ಕಲ್ಯಾಣಿ (ಪಶ್ಚಿಮ ಬಂಗಾಳ): ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗೆ ತೀವ್ರ ಆಂತರಿಕ ಕಲಹ ಉಂಟಾಗಿರುವ ಬೆನ್ನಲ್ಲೇ, ಟಿಎಂಸಿ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಆರು ಮಂದಿ ಶಾಸಕರು ಮಂಗಳವಾರದಂದು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ನೇತೃತ್ವದಲ್ಲಿ ನಡೆದ ಆಡಳಿತಾತ್ಮಕ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದಾರೆ. ರಾಜ್ಯದ ಬದಲಾಗುತ್ತಿರುವ ರಾಜಕೀಯ ಸಮೀಕರಣಗಳ ಮಧ್ಯೆ, ಬಿಜೆಪಿಯ ಅಧಿಕೃತ ವೇದಿಕೆಯಲ್ಲಿ ಟಿಎಂಸಿ ಮುಖಂಡರು ಕಾಣಿಸಿಕೊಂಡಿರುವುದು ಭಾರಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗಷ್ಟೇ ಟಿಎಂಸಿ ಪಕ್ಷದಲ್ಲಿ ತಮಗೆ ನಡೆಸಿಕೊಂಡ ರೀತಿಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ ಪಕ್ಷದ ಸಾಂಸ್ಥಿಕ ಹುದ್ದೆಗೆ ರಾಜೀನಾಮೆ ನೀಡಿದ್ದ ಬಾರಾಸತ್ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು ಈ ಸಭೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಅವರೊಂದಿಗೆ ದೇಗಂಗಾ ಶಾಸಕ ಅನಿಸುರ್ ರೆಹಮಾನ್ ಬಿಸ್ವಾಸ್, ಸ್ವರೂಪನಗರದ ಬೀನಾ ಮೊಂಡಲ್, ಹರೋವಾದ ಮೊಹಮ್ಮದ್ ಅಬ್ದುಲ್ ಮತಿನ್ ಸೇರಿದಂತೆ ಬಸಿರ್ಹತ್ ಭಾಗದ ಒಟ್ಟು ಆರು ಶಾಸಕರು ಸಭೆಗೆ ಹಾಜರಾಗಿದ್ದರು. ಕಲ್ಯಾಣಿಯ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಉತ್ತರ 24 ಪರಗಣ, ನಾದಿಯಾ ಮತ್ತು ಹೂಗ್ಲಿ ಜಿಲ್ಲೆಗಳ ಉನ್ನತ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕೇವಲ ಎರಡು ದಿನಗಳ ಹಿಂದೆಯಷ್ಟೇ ಕಾಕೋಲಿ ಘೋಷ್ ಅವರು ಟಿಎಂಸಿಯ ಬಾರಾಸತ್ ಜಿಲ್ಲಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದಕ್ಕೂ ಮುನ್ನ ಅವರನ್ನು ಲೋಕಸಭೆಯ ಮುಖ್ಯ ಸಚೇತಕ (Chief Whip) ಹುದ್ದೆಯಿಂದ ಕೆಳಗಿಳಿಸಿ ಕಲ್ಯಾಣ್ ಬ್ಯಾನರ್ಜಿ ಅವರನ್ನು ನೇಮಿಸಿದಾಗ, ಅವರು ಸಾಮಾಜಿಕ ಜಾಲತಾಣದಲ್ಲಿ “1976 ರಿಂದ ಒಡನಾಟ, 1984 ರಿಂದ ಜಂಟಿ ಪಯಣ ಆರಂಭವಾಗಿತ್ತು. ಇಂದು ನನ್ನ ನಾಲ್ಕು ದಶಕಗಳ ನಿಷ್ಠೆಗೆ ತಕ್ಕ ಪ್ರತಿಫಲ ಸಿಕ್ಕಿದೆ” ಎಂದು ಬರೆಯುವ ಮೂಲಕ ತೀವ್ರ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಅವರು ಸುವೇಂದು ಅಧಿಕಾರಿ ಅವರ ಸಭೆಗೆ ಬಂದಿರುವುದು ತೀವ್ರ ರಾಜಕೀಯ ಪ್ರಾಮುಖ್ಯತೆ ಪಡೆದುಕೊಂಡಿದೆ.
ಆದರೆ ಈ ಕುರಿತ ರಾಜಕೀಯ ವದಂತಿಗಳನ್ನು ತಳ್ಳಿಹಾಕಿರುವ ಸಂಸದೆ ಕಾಕೋಲಿ ಘೋಷ್, “ಆಡಳಿತ ಎಂಬುದು ಎಲ್ಲರಿಗೂ ಸೇರಿದ್ದು” ಎಂದು ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸಿದ್ದಾರೆ. ಉಳಿದ ಟಿಎಂಸಿ ಶಾಸಕರು ಸಹ ತಾವು ಕೇವಲ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳಿಗಾಗಿ ಮಾತ್ರ ಸಭೆಗೆ ಬಂದಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ. “ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಬಂದಿದ್ದೇನೆ” ಎಂದು ಬೀನಾ ಮೊಂಡಲ್ ಹೇಳಿದರೆ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರದ ಸಹಕಾರ ಅಗತ್ಯವಿರುವುದರಿಂದ ಸಭೆಗೆ ಹಾಜರಾಗಿದ್ದಾಗಿ ಅನಿಸುರ್ ರೆಹಮಾನ್ ತಿಳಿಸಿದ್ದಾರೆ.
ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಈ ಬೆಳವಣಿಗೆಯನ್ನು ಪಶ್ಚಿಮ ಬಂಗಾಳದ ಹಳೆಯ ದ್ವೇಷದ ರಾಜಕೀಯ ಸಂಸ್ಕೃತಿಯಿಂದ ಸಿಕ್ಕಿದ ಮುಕ್ತಿ ಎಂದು ಬಣ್ಣಿಸಿದ್ದಾರೆ. “ನಾವು ವಿರೋಧ ಪಕ್ಷದಲ್ಲಿದ್ದಾಗ ನಮಗೆ ಇಂತಹ ಆಡಳಿತಾತ್ಮಕ ಸಭೆಗಳಿಗೆ ಆಹ್ವಾನವಿರುತ್ತಿರಲಿಲ್ಲ. ಆದರೆ ನಾವು ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಲು ನಿರ್ಧರಿಸಿದ್ದೇವೆ. ನಮ್ಮ ಆಹ್ವಾನಕ್ಕೆ ಬಾರಾಸತ್ ಸಂಸದೆ ಹಾಗೂ ವಿರೋಧ ಪಕ್ಷದ ಆರು ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಾವು ಅವರಿಗೆ ಮಾತನಾಡಲು ಅವಕಾಶವನ್ನೂ ನೀಡಿದ್ದೇವೆ” ಎಂದು ಹೇಳಿದರು. ರಾಜ್ಯದ ಜನತೆಗೆ ‘ಡಬಲ್ ಇಂಜಿನ್’ ಸರ್ಕಾರದ ಸಂಪೂರ್ಣ ಲಾಭ ಸಿಗಬೇಕು, ರಾಜಕೀಯ ಏನಿದ್ದರೂ ಕೇವಲ ಚುನಾವಣೆಗಷ್ಟೇ ಸೀಮಿತವಾಗಿರಬೇಕು, ವರ್ಷಪೂರ್ತಿ ನಾವು ರಚನಾತ್ಮಕವಾಗಿ ಕೆಲಸ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ವಿಶೇಷವೆಂದರೆ, ಇತ್ತೀಚೆಗೆ ತಮ್ಮದೇ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಮತ್ತೊಬ್ಬ ಟಿಎಂಸಿ ಶಾಸಕ ರಿತಬ್ರತ ಬ್ಯಾನರ್ಜಿ ಅವರು ಸಹ ಈ ಹೆಜ್ಜೆಯನ್ನು ಸ್ವಾಗತಿಸಿದ್ದು, ಇದನ್ನು ಆರೋಗ್ಯಕರ ಪ್ರಜಾಪ್ರಭುತ್ವದ ನಡೆ ಎಂದು ಕರೆದಿದ್ದಾರೆ. ಪಶ್ಚಿಮ ಬಂಗಾಳದ ತೀವ್ರ ಧ್ರುವೀಕೃತ ರಾಜಕೀಯ ಇತಿಹಾಸದಲ್ಲಿ, ಚುನಾವಣೋತ್ತರ ಸನ್ನಿವೇಶದಲ್ಲಿ ವಿರೋಧ ಪಕ್ಷದ ಇಷ್ಟು ದೊಡ್ಡ ಮಟ್ಟದ ನಾಯಕರು ಮುಖ್ಯಮಂತ್ರಿಯವರ ಅಧಿಕೃತ ವೇದಿಕೆಯಲ್ಲಿ ನಗುಮುಖದಿಂದ ಕಾಣಿಸಿಕೊಂಡಿರುವುದು ರಾಜ್ಯದಲ್ಲಿ ಹೊಸ ರಾಜಕೀಯ ಬದಲಾವಣೆಯ ದಿಕ್ಸೂಚಿಯಾಗಿದೆ
