Thursday, May 9, 2024

ಸತ್ಯ | ನ್ಯಾಯ |ಧರ್ಮ

ಆ ಕಾಲದ ಹೀರೊ ರಾಜೇಶ್‌ ಖನ್ನಾ ರಾಜಸ್ಥಾನದಲ್ಲಿ ಸಿಕ್ಕಾಗ – ತಿರುಗಾಡಿ ಬಂದೊ-8

ದೆಹಲಿ ಅಗ್ರಾ ಪ್ರಯಾಣದ ನಂತರ ಈ ಬಾರಿ ರೋಹಿತ್‌ ರಾಜಸ್ಥಾನದ ಜೈಪುರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ದೇಶದ ಅತಿ ವಿಸ್ತಾರವುಳ್ಳ ರಾಜ್ಯದ ಕುರಿತಾದ ಪ್ರವಾಸಿ ಅನುಭವಗಳನ್ನು ಈ ಬಾರಿಯ ತಿರುಗಾಡಿ ಬಂದೋ ಅಂಕಣದಲ್ಲಿ ಓದಿ

ನಮ್ಮ ಪಯಣ ಕಡೆಯ ಹಂತಕ್ಕೆ ಬಂದಿತ್ತು. ಕಡೆಯ ಊರುಗಳಲ್ಲೊಂದು ಜೈಪುರ. ವಾಸ್ತವದಲ್ಲಿ ಡೆಲ್ಲಿಯಿಂದಲೇ ನೇರ ಅಜ್ಮೇರ್ ಹೋಗಿ ಅಲ್ಲಿಯೇ ತಂಗಿ, ಪುಷ್ಕರ್ ಇತ್ಯಾದಿ ಓಡಿಯಾಡಿ ನಂತರ ಜೈಪುರಕ್ಕೆ ಬರುವ ಆಲೋಚನೆ ಇತ್ತು ಅಷ್ಟೇ ಅಲ್ಲ, ಟ್ರೇನ್ ಮತ್ತು ಗೆಸ್ಟ್ ಹೌಸ್ ಕೂಡ ಬುಕ್ ಮಾಡಿದ್ದೆವು. ಕಾರಣಾಂತರಗಳಿಂದ ಅವೆಲ್ಲ ರದ್ದಾಗಿ ಸದರಿ ಆಗ್ರಾ- ಜೈಪುರ್ ಯಾತ್ರೆ ಜೀವಪಡೆದಿತ್ತು.

ಟ್ರೇನು ಆಗ್ರಾ ಬಿಟ್ಟಾಗ ಇನ್ನೂ ಬೆಳಕಿತ್ತು. ಬಹುಶಃ ತಾಸರ್ಧ ತಾಸಿನಲ್ಲಿ ಯೂಪಿ ದಾಟಿ ರಾಜಸ್ತಾನ್ ಪ್ರವೇಶ ಮಾಡಿದ್ದೆವು. ನೀರ ಪಸೆ ಆರಿ ಒಣ ಭೂಮಿಯೇ ಕಣ್ಣು ಹಾಯಿಸುವಷ್ಟು ದೂರವೂ ಕಾಣುತ್ತಿತ್ತು. ಅಲ್ಲಲ್ಲೇ ಊರುಗಳು. ಎಲ್ಲ ಊರುಗಳ ಬಳಿಯೂ ಯಾವುದೋ ಬೆಳೆ ಬೆಳೆಯಲು ಉತ್ತು ಬಿತ್ತನೆಗೆ ರೆಡಿಯಾದಂತಿದ್ದ ಚೊಕ್ಕ ಹೊಲಗಳು. ಜೋಳ, ಬಾರ್ಲಿ, ಗೋಧಿ ಹೆಚ್ಚು ಬೆಳೆಯಲಾಗುತ್ತದೆ ಎಂದು ಗೂಗಲ್ ಹೇಳಿತು.

ವರ್ಷಗಳ ಹಿಂದೆ ಓದಿದ್ದ ಇಂದಿರಾ ಕೆನಾಲ್ ನೆನಪಾಯ್ತು. ಪಂಜಾಬಿನ ಬಾಕ್ರಾನಂಗಲ್ ಡ್ಯಾಮಿನಿಂದ 1600 ಕಿ.ಮೀ. ಕೆನಾಲ್ ಅಗೆದು ರಾಜಸ್ತಾನಕ್ಕೆ ನೀರು ತರಲಾಗಿದೆ. ಇದು ಜಗತ್ತಿನ ಅತಿ ಉದ್ದದ ಮಾನವನಿರ್ಮಿತ ಕಾಲುವೆಗಳಲ್ಲಿ ಒಂದಂತೆ. ಅದು ಜೈಪುರದಿಂದ ದೂರವಂತೆ.

ಯೂಪಿ ಮತ್ತು ರಾಜಸ್ತಾನ್ ಎರಡೂ ದೇಶದಲ್ಲಿ ನಂಬರ್ ಒನ್ ರಾಜ್ಯಗಳು. ಒಂದು ಜನಸಂಖ್ಯೆಯಲ್ಲಿ ಮತ್ತೊಂದು ಭೂಪ್ರದೇಶದಲ್ಲಿ. ಯೂಪಿ ಬರೋಬ್ಬರಿ 23 ಕೋಟಿ ಜನರಿಂದ ತುಂಬಿತುಳುಕಿದರೆ, ರಾಜಸ್ತಾನ ಮೂರೂವರೆ ಲಕ್ಷ ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಕರ್ನಾಟಕದ ಒಂದೂಮುಕ್ಕಾಲು ಪಟ್ಟು. ದೇಶದ ಶೇಕಡ 10ರಷ್ಟು ಭೂಪ್ರದೇಶ ಈ ರಾಜ್ಯದ್ದು. ಅದರಲ್ಲಿ ದೇಶದ ಏಕೈಕ ನಿಸರ್ಗ ನಿರ್ಮಿತ ಮರುಭೂಮಿಯೂ ಸೇರಿದೆ ಎನ್ನಿ. (ಮಾನವ ನಿರ್ಮಿತ ಮರುಭೂಮಿ‌ ಕರ್ನಾಟಕದಲ್ಲಿಯೇ ಇದೆಯಂತೆ. ಅಂತರ್ಜಲ ಕಮ್ಮಿಯಾಗಿ, ನೀರ ಬಳಕೆ ಹೆಚ್ಚಾಗಿ ಬೆಳೆ ಬೆಳೆಯಲು ಬಾರದ ಬಂಜರು ನೆಲ ಸೃಷ್ಟಿಯಾಗಿರುವುದು)

ರಾಜಸ್ತಾನದ ರಾಜಧಾನಿ ಜೈಪುರದಲ್ಲಿ ಇಳಿದಾಗ ಸುಮಾರು ಎಂಟುಗಂಟೆ. ವಸತಿ ವಿಚಾರದಲ್ಲಿ ಬಹಳಷ್ಟು ಆನ್ಲೈನ್ ಸಂಶೋಧನೆ ಟ್ರೇನಿನಲ್ಲೇ ನಡೆಸಿದ್ದರೂ‌ ಬುಕ್ ಮಾಡಿರಲಿಲ್ಲ. ಚಿತ್ರಕಥಾ ಎಂಬ ವಿಚಿತ್ರ ಹೆಸರಿನ ಹೊಟೆಲೊಂದರ ರಿವ್ಯೂಗಳು ಗಮನ ಸೆಳೆಯುವಂತಿದ್ದವು. ಗೆಳೆಯ ಚಿದಂಬರ ಹೋಟೆಲೊಂದರ ಹೆಸರು ಸೂಚಿಸಿದ್ದರೂ‌ ಅದರ ಆನ್ಲೈನ್ ಬುಕಿಂಗ್ ಸಿಗದ ಕಾರಣ ಕೈಬಿಟ್ಟೆವು. ಲಗ್ಗೇಜ್ ಇದ್ದ ಕಾರಣ ಎರಡು ಆಟೋ ಹಿಡಿದು ಹೊರಟೆವು. ಜೈಪುರ ರಾಜ್ಯವೊಂದರ ರಾಜಧಾನಿಯಾದರೂ ಅಷ್ಟೇನೂ ಜನಸಂದಣಿ ನಿಲ್ದಾಣದಲ್ಲಿ ಇರಲಿಲ್ಲ. ಹೊರಗೆ ಕೂಡ. ನನಗೆ ತ್ರಿವೇಂಡ್ರಂ ನೆನಪಾಯ್ತು. ಅದೂ ಕೂಡ ಕೇರಳದ ರಾಜಧಾನಿಯಾಗಿದ್ದರೂ ಅದೇ ರಾಜ್ಯದ ಇತರ ನಗರಗಳಿಗಿಂತ ವಿರಳ ಜನಸಂಖ್ಯೆಯ ನಗರ. ಆಟೋದವರು ಚಿತ್ರಕಥಾಗೆ ಕರೆದೊಯ್ಯುವಾಗ ಅವರ ಬ್ರೋಕರ್ ಗಿರಿಯಿಂದ ಬಚಾವಾಗಲು ಈಗಾಗಲೇ ನಮಗೆ ಹೋಟೆಲ್ ಬುಕಿಂಗ್ ಆಗಿದೆ ಎಂದೆವು. ಎಷ್ಟಕ್ಕೆಂದಾಗ ಆನ್ಲೈನ್ ರೇಟನ್ನೇ ಅರುಹಿದೆವು, ಅದಕ್ಕವರು ಅಷ್ಟೇಕೆ ಕೊಟ್ಟಿರಿ; ಅದಕ್ಕಿಂತ ಕಡಮೆಗೆ ಅದೇ ಹೋಟೆಲ್ ಕೊಡಿಸುತ್ತಿದ್ದೆವು ಎಂದರು! ಅವರಿಗೆ ಮನದಲ್ಲೇ ಥ್ಯಾಂಕ್ಸ್ ಹೇಳಿ ಅದನ್ನೇ ಹಿಡಿದು ದಿನೇಶ್ ಚೌಕಾಸಿ ಮಾಡಿ ಒಂದಷ್ಟು ಉಳಿಸಿದರು. ಮೂರು ದಿನಕ್ಕೆ ಎರಡು ರೂಮು ಹಿಡಿದು ಫ್ರೆಶ್ ಆಗಿ ಊಟಕ್ಕೆ ಹೊರಡೋ ಹೊತ್ತಿಗೆ ಹೊಟೆಲಿನವ ತಮ್ಮದೆ ರೆಸ್ಟುರಾ‌ ಟೆರೇಸಿನಲ್ಲಿರುವುದಾಗಿಯೂ, ಅಲ್ಲಿ ಮೇಕೆ ಬಿರಿಯಾನಿ ಫೇಮಸ್ಸೆಂದು ಆಸೆ ಹುಟ್ಟಿಸಿದ.

ಟೆರೇಸ್ ರೆಸ್ಟುರಾ ನಿಜವಾಗಿಯೂ ಚೆಂದವಿತ್ತು. ಹೊಟೆಲ್ ಕಟ್ಟಡ ಹಳತಾದರೂ ಚೆನ್ನಾಗಿ ಅಲಂಕರಿಸಿ ನೀಟಾಗಿ ಇಟ್ಟಿದ್ದರು. ಎರಡೂ ರೂಮುಗಳಿಗೂ ಪುಟ್ಟ ಬಾಲ್ಕನಿ ಕೂಡ ಇತ್ತು; ಆದರೆ ಎಸಿಗಳು ಪುರಾತನ ಕಾಲದವು. ಬಳಸದೆ ವಿಧಿ ಇರಲಿಲ್ಲ. ಪ್ರತೀ ಫ್ಲೋರಿನ ಗೋಡೆಗಳು ಮತ್ತು ರೂಮಿನ ಒಳಾವರಣ ಕೂಡ ಸುಂದರ ಚಿತ್ರಗಳು ಇಲ್ಲವೇ ಪೇಂಟಿಂಗ್‌ಗಳಿಂದ ಅಲಂಕೃತಗೊಂಡಿದ್ದವು.

ಮೆನು ಪಡೆದು ಬೆಲೆ ನೋಡಿ ಯಾಕೋ ಎಡವಟ್ಟೆನ್ನಿಸಿತು. ಮೂರು ಪೀಸ್ ಚಿಕನ್ ಇರುವ ಬಿರಿಯಾನಿಗೆ ಕೇವಲ 650!. ಕಾಸು ಉಳಿಸಲು ಒಂದು ಬೇಯಿಸಿದ ಮೊಟ್ಟೆ ಹೇಳಿದರೆ ಅದಕ್ಕೆ ಎಂಬತ್ತಂತೆ. ಬೇರೆಲ್ಲೋ ಹೋಗಿ‌ ಹುಡುಕಿ ತಿನ್ನುವಷ್ಟು ತಾಳ್ಮೆ ಇಲ್ಲದ ಕಾರಣ ಏನೋ ಒಂದಷ್ಟು ತಿಂದು ದಿನ ಮುಗಿಸಿದೆವು. ಮದ್ಯಾಹ್ನ ಆಗ್ರಾ ಬಿಡುವಾಗ ಬೇರೆ ಊಟಕ್ಕೆ  ಅವಕಾಶವಾಗಿರಲಿಲ್ಲ.

ಮಾರನೇ ದಿನ ಎಲ್ಲಿಗೆಲ್ಲ ಹೋಗುವುದು ಎಂಬ ಚರ್ಚೆ ಊಟದ ಟೇಬಲ್ಲಿನಲ್ಲೇ ನಡೆಯಲಾಗಿ, ಎರಡೂ ಕುಟುಂಬಗಳು ತಮತಮಗೆ ತೋಚಿದಂತೆ ತೋಚಿದ ರೂಪದಲ್ಲಿ ಸುತ್ತುವುದು ಎಂದು ಅಖೈರು ಮಾಡಿ ವಿಶ್ರಮಿಸಿದೆವು. ಮುಂಜಾನೆ ಹೊತ್ತಿಗೆ ಮತ್ತೆ ಎಲ್ಲರೂ ಕಲೆತೇ ದಿನ ಆರಂಭಿಸಿದೆವೆನ್ನಿ.

ಈ ನಡುವೆ ನಂಗೆ ಅಂದಕಾಲತ್ತಿಲ್ ಹೀರೋ ರಾಜೇಶ್ ಖನ್ನ ದರ್ಶನವಾಯ್ತು ಸಲೂನೊಂದರಲ್ಲಿ.

ರಾತ್ರಿ ಊಟ ಮುಗಿಸಿ ನಾನು ಎಟಿಮ್ ಹುಡುಕಿ, ದಿನೇಶ್ ಅವರ ಶ್ರೀಮತಿಯವರಿಗೆ ಮಾತ್ರೆ ಹುಡುಕಿ ಹೊರಬಿದ್ದೆವು. ನಂಗೆ ಎಟಿಎಮ್ ಸಿಗದಿದ್ದರೂ ಸಲೂನೊಂದು ಕಣ್ಣಿಗೆ ಬಿತ್ತು. ಇರೋ ಲಗ್ಗೇಜಿಗೆ ಹಡಪದ ಪೆಟ್ಟಿಗೆ ಕೂಡ ಏಕೆ ಸೇರಬೇಕು ಎಲ್ಲ ಊರಲ್ಲೂ ಸಲೂನು ಇರುತ್ತವೆಂದು ಹಾಗೇ ಬಂದಿದ್ದೆ. ಆಗ್ರಾದಲ್ಲಿ ಸಲೂನ್ ಸಂಶೋಧನೆ ಮಾಡಿ ಗೆಲ್ಲಲಾರದೆ ಕೈಚೆಲ್ಲಿದ್ದೆ. ಇಲ್ಲಿ ಸಲೂನು ಸಿಕ್ಕಿತು ಆದರೆ ಪರ್ಸಿನಲ್ಲಿ ನಯಾಪೈಸೆ ಕ್ಯಾಶ್ ಇಲ್ಲ. ಸಲೂನ್ ಅಜ್ಜನಿಗೆ ಕ್ಯಾಶ್ ಇಲ್ಲ ಫೋನ್ ಮೂಲಕ ಪೇ ಮಾಡುವೆ ಆಗಬಹುದೆ ಎಂದೆ. ಆಗಲಿ ಅನ್ತು. ಇನ್ಯಾರೋ ಗಿರಾಕಿ ಇದ್ದರು. ಅದೊಂದು ಹಳೇ ಕಟ್ಟಡ, ಅದರಲ್ಲೂ ಮೂಲೆ ಅರ್ಧಚಂದ್ರಾಕೃತಿಯ ಒಂದೇ ಸೀಟಿನ ಇಕ್ಕಟ್ಟಿನ ಸ್ಥಳ. ಗೋಡೆಯ ಮೇಲೆ ಹಳೇ ಕಾಲದ ಸಿನೆಮಾ ಹೀರೋ ಅವತಾರದ ಸ್ಮಾರ್ಟ್ ಹುಡುಗನ ಹಳೆಯ ಫೋಟೋ ಫ್ರೇಮುಗಳು. ಮತ್ತೆ ಮತ್ತೆ ನೋಡಿದ ಮೇಲೆ ಗುರುತಾಯ್ತು. ಅವೆಲ್ಲ ಅದೇ ತಾತನ ಯೌವನದ ಫೋಟೋಗಳು. ಅವಕ್ಕೆ ಕನಿಷ್ಟ ಅರ್ಧ ಶತಮಾನ ವಯಸ್ಸಾಗಿತ್ತು. ತಾತ ಏನೇನೊ ಹೇಳಲು ಯತ್ನಿಸಿದರೂ ನಾನು ಅರ್ಥ ಮಾಡಿಕೊಂಡು ಹ್ಞೂಂಗುಡುತ್ತಿದ್ದೆ. ಆಮೇಲೆ ಮಾತಿನ ನಡುವೆ ನಾನು ಕರ್ನಾಟಕದಿಂದ ಪ್ರವಾಸಕ್ಕೆ ಬಂದವನೆಂದು ಹೇಳಿದ ಮೇಲೆ ಇವನೊಂದಿಗೆ ಮಾತಾಡಿ ಪ್ರಯೋಜನವಿಲ್ಲವೆನಿಸಿ ಮಾತು ನಿಲುಗಡೆಗೆ ಬಂದವು ಅಷ್ಟು ಹೊತ್ತಿಗೆ ದಾಡಿ ಕೆಲಸವೂ ಪೂರೈಸಿತ್ತು. ಪೇಮೆಂಟ್ ಪಡೆಯಲು ತಾತ ಪಕ್ಕದ ಅಂಗಡಿಯವನಿಗೆ ಕೇಳಿದರೆ ಅವನು ಕೈಜಾಡಿಸಿಬಿಟ್ಟ. ಆಮೇಲೆ ಅಲ್ಲೇ ಪಾನೀಪೂರಿ ಮಾರುತ್ತಿದ್ದವ ಒಪ್ಪಿ ಹಣ ಪಡೆದ.

ಬೆಳಗ್ಗೆ ಹೊತ್ತಿಗೆ ಎರಡೂ ಕುಟುಂಬದವರೂ ತಾವು ನೋಡಬೇಕು ಎಂದುಕೊಂಡಿದ್ದ, ನೋಡಬಹುದಾದ ಸ್ಥಳಗಳ ಪಟ್ಟಿ ಮಾಡಿಕೊಂಡಿದ್ದೆವು; ಎರಡೂ ಸೇಮ್ ಟು ಸೇಮ್! ಒಟ್ಟಿಗೇ ತಿಂಡಿ ತಿಂದು ಅಲ್ಲಿಂದ ಆರಂಭಿಸುವುದೆಂದು ತೀರ್ಮಾನಿಸಿ ಸೌತ್ ರೆಸ್ಟುರಾವೊಂದಕ್ಕೆ ತಲುಪಿದೆವು. ದಿನೇಶ್ ಮಾತ್ರ ತಾವು ಲೋಕಲ್ ಫುಡ್  ಸವಿಯುವುದಾಗಿ‌ ಹೋದರು, ಉಳಿದೈವರು ಸೌತ್ ಪ್ರೀತಿಯ ಭಾರವನ್ನು ಹೊರಲಾರದೆ ಹೊತ್ತೆವು. ನಮ್ಮ ಯೋಜನೆ ಪ್ರಕಾರ ಮೊದಲು ಅಂಬರ್ (ಅಮೆರ್) ಫೋರ್ಟ್ ನಂತರ ಉಳಿದವೆಲ್ಲ. ಆನ್ಲೈನಲ್ಲಿ ಎರಡೆರಡು ಸಾರ್ತಿ ಟ್ಯಾಕ್ಸಿ ಬುಕ್ ಮಾಡಿದರೂ ಬರಲು ನಿರಾಕರಿಸಿದರು; ಕಾರಣ ನಾವು ಡ್ರಾಪ್‌ ಮಾತ್ರ ಬೇಕೆಂದು‌ ಕೇಳಿದೆವು. ಕೇವಲ ಡ್ರಾಪಿಗೆ ಬಂದರೆ ಲಾಸ್ ಆಗುವುದೆಂಬುದು ಅವರ‌ ದೂರು. ವಾತಾವರಣ ಹಿತವಾಗಿತ್ತು, ಮಳೆ ಮೋಡವಿದ್ದರೂ ಮಳೆ ಇಲ್ಲ, ಬಿಸಿಲಿನ ಹವಾ ಕೂಡ ಇಲ್ಲ. ಬಿಸಿಲ ನಾಡಿನಲ್ಲಿ ಗಿರಿಧಾಮದ ಅನುಭವ ಯಾರಿಗುಂಟು ಯಾರಿಗಿಲ್ಲ.

ಅರ್ಧ ತಾಸು ಸಮಯ ವ್ಯರ್ಥ ಮಾಡುವ ಹೊತ್ತಿಗೆ ನಮಗೆ ಅರ್ಥವಾದ ಸಂಗತಿ‌, ದಿನದ ಲೆಕ್ಕದ ಟ್ಯಾಕ್ಸಿ ಹಿಡಿದರಷ್ಟೇ ನಾವು ಅಂಬರ್ ಫೋರ್ಟ್ ತನಕ ಹೋಗಲು ಸಾಧ್ಯವೆಂಬುದು. ಕಡೆಗೆ ಒಬ್ಬ ಆಟೋವಾಲಾ ಟ್ರಾವೆಲ್ ಏಜೆಂಟನ ಬಳಿ ಕರೆದೊಯ್ದ. ಅಲ್ಲಿ ಒಂದು ಇನ್ನೋವಾವನ್ನು ದಿನದ ಓಡಾಟಕ್ಕೆ ಬುಕ್ ಮಾಡಿದೆವು. ಅವನೊಂದು ಬ್ರೋಷರ್ ಕೊಟ್ಟ. ಅದರಲ್ಲಿ ಎಂಟು ಜಾಗ ಗುರುತು‌ ಮಾಡಿದ್ದ. ವರ್ತ್ ಅನ್ನಿಸಿತು. ಈ ಎಂಟರ ಬಂಡವಾಳ  ಮದ್ಯಾಹ್ನದ ಹೊತ್ರಿಗೆ‌ ಅರ್ಥವಾಯ್ತು. ಡ್ರೈವರ್ ಹೊಂಟವನೇ ಅಲ್ಲಿ ಬೇಡ ಇಲ್ಲಿ ಹೋಗೋಣ ಎಂದು ಕ್ಯಾತೆ ಶುರು ಮಾಡಿದ; ನಾನು ನಂಗೆ ಗೊತ್ತಿರುವ ಸಮಸ್ತ ಹಿಂದಿಯನ್ನೂ ಬಳಸಿ “ನೋಡಣ್ಣ ನಾವು ಹೇಳಿದಲ್ಲಿ ಕರೆದೊಯ್ಯಿ, ಇಲ್ಲವೇ ಈಗಲೇ ಇಳಿಸಿಬಿಡು ಒಪ್ಪಂದ ರದ್ದು ಮಾಡುವ” ಎಂದೆ. ಅದೇ‌ ಕೊನೆ. ಮುಂದಿನ ಮೂರು ದಿನ ಅವ ನಮ್ಮೊಂದಿಗೇ ಅಂಟಿಕೊಂಡು ಕಳೆದ ದೂಸರಾ ಮಾತನಾಡದೆ.

ದಾರಿಯಲ್ಲೇ ಹವಾಮಹಲ್ ನೋಡಿಕೊಂಡುಬಿಡಿ ಎಂದ, ನಿರಾಕರಿಸಿ ಅಂಬರ್ ಕೋಟೆಗೆ ದೌಡಾಯಿಸಲು ಹೇಳಿದೆವು. ನಡುವೆ ಜಲ್ ಮಹಲ್ ಸಿಕ್ಕರೂ‌ ನಿಲ್ಲಲಿಲ್ಲ. ಅಂಬರ್ ಕೋಟೆ ಬೆಟ್ಟದ ಮೇಲಿದೆ. ಜೈಪುರ್ ದಾಟುತ್ತಿದ್ದಂತೇ ಬೆಟ್ಟ ಸಾಲಿನ ಕಡೆ ಪಯಣ. ಆಗ ಶುರುವಾದ ಮಳೆ ಅಂದು ಇಡೀ ದಿನ ಬಿಡದೆ ತೊಟ್ಟಿಕ್ಕುತ್ತಲೇ ಇತ್ತು. ಆ ಮಳೆಯ ರೌದ್ರಾವತಾರ ನೋಡಿ , ಟುಕ್ ಟುಕ್ (ಅಲ್ಲಿ ಆಟೋಗಳಿಗೆ ಹಾಗಂತಾರೆ) ಹಿಡಿದು ಎಲ್ಲ ಎಕ್ಸ್‌ಪ್ಲೋರ್‌ಮಾಡುವ ಉತ್ಸಾಹದಲ್ಲಿದ್ದ ದಿನೇಶ್ ಇದೇ ಸರಿಹೋಯ್ತು. ಹಾಗೆ ಬಂದಿದ್ದರೆ ಮಳೆ ಹೊಡೆತಕ್ಕೆ ಸಿದ್ಧತೆ ಇಲ್ಲದ ನಾವು ತೋಯ್ದು ತೊಪ್ಪೆಯಾಗಬೇಕಿತ್ತು‌ ಅಂದರು.

ಅಂಬರ್ ಕೋಟೆಯ ಕೆಳಗೇ ಒಂದು ಸರೋವರವಿದೆ. ಮೆಟ್ಟಿಲ ದಾರಿ ದೂರವಿಲ್ಲದಿದ್ದರೂ ಮೇಲೆ ಕೋಟೆಯ ಬಳಿ ಪಾರ್ಕಿಂಗ್ ಜಾಗಕ್ಕೆ ಹೋಗಲು ಮುಂದೆ ಹೋಗಿ ಸುತ್ತಿ ಬರಬೇಕು. ಕಲ್ಲುಗಳನ್ನು ನೆಲಕ್ಕೆ ಸಮನಾಗಿ ಹೂತು ಮಾಡಿದ ಅಚ್ಚುಕಟ್ಟಾದ ರಸ್ತೆ. ಮಳೆ‌ನೀರು ಇಡಿ ರಸ್ತೆ ತುಂಬ ಹರಿಯುತ್ತಿತ್ತು. ತುದಿ ಮುಟ್ಟುವ ಹೊತ್ತಿಗೆ ಮಳೆ ಕೊಂಚ ನಿಲುಗಡೆಗೆ ಬಂದಂತೆ‌ ಕಂಡಿತು.

ಜೈಪುರದ ಸ್ಮಾರಕಗಳ ಟಿಕೆಟ್ ಬಿಡಿಬಿಡಿಯಾಗಿ ಕೊಂಡರೆ ಕೊಂಚ ಜೇಬಿಗೆ ಭಾರ ಎನಿಸಿದರೂ ಕಾಂಬೊ ಟಿಕೆಟ್ ಲಭ್ಯವಿವೆ. ಅದರಂತೆ ನಾವು ಐದಾರು ಸ್ಥಳಗಳ ಪ್ರವೇಶಕ್ಕೆ ಒಮ್ಮೆಗೇ ಮತ್ತು ಒಂದೇ ಟಿಕೆಟ್ ಖರೀದಿಸಿದ್ದೆವು. ಗಣೇಶ ಗೇಟ್ ಮೂಲಕ ಪ್ರವೇಶ ಪಡೆದು ಒಳಹೊಕ್ಕೆವು. ನಿರ್ವಹಣೆ ಚೆನ್ನಾಗಿದೆ. ಅಮೆರ್ ಊರ ಬಳಿ ಇರುವ ಕಾರಣ ಅದೇ ಹೆಸರಿನಿಂದಲೂ ಅಂಬಾ (ದುರ್ಗಾ) ದೇವಿಯ ಕಾರಣಕ್ಕೆ ಅಂಬರ್ ಎಂತಲೂ ಕರೆಯಲಾಗುವುದಂತೆ. ಮೂಟ ಸರೋವರ ಒಂದೆಡೆಗಿದೆ. ಆ ಸರೋವರ ಅರಮನೆ ಬಳಿಯ ಬಾಲ್ಕನಿಯಿಂದ ಸುಂದರವಾಗಿ ಕಾಣುತ್ತದೆ. ಸರೋವರದ ನಡುವಿನ ತೋಟದ ಪ್ರಯೋಗ ಮುಘಲ್ ಹೂದೋಟದ ನಕಲೆಂದೂ, ಅಯಶಸ್ವಿಯೆಂದೂ ಗೈಡ್ ಒಬ್ಬ ಯಾರಿಗೊ ಹೇಳುತ್ತಿದ್ದುದು ಆಯಾಚಿತವಾಗಿ ಕಿವಿಗೆ ಬಿತ್ತು. ಅದೇ ಬಾಲ್ಕನಿಯಲ್ಲಿ ಇಣುಕಿ ಕೋಟೆಯ ಕೆಳಗಿನ ದಾರಿ ನೋಡುವಾಗ ಸಾಲಾಗಿ ಆನೆಗಳು ತೆರಳುತ್ತಿದ್ದುದು ಕಂಡಿತು. ಪ್ರವಾಸೋದ್ಯಮ ರಾಜಸ್ತಾನದ ಆದಾಯದ ಮುಖ್ಯ ಮೂಲಗಳಲ್ಲೊಂದು ಎಂದು ಕಾಣುತ್ತದೆ. ಆನೆ ಸವಾರಿ ಮತ್ತು ಅವುಗಳ ಸಾಕಾಣಿಕೆಯ ಏರುಪೇರಿನ ಬಗ್ಗೆ ಹಲವು ದೂರುಗಳಿವೆಯಂತೆ.‌ ಮಳೆಯ ಕಾರಣ ಅರಮನೆ ಅಷ್ಟೇನೂ ಝಗಮಗಿಸಿದಂತೆ ಕಾಣುತ್ತಿರಲಿಲ್ಲ. ಬಿಸಿಲಲ್ಲೇ ಹೆಚ್ಚು ಹೊಳಪೆಂದು ಕಾಣುತ್ತದೆ. ಅರಮನೆ ಒಳಹೊಕ್ಕರೆ ಎಡಕ್ಕೆ ಶೀಶ್ ಮಹಲ್ ಇದೆ. ಬಹುತೇಕ ಗಾಜಿನ ಚೂರು (ಕನ್ನಡಿ)ಗಳಿಂದ ಅಲಂಕೃತವಾದ ಅದು ಆಕರ್ಷಕವಾಗಿದೆ. ಗಾಜಿನ ಚೂರುಗಳಲ್ಲಿ ಕಾಣುವ ತಮ್ಮ ಸೆಲ್ಫಿ ಬಿಂಬವನ್ನು ಹಲವು ಪ್ರವಾಸಿಗರು ಸೆರೆಹಿಡಿದುಕೊಳ್ಳುತ್ತಿದ್ದರು.

ಇಲ್ಲಿನ ಬಹುತೇಕ ರಚನೆಗಳ ಮೇಲೆ ಮುಘಲ್ ವಾಸ್ತುಶಿಲ್ಪದ ಪ್ರಭಾವವಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಅದೂ ಅಲ್ಲದೆ ಇಲ್ಲಿನ ದಿವಾನ್ ಇ ಆಮ್ ಮತ್ತು ದಿವಾನ್ ಇ ಖಾಸ್ ಕೂಡ ಇದನ್ನೇ ಪುಷ್ಠೀಕರಿಸುತ್ತವೆ.

ಜೈಗಡ್ ಕೋಟೆ ಕೂಡ ಇದೇ ಕೋಟೆಗೆ ಹೊಂದಿಕೊಂಡಂತಿದೆ. ಎರಡೂ ಸೇರಿ ಕಿ.ಮೀ. ಗಟ್ಟಲೆ ಕೋಟೆ ಅರಾವಳಿ ಬೆಟ್ಟಸಾಲನ್ನು ಅಲಂಕರಿಸಿವೆ. ಜೈಗಡ್ ಕೋಟೆಯನ್ನು ಒಂದುವೇಳೆ ಶತ್ರುಗಳಿಂದ ರಾಜಪರಿವಾರ ಪಾರಾಗುವ ಸಂದರ್ಭಕ್ಕೆಂದು ಇದಕ್ಕೆ ಸೇರಿಸಲಾಗಿತ್ತು ಎನ್ನಲಾಗುತ್ತದೆ. 1727ರಲ್ಲಿ ಎರಡನೇ ಸವಾಯಿ ಜೈಸಿಂಗ್ ರಾಜಧಾನಿಯನ್ನು ಜೈಪುರಕ್ಕೆ ವರ್ಗಾಯಿಸುವವರೆಗೆ ಇದುವೇ ರಾಜಧಾನಿಯಂತೆ. ಕೋಟೆ ಮೊದಲು ನಿರ್ಮಾಣವಾದ್ದು ರಾಜಾ ಮಾನ್ ಸಿಂಗ್ ಕಾಲದಲ್ಲಂತೆ. ಸುಖ್ ನಿವಾಸ್ ಎಂಬ ಮತ್ತೊಂದು ರಚನೆ ಇದ್ದು ಅಲ್ಲಿ ಬಿರುಬಿಸಿಲಲ್ಲೂ ತಂಪಾದ ಗಾಳಿ ಬೀಸುವ ವ್ಯವಸ್ಥೆ ಮಾಡಿದ್ದರಂತೆ. ಎಲ್ಲವನ್ನೂ ಸುತ್ತಾಡಿ ಒಂದೆರಡು ಟನೆಲ್ ಮಾದರಿಯ ದಾರಿಗಳಲ್ಲಿ ಕೂಡ ಸಾಗಿ‌ ಬರುವ ದಾರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಒಂದಷ್ಟು ಅಂಗಡಿಗಳೂ ಸಿಕ್ಕವು.

ರಾಜಸ್ತಾನದ ಎಲ್ಲ ಕಡೆಯೂ ಕಾಣುವ ಒಂದು ಸಾಮನ್ಯ ಸಂಗತಿ ಸಂಗೀತ‌,ನೃತ್ಯ ಮತ್ತು ಬೊಂಬೆ ನಾಟಕ ಕಲೆಗಳದ್ದು. ಅಂಬರ್ ಕೋಟೆಯ ಹೊರಬರುವ ಮೆಟ್ಟಿಲ ಮೇಲೆ ಜೋರು ಮಳೆಯ ನಡುವೆಯೂ ಹಲವು‌ ಕಲಾವಿದರು ತಮ್ಮ ಪಾಡಿಗೆ ತನ್ಮಯರಾಗಿ ತಮ್ಮ ಸಂಗೀತ ವಾದ್ಯ ನುಡಿಸುತ್ತಿದ್ದರು. ಇಂಥದೇ ದೃಶ್ಯವನ್ನು ಇನ್ನೂ ಹಲವೆಡೆ ಕಂಡೆವು.

ಮಿಸ್ ಆದ ಪನ್ನಾ ಮೀನಾ ಕ ಕುಂಡ್.

ಜೋರು ಮಳೆಯ ಅವಸರದಲ್ಲಿ ಪನ್ನಾ ಮೀನಾ ಕಾ ಕುಂಡ್ ಬಳಿಯೇ ಮುಂದೆ ಹೋದೆವು. ನಂತರ ಡ್ರೈವರಣ್ಣ ಈಗ ಅಲ್ಲಿಗೆ ಹೋಗಬೇಕೆಂದರೆ ಮತ್ತೆ ಹತ್ತನ್ನೆರಡು ಕಿ.ಮೀ. ಹಿಂದೆ ಹೋಗಬೇಕು ಎಂದ. ನಮಗೆ ಒಂದೇ ದಿನದಲ್ಲಿ ಜೈಪುರದ ಇನ್ನೂ ಹಲವು ಜಾಗಗಳ ದರ್ಶನ ಆಗಬೇಕಿದ್ದರಿಂದ ಒತ್ತಾಯಿಸದೆ ಸುಮ್ಮನಾದೆವು. ಈ ಕುಂಡ ನಮ್ಮ ಹಂಪಿಯ ಕಲ್ಲು ಬಾವಿಯಂತಿದೆ (ಗೂಗಲಲ್ಲಿ ಕಂಡದ್ದು)

ಅಂಬರ್ ಕೋಟೆಯಿಂದ ತಿರುಗಿ ಬರುವ ದಾರಿಯಲ್ಲಿ ಜಲ್ ಮಹಲ್ ಬಳಿ ನಿಂತೆವು. ಆ ಹೊತ್ತಿಗೆ ಮಳೆಯೂ ನಿಲುಗಡೆಗೆ ಬಂದಿತ್ತು. ಮನ್ ಸಾಗರ್ ಸರೋವರದ ನಡುವೆ ತೇಲುತ್ತಿರುವಂತೆ ಕಾಣುವ ಇದು ನಿರ್ಮಾಣವಾದ್ದು 1699ರಲ್ಲಿಯಂತೆ. ನಂತರ ಹಲವು ಸಾರ್ತಿ ಪುನರುಜ್ಜೀವನಗೊಂಡಿದೆಯಂತೆ. ಒಟ್ಟು ಐದು ಮಹಡಿಗಳ ಕಟ್ಟಡದಲ್ಲಿ ಸಧ್ಯ ಕಾಣುವುದು ಒಂದು/ ಇಲ್ಲವೆ ಎರಡು ಮಹಡಿಗಳು ಮಾತ್ರ. ಇದರ ಒಳಾಂಗಣ ಮತ್ತು ಸಮೀಪ ದರ್ಶನಕ್ಕೆ ದೋಣಿ ವ್ಯವಸ್ಥೆ ಇದೆಯಂತೆ. ಸಧ್ಯ ನಾವು ಹೋದಾಗ ಅಂತ ವ್ಯವಸ್ಥೆ‌ ಇದ್ದಂತೇನೂ ಕಾಣಲಿಲ್ಲ‌. ಜಲ್ ಮಹಲ್ ನ ಒಳಂಗಣ‌‌ ಮತ್ತು ಮೇಲ್ಚಾವಣಿಯ ತೋಟದ ಇಮೇಜುಗಳು ಅಂತರ್ಜಾಲದಲ್ಲಿ ಕಾಣಸಿಗುತ್ತವೆ.

ಜಲ್ ಮಹಲ್ ಅನ್ನು ಹಿನ್ನೆಲೆಯಾಗಿರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಅಭಿಮಾನಿಗಳ ನೂಕುನುಗ್ಗಲೇ ಇತ್ತು‌. ಜೊತೆಗೆ ಸಾಂಪ್ರದಾಯಿಕ ರಾಜಸ್ಥಾನಿ ವೇಷಭೂಷಣ ಬೇರೆ ಬಾಡಿಗೆಗೆ ಲಭ್ಯ. ಅಂತೂ ಇಲ್ಲಿ ನಮ್ಮ ತಂಡದ ಭಾರೀ ಫೋಟೋ ಸೆಷನ್ ಜರುಗಿತು.

ರೋಹಿತ್‌ ಅಗಸರಹಳ್ಳಿ

ಹಾಸನದ ನಿವಾಸಿಯಾದ ಇವರು ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.

Related Articles

ಇತ್ತೀಚಿನ ಸುದ್ದಿಗಳು