ತಿಲ್ಲ ಎಂದು ಹೇಳಲಾಗದು.
ಮೇಲೆ ಹೇಳಿದ ವಿಷಯದಲ್ಲಿ ಸ್ಕ್ಯಾನಿಂಗ್ ಯಂತ್ರದ ತಪ್ಪಾದ ಮಾಹಿತಿಯಿಂದ ಮೊದಲು ಅಬಾರ್ಷನ್ ನಡೆಸಬೇಕಾಯಿತು. ಮಾಹಿತಿಯ ಕೊರತೆಯಿಂದ ಅವರು ಎರಡನೇ ಸಲಹೆ ಪಡೆಯಲು ಸಿದ್ಧರಾಗಲಿಲ್ಲ. ಕೆಟ್ಟ ಕಾಲವೋ ಎಂಬಂತೆ ಮೊದಲು ಅಬಾರ್ಷನ್ ಮಾಡಿದ ಸಮಯದಲ್ಲೇ ಮತ್ತೆ ಅಬಾರ್ಷನ್ ನಡೆದುಹೋಯಿತು. ಎಚ್ಚರಿಕೆ ವಹಿಸಿದರೂ, ಸೌಕರ್ಯಗಳ ಕೊರತೆಯಿಂದ ಮತ್ತೂ ಮಗು ಸಿಗದಾಯಿತು. ಕೊನೆಗೆ ಸೂಕ್ತ ವೈದ್ಯರ ಸಲಹೆ ಪಡೆದ ಕಾರಣ ಮಗುವನ್ನು ಪಡೆಯಲು ಸಾಧ್ಯವಾಯಿತು.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಯಾವುದೇ ಸಂದರ್ಭದಲ್ಲಿ ನಾವು ಪಡೆಯುವ ಚಿಕಿತ್ಸೆಯಲ್ಲಿ ನಮಗೆ ಸಂಶಯ ಬಂದರೆ ಇನ್ನೊಬ್ಬ ವೈದ್ಯರ ಸಲಹೆ ಅಭಿಪ್ರಾಯ ಪಡೆದು ಮುಂದುವರೆಯುವುದು ಒಳಿತು.
ಶೋಭಲತಾ ಸಿ
ಸ್ಟಾಫ್ ನರ್ಸ್ ಹಾಗೂ ಸಾಮಾಜಿಕ ಕಾರ್ಯಕರ್ತೆ, ಕಾಸರಗೋಡು
ಇದನ್ನೂ ಓದಿ-<strong>ಸಕ್ಕರೆ ಮಾರುಕಟ್ಟೆಯ ಭಯಾನಕ ಮುಖ</strong>