ಹಾಸನ : ರಾಜ್ಯದಲ್ಲಿ ಧರ್ಮಸ್ಥಳದ ವಿಚಾರವನ್ನು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮಗೆ ತಮಗೆ ಅನುಕೂಲವಾಗುವಂತೆ ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿವೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಗಿಲೆ ಯೋಗೇಶ್ ತೀವ್ರ ಆರೋಪ ಹೊರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, “ಜನರಿಗೆ ತಪ್ಪು ಸಂದೇಶ ರವಾನಿಸಲು ಬಿಜೆಪಿ ವಿಷಯಾಂತರದ ಷಡ್ಯಂತ್ರ ರೂಪಿಸುತ್ತಿದೆ. ತಮ್ಮ ಹಿನ್ನಲೆ, ಭ್ರಷ್ಟಾಚಾರದ ವಿಚಾರಗಳನ್ನು ಮುಚ್ಚಿಹಾಕಲು ಧರ್ಮಸ್ಥಳದ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಡಾ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಬಗ್ಗೆ ಹಲವು ಆರೋಪಗಳು ಕೇಳಿಬಂದಿವೆ. ಆದರೆ ಅವುಗಳ ಸತ್ಯಾಸತ್ಯತೆ ನಿರ್ಧರಿಸುವ ಅಧಿಕಾರ ರಾಜಕೀಯ ಪಕ್ಷಗಳಿಗೆ ಇಲ್ಲ. ವಿಶೇಷ ತನಿಖಾ ದಳ (SIT) ತನಿಖೆ ನಡೆಸುತ್ತಿದೆ. ಅದರ ವರದಿಯಿಂದಲೇ ಸತ್ಯಾಂಶ ಬಹಿರಂಗವಾಗಲಿದೆ,” ಎಂದರು.
ಬಿಜೆಪಿಗೆ ಈ ವಿಷಯ ಜೀವಂತವಾಗಿರಬೇಕು. ಅದನ್ನು ಆಧರಿಸಿ ಮತಗಳ ಲೆಕ್ಕಾಚಾರ ಮಾಡಿಕೊಳ್ಳಬೇಕು ಎಂಬ ದುರಾಶೆಯಿಂದಲೂ ಧರ್ಮಸ್ಥಳದ ವಿಚಾರವನ್ನು ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಪ್ರಜ್ಞಾವಂತ ನಾಗರಿಕರು ಇದನ್ನು ವಿರೋಧಿಸಬೇಕು. ಧರ್ಮಸ್ಥಳದ ಬಗ್ಗೆ ನಮಗೂ ವಿಶೇಷ ಗೌರವ, ಭಕ್ತಿ ಇದೆ. ಹೆಗ್ಗಡೆ ಅವರ ಮೇಲೆ ಬಂದಿರುವ ಆರೋಪಗಳಿಂದ ಅವರು ಶೀಘ್ರವೇ ಮುಕ್ತರಾಗಬೇಕು ಎಂಬುದು ನಮ್ಮ ಹಾರೈಕೆ. ಆದರೆ ಬಿಜೆಪಿ ತನಿಖೆಯ ದಾರಿಯನ್ನು ತಪ್ಪಿಸುವ ಕೆಲಸ ಮಾಡುತ್ತಿದೆ. ಮಂಜುನಾಥಸ್ವಾಮಿ, ಅಣ್ಣಪ್ಪಸ್ವಾಮಿಯನ್ನು ನಾವು ರಕ್ಷಿಸುತ್ತೇವೆ ಎಂದು ಘೋಷಿಸುವ ಮೂಲಕ ತಮ್ಮನ್ನು ದೇವರ ಪರವಾಗಿ ನಿಲ್ಲಿಸಿಕೊಂಡಂತೆ ನಟಿಸುತ್ತಿದ್ದಾರೆ. ಇದು ಧರ್ಮವನ್ನು ರಾಜಕೀಯದ ಹಾದಿಯಲ್ಲಿ ಎಳೆಯುವ ಕೃತ್ಯ,” ಎಂದು ವ್ಯಂಗ್ಯವಾಡಿದರು.
ಬಿಜೆಪಿ ನೇತೃತ್ವದ ಧರ್ಮಯಾತ್ರೆಯನ್ನು ಟೀಕಿಸಿ, “ಅಧರ್ಮದ ಮೂಲಕ ನಡೆದುಕೊಂಡು ಧರ್ಮಯಾತ್ರೆ ಹೊರಟಿರುವವರಿಗೆ ನಾಚಿಕೆ ಆಗಬೇಕಿತ್ತು. ಶಿರಾಡಿ ಘಾಟ್ ರಸ್ತೆ ಕುಸಿದು ಹೋಗಿದೆ, ಜನ ಕಷ್ಟಪಡುತ್ತಿದ್ದಾರೆ. ಆದರೆ ಇವರು ಅದನ್ನು ಸರಿಪಡಿಸುವ ಬದಲು ಯಾತ್ರೆ ನಡೆಸುತ್ತಿದ್ದಾರೆ. ಯಾತ್ರೆ ಸಮಯದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಹೊರುವವರು ಯಾರು? ಮೊದಲು ತಮ್ಮ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿದರೆ, ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ, ದೇವರು ಅವರಿಗೂ ಆಶೀರ್ವಾದ ಮಾಡುತ್ತಾನೆ. ಅದನ್ನು ಬಿಟ್ಟು ತನಿಖೆ ನಡೆಯುತ್ತಿರುವ ಹಂತದಲ್ಲಿ ಜನರ ಭಾವನೆಗಳನ್ನು ಕದಡುವ ಯಾತ್ರೆ ನಡೆಸುವುದು ಸರಿಯಲ್ಲ,” ಎಂದು ವಾಗ್ದಾಳಿ ನಡೆಸಿದರು.
ಅವರು ಇನ್ನು ಮುಂದೆ, “ಸೌಜನ್ಯ ಹತ್ಯೆ ಪ್ರಕರಣದಲ್ಲಿ ಈ ಪಕ್ಷಗಳು ಎಷ್ಟು ಮಟ್ಟಿಗೆ ಆ ಕುಟುಂಬದ ಪರ ನ್ಯಾಯಕ್ಕಾಗಿ ಹೋರಾಡಿದವು? ಜನರ ನಿಜವಾದ ದುಃಖದ ಬಗ್ಗೆ ಯಾವುದೇ ಬದ್ಧತೆ ತೋರದ ಇವರು ಈಗ ಧರ್ಮಸ್ಥಳದ ಹೆಸರಿನಲ್ಲಿ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಇದು ಅನೈತಿಕ ಮತ್ತು ಖಂಡನೀಯ,” ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಪಂಕಜಾ, ಮಂಜುನಾಥ್, ಮಮತಾ ಹಾಗೂ ಹಲವರು ಉಪಸ್ಥಿತರಿದ್ದರು.
:::::::::::::: ::::::::::::::: ::::::::::::::::;;;