Friday, June 14, 2024

ಸತ್ಯ | ನ್ಯಾಯ |ಧರ್ಮ

ಕೋಮುವಾದಿ ಶೋ: ಟೈಮ್ಸ್ ನೌ ನವಭಾರತ್, ನ್ಯೂಸ್ 18 ಇಂಡಿಯಾ, ಆಜ್ ತಕ್‌ಗೆ ದಂಡ

ಬೆಂಗಳೂರು: ದ್ವೇಷ ಹರಡುವ ಮತ್ತು   ಕೋಮು ಸೌಹಾರ್ದತೆಯನ್ನು ಕೆಡಿಸುವ ಹಲವಾರು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿರುವ ಟಿವಿ ಚಾನೆಲ್‌ಗಳಿಗೆ ಈ ಕಾರ್ಯಕ್ರಮಗಳನ್ನು ತೆಗೆದುಹಾಕಲು ಮತ್ತು ದಂಡ ಪಾವತಿಸಲು ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (The News Broadcasting & Digital Standards Authority – NBDSA ) ಕರೆ ನೀಡಿದೆ. ಎನ್‌ಬಿಡಿಎಸ್‌ಎ ಪ್ರಸ್ತುತ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಎಕೆ ಸಿಕ್ರಿ ಅವರ ನೇತೃತ್ವದಲ್ಲಿದೆ.

ಟೈಮ್ಸ್ ನೌ ನವಭಾರತ್ ಗೆ 1 ಲಕ್ಷ ರೂಪಾಯಿ ದಂಡ ಹಾಗೂ ನ್ಯೂಸ್ 18 ಇಂಡಿಯಾಗೆ 50,000 ರೂಪಾಯಿ ದಂಡ ವಿಧಿಸಲಾಗಿದ್ದು, ಆಜ್ ತಕ್ ಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ಮೂರು ಚಾನೆಲ್‌ಗಳು ಕಾರ್ಯಕ್ರಮಗಳ ಆನ್‌ಲೈನ್ ಆವೃತ್ತಿಗಳನ್ನು ಏಳು ದಿನಗಳಲ್ಲಿ ತೆಗೆದುಹಾಕಲು ಆದೇಶ ನೀಡಲಾಗಿದೆ ಎಂದು ಲೈವ್‌ಲಾ ವರದಿ ಮಾಡಿದೆ .

ಕಾರ್ಯಕರ್ತ ಇಂದ್ರಜೀತ್ ಘೋರ್ಪಡೆ ಅವರು ಕೋಮು ಪ್ರಚೋದಕ ಟಿವಿ ಕಾರ್ಯಕ್ರಮಗಳ ವಿರುದ್ಧ ದೂರು ದಾಖಲಿಸಿದ ನಂತರ ಇದು ನಡೆದಿದೆ. ಟೈಮ್ಸ್ ನೌ ನವಭಾರತ್ ಮೆಗಾ ಟೈಮ್ಸ್ ಗುಂಪಿನ ಭಾಗವಾಗಿದ್ದು, ಆಂಕರ್ ಹಿಮಾಂಶು ದೀಕ್ಷಿತ್ ಅವರು ಮುಸ್ಲಿಮರನ್ನು ಗುರಿಯಾಗಿಸಿ ಮಾತನಾಡಿದ್ದಾರೆ ಮತ್ತು ಅಂತರ-ಧರ್ಮೀಯ ಸಂಬಂಧಗಳನ್ನು “ಲವ್ ಜಿಹಾದ್” ಎಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ.

ಮುಖೇಶ್ ಅಂಬಾನಿ ಒಡೆತನದ ನ್ಯೂಸ್ 18 ಇಂಡಿಯಾ ಪ್ರಸಾರ ಮಾಡಿರುವ ಮೂರು ಟಿವಿ ಶೋಗಳಿಗೆ ದಂಡ ವಿಧಿಸಲಾಗಿದ್ದು, ಅದರಲ್ಲಿ ಎರಡು ಶೋಗಳಲ್ಲಿ ಅಮನ್ ಚೋಪ್ರಾ ಮತ್ತು ಒಂದನ್ನು ಅಮಿಶ್ ದೇವಗನ್ ನಡೆಸಿಕೊಟ್ಟಿದ್ದಾರೆ. ಈ ಶೋಗಳಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು “ಲವ್ ಜಿಹಾದ್” ಎಂದು ಕರೆಯುವ ಮೂಲಕ ಕೋಮುವಾದ ಹರಡುವ ಪ್ರಯತ್ನ ಮಾಡಲಾಗಿದೆ.

ಇಂಡಿಯಾ ಟುಡೇ ಗ್ರೂಪ್‌ನ ಆಜ್ ತಕ್‌ನಲ್ಲಿ ಕೋಮು ಪ್ರಚೋದಕ ಶೋ ನಡೆಸಿರುವ ಆಂಕರ್ ಸುಧೀರ್ ಚೌಧರಿ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಚೌದರಿ ರಾಮನವಮಿ ಸಮಯದಲ್ಲಿ ನಡೆದ ಹಿಂಸಾಚಾರದ ವರದಿಯಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿದ್ದರು.

ದೂರುದಾರರು ಸುದ್ದಿಗೆ ಇರಬೇಕಾದ ನಿಷ್ಪಕ್ಷಪಾತ, ವಸ್ತುನಿಷ್ಠತೆ, ತಟಸ್ಥತೆ ಮತ್ತು ನಿಖರತೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಈ ಟಿವಿ ಚಾನೆಲ್‌ಗಳು ಉಲ್ಲಂಘಿಸಿರುವುದನ್ನು ಉಲ್ಲೇಖಿಸಿದ್ದಾರೆ. NBDSA ದ್ವೇಷದ ಭಾಷಣ ತಡೆಗಟ್ಟುವಿಕೆಗೆ ಸಂಬಂಧಿಸಿದ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಘಟನೆಗಳನ್ನು ವರದಿ ಮಾಡುವಲ್ಲಿ ಕೋಮುವಾದಿ ನಿರೂಪಣೆಗಳನ್ನು ನಿಯಂತ್ರಿಸುತ್ತದೆ.

“ಲವ್ ಜಿಹಾದ್” ಕುರಿತು ಟೈಮ್ಸ್ ನವಭಾರತ್ ಕಾರ್ಯಕ್ರಮದಲ್ಲಿ, “ಇಂಪ್ಯೂನ್ಡ್ ಬ್ರಾಡ್‌ಕಾಸ್ಟ್ ಅನ್ನು ಅವಲೋಕಿಸಿದಾಗ, ಪ್ರಸಾರದ ಪ್ರಾರಂಭದಲ್ಲಿಯೇ ನಿರ್ದಿಷ್ಟ ಸಮುದಾಯದ ಪುರುಷರು ಮತ್ತೊಂದು ಸಮುದಾಯದ ಮಹಿಳೆಯರಿಗೆ ಆಮಿಷ ಒಡ್ಡಿದ್ದಾರೆ ಎಂದು ಆಂಕರ್ ತೀರ್ಪು ಕೊಟ್ಟಿದ್ದಾನೆ. ತಮ್ಮ ಧಾರ್ಮಿಕ ಗುರುತನ್ನು ಮರೆಮಾಚಿ, ಅಂತಹ ಮಹಿಳೆಯರ ವಿರುದ್ಧ ಹಿಂಸಾಚಾರ ಅಥವಾ ಕೊಲೆಗಳನ್ನು ಮಾಡಿದ್ದಾರೆ ಹಾಗೂ ಲವ್ ಜಿಹಾದ್‌ಗೆ ಸಂಬಂಧಿಸಿದ ನಿರ್ದಿಷ್ಟ ಸಮುದಾಯದ ಮಹಿಳೆಯರ ಮೇಲೆ ಹಿಂಸೆ ಅಥವಾ ಕೊಲೆಗಳು ನಡೆದಿವೆ ಎಂದು ಆಂಕರ್‌ ಹೇಳಿದ್ದಾನೆ,” ಎಂದು NBDSA ತಿಳಿಸಿದೆ.

“ಇದು ಆಂಕರ್‌ನಿಂದ ಕೇಳಿದ ಪ್ರಶ್ನೆಗಳು ಮತ್ತು ಆಕ್ಷೇಪಾರ್ಹ ಶೋನಲ್ಲಿ ನೀಡಿದ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಅಂತಹ ಆಪಾದಿತ ಘಟನೆಗಳಿಗೆ ಕೋಮುವಾದಿ ದೃಷ್ಟಿಕೋನವನ್ನು ನೀಡಲಾಗುತ್ತಿದೆ ಮತ್ತು ಅಪರಾಧಿ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆಯರ ಮೇಲಿನ ಆಯ್ದ ದೌರ್ಜನ್ಯದ ಪ್ರಕರಣಗಳ ಬಗ್ಗೆ ಕೆಲವು ಪ್ಯಾನೆಲಿಸ್ಟ್‌ಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿದಾಗ, ಆಂಕರ್ ಕಿರುಚಾಡುತ್ತಾ ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಲಿಲ್ಲ.,” ಎಂದು NBDSA ತೀರ್ಪು ನೀಡಿದೆ.

“ಪ್ರತಿಯೊಬ್ಬ ನಾಗರಿಕನು, ಯಾವ ಧರ್ಮದವನಾಗಿದ್ದರೂ, ಅವನು/ಅವಳು ಯಾವ ಧರ್ಮಕ್ಕೆ ಸೇರಿದ್ದರೂ, ಅವನ/ಅವಳ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಹೊಂದಿರುತ್ತಾನೆ. ಹಿಂದೂ ಹುಡುಗಿ ಬೇರೆ ಧರ್ಮದ ಹುಡುಗನನ್ನು ಮದುವೆಯಾದ ಮಾತ್ರಕ್ಕೆ ಅಂತಹ ಹಿಂದೂ ಹುಡುಗಿಯನ್ನು ವಂಚಿಸಲಾಗಿದೆ ಅಥವಾ ಮದುವೆಗೆ ಒತ್ತಾಯಿಸಲಾಗಿದೆ ಎಂದು ಸಾಬೀತು ಮಾಡದ ಹೊರತು ಲವ್ ಜಿಹಾದ್‌ ಆಗುವುದಿಲ್ಲ. ಇದಲ್ಲದೆ, ಇಂತಹ ಬಲವಂತದ ವಿವಾಹಗಳ ಕೆಲವು ಘಟನೆಗಳನ್ನು ಬಳಸಿ ಇಡೀ ಸಮುದಾಯವನ್ನು ಬ್ರ್ಯಾಂಡ್ ಮಾಡಲು ಸಾಧ್ಯವಿಲ್ಲ. ಹೀಗಾಗಿ, “ಲವ್ ತೋ ಬಹಾನಾ ಹೇ … ಹಿಂದೂ ಬೇಟಿಯಾಂ ನಿಶಾನ ಹೈಂ ” ಜಿಹಾದಿಯೋಂ ಸೇ ಬೇಟಿ ಬಚಾವೋ” ಎಂಬಂತಹ ಟಿಕ್ಕರ್‌ಗಳೊಂದಿಗೆ ಘಟನೆಗಳನ್ನು ತಳುಕುಹಾಕುವುದು ಸೂಕ್ತವಲ್ಲ.”

“ಲವ್ ಜಿಹಾದ್” ಎಂಬ ಪದವನ್ನು “ಮುಂದೆ ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ಗಂಭೀರ ಆತ್ಮಾವಲೋಕನದೊಂದಿಗೆ ಬಳಸಬೇಕು, ಧಾರ್ಮಿಕ ಸ್ಟೀರಿಯೊಟೈಪಿಂಗ್ ರಾಷ್ಟ್ರದ ಜಾತ್ಯತೀತ ಸಂರಚನೆಯನ್ನು ನಾಶಪಡಿಸುತ್ತದೆ” ಎಂದು NBDSA ಹೇಳಿದೆ.

ಫೆಬ್ರವರಿ 4, 2020 ರಂದು, ಗೃಹ ವ್ಯವಹಾರಗಳ ಸಚಿವಾಲಯವು ಸಂಸತ್ತಿಗೆ ಲಿಖಿತ ಪ್ರತಿಕ್ರಿಯೆಯಲ್ಲಿ, ಲವ್ ಜಿಹಾದ್’ ಪದವನ್ನು ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ ಎಂದು ಹೇಳಿದೆ. ಲವ್ ಜಿಹಾದ್‌ನಂತಹ ಯಾವುದೇ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ ಎಂದು ಉತ್ತರಿಸಿತ್ತು.

“ಸಂವಿಧಾನದ 25 ನೇ ವಿಧಿಯು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆಗೆ ಒಳಪಟ್ಟು ಧರ್ಮವನ್ನು ಪ್ರತಿಪಾದಿಸಲು, ಪಾಲಿಸಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ್ಯವನ್ನು ನೀಡುತ್ತದೆ. ಕೇರಳ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಈ ದೃಷ್ಟಿಕೋನವನ್ನು ಎತ್ತಿ ಹಿಡಿದಿವೆ. ಅಂತರ್-ಧರ್ಮೀಯ ವಿವಾಹಗಳ ಕೇರಳದ ಎರಡು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಮಾಡಿದೆ,” ಎಂದು ಕೇಂದ್ರ ಸಚಿವಾಲಯ ಹೇಳಿದೆ.

ಭಾರತೀಯ ಟಿವಿ ಸುದ್ದಿ ವಾಹಿನಿಗಳು ದ್ವೇಷವನ್ನು ಹರಡುತ್ತಿರುವುದು ಕೆಲವು ವರ್ಷಗಳಿಂದ ನಡೆಯುತ್ತಿರುವ ಕಳವಳಕಾರಿ ಸಂಗತಿಯಾಗಿದೆ. ಸುಪ್ರೀಂ ಕೋರ್ಟ್ 2022 ರಲ್ಲಿ, ಭಾರತೀಯ ಮಾಧ್ಯಮಗಳಲ್ಲಿ ದ್ವೇಷ ಹರಡುವ ಬಗ್ಗೆ ವಿಚಾರಣೆ ನಡೆಸುವಾಗ, “ದ್ವೇಷವು TRP ತರುತ್ತದೆ, ಲಾಭವನ್ನು ಹೆಚ್ಚಿಸುತ್ತದೆ,” ಎಂದು ಒಬ್ಬರು ನ್ಯಾಯಾಧೀಶರು ಹೇಳಿದ್ದರು.

“ಇದು ಇಡೀ ಸಮುದಾಯವನ್ನು ಗುರಿಯಾಗಿಸುವ ಮೂಲಕ ಈ ಘಟನೆಗಳನ್ನು ಸಾಮಾನ್ಯೀಕರಿಸಲಾಗಿದೆ. ಇದು ನೀತಿ ಸಂಹಿತೆ ಮತ್ತು ಬ್ರಾಡ್ಕಾಸ್ಟಿಂಗ್ ಮಾನದಂಡಗಳ ಅಡಿಯಲ್ಲಿ ಬರುವ ನಿಷ್ಪಕ್ಷಪಾತ, ವಸ್ತುನಿಷ್ಠತೆ ಮತ್ತು ತಟಸ್ಥತೆಯ ತತ್ವಗಳ ಉಲ್ಲಂಘನೆಯಾಗಿದೆ. ಮತ್ತು ವರದಿಯಲ್ಲಿರುವ ನಿರ್ದಿಷ್ಟ ಮಾರ್ಗಸೂಚಿಗಳು ಜನಾಂಗೀಯ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಸಂಬಂಧಿಸಿವೆ. ಆಕ್ಷೇಪಾರ್ಹ ಕಾರ್ಯಕ್ರಮ ಪ್ರಸಾರದಲ್ಲಿ, ಆಂಕರ್‌ ನಡೆಸಿರುವ ಚರ್ಚೆಗಳಲ್ಲಿ ಆಂಕರ್‌ಗಳಿಗೆ ಸಂಬಂಧಿಸಿದ ನಿರ್ದಿಷ್ಟ ಮಾರ್ಗಸೂಚಿಗಳ ಷರತ್ತು (ಎಫ್) ಮತ್ತು (ಎಚ್) ಅನ್ನು ಉಲ್ಲಂಘಿಸಲಾಗಿದೆ,” ಎಂದು  ಎನ್‌ಬಿಡಿಎಸ್‌ಎ ತನ್ನ ಆದೇಶದಲ್ಲಿ ತಿಳಿಸಿದೆ.

ಮಾರ್ಚ್ 2, 2023 ರಂದು, NBDSA ಮೂರು ಟಿವಿ ಸುದ್ದಿ ವಾಹಿನಿಗಳಿಗೆ ಅವು ಪ್ರಸಾರ ಮಾಡಿರುವ ಕಾರ್ಯಕ್ರಮಗಳನ್ನು ತೆಗೆದುಹಾಕಲು ಆದೇಶಿಸಿತ್ತು. ಅವರಲ್ಲಿ ನ್ಯೂಸ್ 18 ಇಂಡಿಯಾ ಮತ್ತು ಟೈಮ್ಸ್ ನೌ, ಜೀ ಟಿವಿ ಹೊರತುಪಡಿಸಿ ಉಳಿದಂತೆ ಮೂರು ಅಪರಾಧಿಗಳು ಮತ್ತೆ ತಮ್ಮ ಅಪರಾಧವನ್ನು ಮುಂದುವರಿಸಿದ್ದಾರೆ. ನೀತಿ ಸಂಹಿತೆ ಮತ್ತು ಬ್ರಾಡ್‌ಕಾಸ್ಟಿಂಗ್ ಮಾನದಂಡಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಅವರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಯೂಟ್ಯೂಬ್‌ನಿಂದ ಅವರು ಪ್ರಸಾರ ಮಾಡಿದ ಏಳು ಕಾರ್ಯಕ್ರಮಗಳನ್ನು ತೆಗೆದುಹಾಕಲು ಆದೇಶ ನೀಡಲಾಗಿತ್ತು.

ನ್ಯೂಸ್ ಬ್ರಾಡ್‌ಕಾಸ್ಟರ್ಸ್ & ಡಿಜಿಟಲ್ ಅಸೋಸಿಯೇಷನ್ ​​(ಎನ್‌ಬಿಡಿಎ) [ಹಿಂದೆ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ ​​(ಎನ್‌ಬಿಎ) ಎಂದು ಕರೆಯಲಾಗುತ್ತಿತ್ತು] ಒಂದು ಸರಕಾರೇತರ ಸಂಸ್ಥೆ. ಇದು ಖಾಸಗಿ ದೂರದರ್ಶನ ಸುದ್ದಿ, ಅವುಗಳ ವ್ಯವಹಾರಗಳು ಮತ್ತು ಡಿಜಿಟಲ್ ಮಾಧ್ಯಮಗಳನ್ನು ಪ್ರತಿನಿಧಿಸುತ್ತದೆ. ಇದು ತನ್ನನ್ನು ತಾನು “ಭಾರತದಲ್ಲಿ ಸುದ್ದಿ, ಪ್ರಸ್ತುತ ವ್ಯವಹಾರಗಳು ಮತ್ತು ಡಿಜಿಟಲ್ ಪ್ರಸಾರಕರ ಸಾಮೂಹಿಕ ಧ್ವನಿ” ಎಂದು ಕರೆದುಕೊಂಡಿದೆ. ಇದು ಸಂಪೂರ್ಣವಾಗಿ ಅದರ ಸದಸ್ಯರಿಂದ ಸಿಗುವ ಧನಸಹಾಯದಿಂದ ನಡೆಯುವ ಸಂಸ್ಥೆಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು