ತಿರುಮಲ ತಿರುಪತಿ ದೇವಸ್ಥಾನದ (TTD) ಲಡ್ಡು ಪ್ರಸಾದ ತಯಾರಿಕೆಗೆ ಬಳಸುತ್ತಿದ್ದ ತುಪ್ಪದ ಕಲಬೆರಕೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ED), ತುಪ್ಪದಲ್ಲಿ ಪ್ರಾಣಿಜನ್ಯ ಕೊಬ್ಬು (Animal fat) ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಬದಲಾಗಿ ಸಂಸ್ಕರಿಸಿದ ಪಾಮ್ ಆಯಿಲ್ ಮತ್ತು ವಿವಿಧ ರಾಸಾಯನಿಕಗಳನ್ನು ಬಳಸಿ ನಕಲಿ ಹಾಗೂ ಸಿಂಥೆಟಿಕ್ ತುಪ್ಪವನ್ನು ತಯಾರಿಸಲಾಗಿತ್ತು ಎಂದು ಇಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೃತಿ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಪ್ರವರ್ತಕ ಕೈಲಾಶ್ ಚಂದ್ ಮಂಗ್ಲಾ ಎಂಬಾತನನ್ನು ಇಡಿಯ ಹೈದರಾಬಾದ್ ವಲಯ ಕಚೇರಿ ಸೆಪ್ಟೆಂಬರ್ 17ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಬಂಧಿಸಿದ್ದು, ವಿಶಾಖಪಟ್ಟಣದ ವಿಶೇಷ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ತನಿಖೆಯ ಪ್ರಕಾರ, ‘ಅಗ್ಮಾರ್ಕ್ ಸ್ಪೆಷಲ್ ಗ್ರೇಡ್ ಹಸುವಿನ ತುಪ್ಪ’ ಹೆಸರಿನಲ್ಲಿ ಟಿಟಿಡಿಗೆ ಪೂರೈಸಲಾದ ತುಪ್ಪವನ್ನು ಸಂಸ್ಕರಿಸಿದ ಪಾಮ್ ಆಯಿಲ್, ಪಾಮ್ ಕರ್ನಲ್ ಆಯಿಲ್, ಪಾಮೋಲಿನ್ ಹಾಗೂ MG-90, ಮೊನೊಗ್ಲಿಸರೈಡ್ಸ್, ಮೈವಾಸೆಟ್ ಸಾಫ್ಟ್ 400 ಮತ್ತು ಅಸಿಟಿಕ್ ಆಸಿಡ್ ಎಸ್ಟರ್ ಸೇರಿದಂತೆ ಹಲವು ರಾಸಾಯನಿಕಗಳನ್ನು ಮಿಶ್ರಣ ಮಾಡಿ ಕೃತಕವಾಗಿ ತಯಾರಿಸಲಾಗಿತ್ತು. 2019 ರಿಂದ 2024ರ ನಡುವೆ ಟಿಟಿಡಿಗೆ ಸುಮಾರು 230 ಕೋಟಿ ರೂಪಾಯಿ ಮೌಲ್ಯದ ನಕಲಿ ತುಪ್ಪ ಪೂರೈಕೆಯಾಗಿದ್ದು, ಅದರಲ್ಲಿ ಸುಮಾರು 96 ಕೋಟಿ ರೂ. ಮೌಲ್ಯದ ಕೃತಕ ತುಪ್ಪವನ್ನು ಮಂಗ್ಲಾ ತನ್ನ ಕಾರ್ಖಾನೆಯಲ್ಲಿ ತಯಾರಿಸಿ ಇತರ ಡೈರಿ ಸಂಸ್ಥೆಗಳ ಮುಖಾಂತರ ಸರಬರಾಜು ಮಾಡಿದ್ದ ಎಂದು ಆರೋಪಿಸಲಾಗಿದೆ.
2024ರ ಸೆಪ್ಟೆಂಬರ್‌ನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ಗೋಮಾಂಸದ ಕೊಬ್ಬು ಮತ್ತು ಮೀನಿನ ಎಣ್ಣೆ ಮಿಶ್ರಿತ ತುಪ್ಪ ಬಳಸಲಾಗಿತ್ತು ಎಂದು ಆರೋಪಿಸಿದ್ದು ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಆದರೆ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ (SIT) ಈ ಹಿಂದೆಯೇ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿಯೂ ಪ್ರಾಣಿ ಕೊಬ್ಬಿನ ಅಂಶ ಸಾಬೀತಾಗಿರಲಿಲ್ಲ. ಪ್ರಸ್ತುತ ಇಡಿ ತನಿಖೆಯೂ ಸಹ ಇದು ಪ್ರಾಣಿ ಕೊಬ್ಬಿನ ಕಲಬೆರಕೆಯಲ್ಲ, ಬದಲಾಗಿ ಪಾಮ್ ಆಯಿಲ್ ಹಾಗೂ ರಾಸಾಯನಿಕಗಳನ್ನು ಬಳಸಿ ನಡೆಸಲಾದ ಬೃಹತ್ ಆರ್ಥಿಕ ವಂಚನೆ ಮತ್ತು ಸಿಂಥೆಟಿಕ್ ತುಪ್ಪದ ಹಗರಣ ಎಂಬುದನ್ನು ಪುಷ್ಟೀಕರಿಸಿದೆ.
