ಅಜಯ್ ಪಾಲ್ ಶರ್ಮಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಎರಡನೇ ಹಂತದ ಮತದಾನಕ್ಕೆ ಎಲ್ಲವೂ ಸಿದ್ಧವಾಗಿದೆ. ಈ ನಡುವೆ ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ಕ್ಷೇತ್ರದಲ್ಲಿ ಹಲವೆಡೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಸ್ಥಳೀಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ಮತ್ತು ಕಾರ್ಯಕರ್ತರು ಮತದಾರರನ್ನು ಬೆದರಿಸುತ್ತಿದ್ದಾರೆ ಎಂಬ ಮಾಹಿತಿ ಚುನಾವಣಾ ಅಧಿಕಾರಿಗಳಿಗೆ ದೊರೆತಿದೆ. ಇದರಿಂದಾಗಿ ಅಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ, ಮತದಾರರನ್ನು ಬೆದರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿ ಬೆದರಿಸುತ್ತಿದ್ದಾರೆ ಎಂದು ಟಿಎಂಸಿ ನಾಯಕರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್, ಐಪಿಎಸ್ ಅಜಯ್ ಪಾಲ್ ಶರ್ಮಾ ಅವರನ್ನು ಉದ್ದೇಶಿಸಿ, ‘ನೀನು ಸಿಂಗಂ ಆದರೆ ನಾನು ಪುಷ್ಪ’ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಮೂಲದ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ 2011ನೇ ಬ್ಯಾಚ್‌ನವರಾಗಿದ್ದು, ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದು ಹೆಸರುವಾಸಿಯಾಗಿದ್ದಾರೆ. ಸ್ಥಳೀಯವಾಗಿ ಅವರನ್ನು ‘ಪೊಲೀಸ್ ಸಿಂಗಂ’ ಎಂದು ಕರೆಯುತ್ತಾರೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಾಗಿ ಚುನಾವಣಾ ಆಯೋಗ ನೇಮಿಸಿದ 95 ವಿಶೇಷ ವೀಕ್ಷಕರಲ್ಲಿ ಶರ್ಮಾ ಕೂಡ ಒಬ್ಬರು. ಸದ್ಯ ಅವರು ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಸ್ಥಳೀಯ ಮತದಾರರಿಂದ ಕೆಲವರು ಓಟರ್ ಐಡಿಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಮಾಹಿತಿ ಅವರಿಗೆ ಬಂದಿತ್ತು. ತಕ್ಷಣವೇ ಆಯಾ ಪ್ರದೇಶಗಳಿಗೆ ಭೇಟಿ ನೀಡಿದ ಅಜಯ್ ಶರ್ಮಾ, ಯಾರಾದರೂ ಮತದಾರರನ್ನು ಬೆದರಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸ್ಥಳೀಯ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಪ್ರತಿಕ್ರಿಯಿಸುತ್ತಾ, ತಮ್ಮ ನಾಯಕರು ಮತ್ತು ಕಾರ್ಯಕರ್ತರನ್ನು ಬೆದರಿಸಿದರೆ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಅರ್ಧ ರಾತ್ರಿಯಲ್ಲಿ ಐಪಿಎಸ್ ಅಧಿಕಾರಿ ತನ್ನ ಮನೆಗೆ ಬಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದರು. ಒಂದು ವೇಳೆ ಅವರು ‘ಸಿಂಗಂ’ (ಐಪಿಎಸ್ ಅಜಯ್ ಪಾಲ್ ಶರ್ಮಾ) ಆದರೆ, ತಾನು ‘ಪುಷ್ಪ’ ಎಂದು ಸಿನಿಮಾ ಡೈಲಾಗ್ ಹೊಡೆದಿದ್ದಾರೆ. ಅವರು ಪಡೆಗಳೊಂದಿಗೆ ಬಂದು ತನ್ನ ಬೆಂಬಲಿಗರನ್ನು ಭಯಭೀತರನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
