Home ದೇಶ ತೃಣಮೂಲ ಕಾಂಗ್ರೆಸ್ ಸಂಕಟ: ಕಾನೂನು ಸಂಕಷ್ಟ ತಪ್ಪಿಸಲು ಎನ್‌ಸಿಪಿಐ ಪಕ್ಷದೊಂದಿಗೆ ವಿಲೀನಗೊಂಡ ರೆಬೆಲ್‌ ಸಂಸದರು

ತೃಣಮೂಲ ಕಾಂಗ್ರೆಸ್ ಸಂಕಟ: ಕಾನೂನು ಸಂಕಷ್ಟ ತಪ್ಪಿಸಲು ಎನ್‌ಸಿಪಿಐ ಪಕ್ಷದೊಂದಿಗೆ ವಿಲೀನಗೊಂಡ ರೆಬೆಲ್‌ ಸಂಸದರು

0

ಕೋಲ್ಕತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಬಂಡಾಯವು ಅತ್ಯಂತ ನಾಟಕೀಯ ಪಡೆದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದಂಗೆ ಎದ್ದಿರುವ ರೆಬೆಲ್ ಸಂಸದರು ಕಾನೂನಾತ್ಮಕ ತೊಂದರೆಗಳಿಂದ ಮತ್ತು ಪಕ್ಷಾಂತರ ನಿರೋಧಕ ಕಾಯ್ದೆಯಿಂದ ಪಾರಾಗಲು ಭಾರಿ ರಾಜತಾಂತ್ರಿಕ ಎಂಟ್ರಿ ನೀಡಿದ್ದಾರೆ.

ತೃಣಮೂಲದ ಬಂಡಾಯ ಬಣವು ತ್ರಿಪುರ ಮೂಲದ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಪಕ್ಷದೊಂದಿಗೆ ಅಧಿಕೃತವಾಗಿ ವಿಲೀನಗೊಳ್ಳುತ್ತಿರುವುದಾಗಿ ರೆಬೆಲ್ ಸಂಸದೆ ಕಕೋಲಿ ಘೋಷ್ ಪ್ರಕಟಿಸಿದ್ದಾರೆ.

ಎನ್‌ಸಿಪಿಐ ಜೊತೆ ವಿಲೀನವಾದ ನಂತರ ತಮ್ಮ ಬಣವು ಕೇಂದ್ರದ ಎನ್‌ಡಿಎ (NDA) ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೇವಲ ಪ್ರತ್ಯೇಕ ಪಾರ್ಲಿಮೆಂಟರಿ ಗ್ರೂಪ್ ಆಗಿ ಗುರುತಿಸಿಕೊಂಡರೆ ಎದುರಾಗಬಹುದಾದ ಕಾನೂನು ಸಂಕಷ್ಟಗಳನ್ನು ತಪ್ಪಿಸಲು ಸಂಸದರು ಈ ಜಾಣ್ಮೆಯ ನಿರ್ಧಾರಕ್ಕೆ ಬಂದಿದ್ದಾರೆ.

ರೆಬೆಲ್ ಸಂಸದರ ನಿಯೋಗವು ಭಾನುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ತಮಗೆ ಸಂಸತ್ತಿನಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಅಧಿಕೃತ ವಿನಂತಿ ಪತ್ರ ಸಲ್ಲಿಸಿದೆ.

ರೆಬೆಲ್ ಕ್ಯಾಂಪ್ ಸೇರಿದ ಮತ್ತಿಬ್ಬರು ಸಂಸದರು; 22 ಕ್ಕೆ ಏರಿದ ಸಂಖ್ಯೆ: ತೃಣಮೂಲ ಕಾಂಗ್ರೆಸ್‌ನ ಮತ್ತಿಬ್ಬರು ಲೋಕಸಭಾ ಸಂಸದರು ರೆಬೆಲ್ ಬಣವನ್ನು ಸೇರಲು ಸಜ್ಜಾಗಿದ್ದಾರೆ ಎಂದು ಬಂಡಾಯಗಾರರ ನೇತೃತ್ವ ವಹಿಸಿರುವ ಕಕೋಲಿ ಘೋಷ್ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಮಮತಾ ಬ್ಯಾನರ್ಜಿ ವಿರುದ್ಧ ಬಂಡೆದ್ದಿರುವ ಸಂಸದರ ಸಂಖ್ಯೆ 20 ರಿಂದ 22 ಕ್ಕೆ ಏರಿಕೆಯಾಗಿದೆ. ಆ ಇಬ್ಬರು ಸಂಸದರು ಅಧಿಕೃತವಾಗಿ ತಮ್ಮ ಕ್ಯಾಂಪ್ ಸೇರಿದ ನಂತರ ಅವರ ಹೆಸರುಗಳನ್ನು ಪ್ರಕಟಿಸುವುದಾಗಿ ಕಕೋಲಿ ತಿಳಿಸಿದ್ದಾರೆ.

ಇದೇ ವೇಳೆ ರೆಬೆಲ್ ಸಂಸದರು ಭಾನುವಾರ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಎನ್‌ಡಿಎ ಮೈತ್ರಿಗೆ ಬೆಂಬಲ ನೀಡುವ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ಈ ನಾಯಕರು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನೂ ಭೇಟಿ ಮಾಡುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಟಿಎಂಸಿ ರೆಬೆಲ್ ಸಂಸದರಿಗೆ ಲೋಕಸಭೆಯಲ್ಲಿ ಯಾವುದೇ ರೀತಿಯ ಪ್ರತ್ಯೇಕ ಗುಂಪು ಅಥವಾ ಮಾನ್ಯತೆ ನೀಡಬಾರದು ಎಂದು ಒತ್ತಾಯಿಸಿ ಟಿಎಂಸಿ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಡಕ್ ಪತ್ರ ಬರೆದಿದ್ದಾರೆ. ತೃಣಮೂಲ ಕಾಂಗ್ರೆಸ್ ಎಂದಿಗೂ ಒಮ್ಮತದ ಮತ್ತು ಅವಿಭಾಜ್ಯ ಪಕ್ಷವಾಗಿದ್ದು, ಇಲ್ಲಿ ಯಾವುದೇ ಪ್ರತ್ಯೇಕ ಉಪ-ಗುಂಪುಗಳಿಗೆ ಅವಕಾಶವಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ, ನಮಗೆ ಕೇವಲ ಒಂದೇ ಪಕ್ಷ ಮತ್ತು ಒಬ್ಬರೇ ಅಧಿನಾಯಕಿ ಇದ್ದಾರೆ. ಒಂದು ವೇಳೆ ಸ್ಪೀಕರ್ ಅವರು ಈ ರೆಬೆಲ್ ಬಣಕ್ಕೆ ಪ್ರತ್ಯೇಕ ಮಾನ್ಯತೆ ನೀಡಿದರೂ ಸಹ ಅದು ಕಾನೂನುಬದ್ಧವದಿಲ್ಲ ಎಂದು ಅಭಿಷೇಕ್ ಸ್ಪಷ್ಟಪಡಿಸಿದ್ದಾರೆ.

ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತವನ್ನು ಹತ್ತಿಕ್ಕಲು ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಪಕ್ಷದೊಳಗಿನ ಭಾರಿ ಬದಲಾವಣೆಗೆ ಚಾಲನೆ ನೀಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಯೂತ್ ವಿಂಗ್ (ಯುವ ಘಟಕ) ಅಧ್ಯಕ್ಷ ಹುದ್ದೆಯಿಂದ ಜಾದವ್‌ಪುರ ಸಂಸದೆ ಸಯೋನಿ ಘೋಷ್ ಅವರನ್ನು ಉಚ್ಛಾಟಿಸಿ ಆದೇಶ ಹೊರಡಿಸಿದ್ದಾರೆ. ಅವರ ಜಾಗಕ್ಕೆ ಯುವ ನಾಯಕ ಅರ್ನಬ್ ಬ್ಯಾನರ್ಜಿ ಅವರನ್ನು ನೇಮಕ ಮಾಡಲಾಗಿದೆ.

ಅದೇ ರೀತಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಕೋಲ್ಕತಾ ದಕ್ಷಿಣದ ಸಂಸದೆ ಮಲಾ ರಾಯ್ ಅವರನ್ನು ಕಿತ್ತೊಗೆದು, ಅವರ ಸ್ಥಾನಕ್ಕೆ ಕಾಲಿಗಂಜ್ ಶಾಸಕಿ ಅಲಿಫಾ ಅಹ್ಮದ್ ಅವರನ್ನು ನೇಮಿಸಿದ್ದಾರೆ. ಉಚ್ಛಾಟನೆಗೊಂಡ ಮಲಾ ರಾಯ್ ಮತ್ತು ಸಾಯೋನಿ ಘೋಷ್ ಇಬ್ಬರೂ ರೆಬೆಲ್ ಸಂಸದರ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು ಎಂಬುದು ಗಮನಾರ್ಹ.

ಸದ್ಯ ಹಿರಿಯ ಸಂಸದ ಸುದೀಪ್ ಬಂದೋಪಾಧ್ಯಾಯ ಕೂಡ ಇದೇ ಬಣ ಸೇರಿದ್ದಾರೆ ಎನ್ನಲಾಗುತ್ತಿದ್ದು, ದೀದಿ ಕಠಿಣ ಕ್ರಮ ಮುಂದುವರಿಸಿದ್ದಾರೆ. ಈಗಾಗಲೇ ಶಾಸಕ ರಿತಬ್ರತ ನೇತೃತ್ವದಲ್ಲಿ 60 ಕ್ಕೂ ಹೆಚ್ಚು ಟಿಎಂಸಿ ಶಾಸಕರು ಬಂಡಾಯ ಬಣ ಸೇರಿದ್ದಾರೆ.

ಮಹಾರಾಷ್ಟ್ರದಲ್ಲೂ ಸಹ ‘ಆಪರೇಷನ್ ಟೈಗರ್’ ಭೀತಿ ಎದುರಾಗಿದ್ದು, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಭಾನುವಾರ ಮುಂಬೈನಲ್ಲಿ ಕರೆದಿದ್ದ ಪಕ್ಷದ ಸಂಸದರ ತುರ್ತು ಸಭೆಯು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಉದ್ಧವ್ ಬಣದ ಹಲವು ಸಂಸದರು ಶೀಘ್ರದಲ್ಲೇ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಫಿರಾಯಿಸಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಈ ಸಭೆ ಕರೆಯಲಾಗಿತ್ತು. ಆದರೆ, ಪಕ್ಷದ ಒಟ್ಟು 9 ಜನ ಸಂಸದರ ಪೈಕಿ ಸಭೆಗೆ ಖುದ್ದಾಗಿ ಹಾಜರಾಗಿದ್ದು ಕೇವಲ ನಾಲ್ವರು ಸಂಸದರು ಮಾತ್ರ! ಇದು ಉದ್ಧವ್ ಕ್ಯಾಂಪ್‌ನಲ್ಲಿ ತಳಮಳ ಸೃಷ್ಟಿಸಿದೆ.

ಆದರೆ ಬಂಡಾಯದ ವರದಿಗಳನ್ನು ತಳ್ಳಿಹಾಕಿರುವ ಯುಬಿಟಿ ನಾಯಕ ಅನಿಲ್ ದೇಸಾಯಿ, ವೈಯಕ್ತಿಕ ಕಾರಣಗಳಿಂದಾಗಿ ಉಳಿದ ಸಂಸದರು ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ. ನಮ್ಮ ಎಲ್ಲಾ 9 ಸಂಸದರು ಒಟ್ಟಿಗೇ ಇದ್ದಾರೆ, ಯಾವುದೇ ಭಿನ್ನಮತವಿಲ್ಲ, ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲಾ ಕೇವಲ ಊಹಾಪೋಹ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

You cannot copy content of this page

Exit mobile version