ಇಂಫಾಲ, ಡಿಸೆಂಬರ್ 12: ಮಣಿಪುರದ ತೌಬಲ್ ಜಿಲ್ಲೆಯಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ‘ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಂಗ್ಲೇಪಕ್’ (ಪ್ರೆಪಕ್) ನ ಮೂವರನ್ನು ಬಂಧಿಸಲಾಗಿದೆ. ಗುರುವಾರದಂದು ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದಾರೆ.
ನಿಷೇಧಿತ ಗುಂಪಿನ ಬಂಧಿತ ಸದಸ್ಯರು ಸುಲಿಗೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರೆಪಕ್ (ಪ್ರೊ) ಸಂಘಟನೆಯ ಕೆಲವು ಕಾರ್ಯಕರ್ತರು ತೌಬಲ್ ಅಥೋಕ್‌ಪಾಮ್ ಪ್ರದೇಶದಲ್ಲಿ ಸುತ್ತಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು ಎಂದು ಹೇಳಿಕೆ ತಿಳಿಸಿದೆ. ತೌಬಲ್ ಜಿಲ್ಲೆಯ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಅವರ ಮೇಲ್ವಿಚಾರಣೆಯಲ್ಲಿ ತೌಬಲ್ ಕಮಾಂಡೋ ಘಟಕದ ಜಂಟಿ ತಂಡ ಮತ್ತು ಒಸಿ-ಸಿಡಿಒ ತೌಬಲ್ ನೇತೃತ್ವದಲ್ಲಿ 4 ಎಆರ್ (ಅಸ್ಸಾಂ ರೈಫಲ್ಸ್) ತಂಡವು ಎಚ್‌ಡಿಎಫ್‌ಸಿ ಬ್ಯಾಂಕ್ ಬಳಿ ಮೂವರನ್ನು ಬಂಧಿಸಿತು. ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಅಕ್ರಮ ಸಂಘಟನೆಗೆ ಸೇರಿದವರನ್ನು ಬಂಧಿಸಲಾಗಿದೆ.
ಅವರನ್ನು ನಂಬರಂ ಇಂದರ್‌ಜಿತ್ ಸಿಂಗ್, ರಾಜ್‌ಕುಮಾರ್ ಮೋಹನ್ ಸನಾ ಮತ್ತು ವಾರೆಪಮ್ ಆಲ್ಬರ್ಟ್ ಮೆಯಿತಿ ಥೋಯ್ ಎಂದು ಗುರುತಿಸಲಾಗಿದೆ.
ಆರೋಪಿಗಳ ಬಳಿಯಿಂದ ಒಂದು ಗ್ರೆನೇಡ್, ಬೇಡಿಕೆ ಪತ್ರ, ಮೂರು ಮೊಬೈಲ್ ಫೋನ್‌ಗಳು ಮತ್ತು ಮೋಟಾರ್‌ಸೈಕಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೇಳಿಕೆಯ ಪ್ರಕಾರ, ಬಂಧಿತ ಉಗ್ರಗಾಮಿ ಸಂಘಟನೆಯ ಸದಸ್ಯರು ವಿಚಾರಣೆಯ ಸಮಯದಲ್ಲಿ, ತಮ್ಮ ಸಂಘಟನೆಯ ಸಿಂಥೋಯಿಬಾ ಎಂಬ ವ್ಯಕ್ತಿಯ ಸೂಚನೆಯ ಮೇರೆಗೆ ತೌಬಲ್ ಜಿಲ್ಲೆಯ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಹಣ ಸುಲಿಗೆ ಮಾಡುತ್ತಿದ್ದೆವು ಎಂದು ಒಪ್ಪಿಕೊಂಡರು.
ಬಂಧಿತ ವ್ಯಕ್ತಿಗಳನ್ನು ಮತ್ತು ಅವರಿಂದ ವಶಪಡಿಸಿಕೊಂಡ ವಸ್ತುಗಳನ್ನು ಅಗತ್ಯ ಕಾನೂನು ಕ್ರಮಕ್ಕಾಗಿ ತೌಬಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಈ ನಡುವೆ, ಚುರಾಚಂದ್‌ಪುರ ಮತ್ತು ಚಂದೇಲ್ ಜಿಲ್ಲೆಗಳಲ್ಲಿ ಪ್ರತ್ಯೇಕ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 10 ಬಂದೂಕುಗಳು ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಂಡಿವೆ ಎಂದು ಮತ್ತೊಂದು ಪೊಲೀಸ್ ಹೇಳಿಕೆ ತಿಳಿಸಿದೆ.