ಲಲಿತ್‌ಪುರ: ಮದ್ಯದ ಪಾರ್ಟಿಯೊಂದರಲ್ಲಿ ತಮಗೆ ಕಾಲು ಮಸಾಜ್ ಮಾಡಲು ನಿರಾಕರಿಸಿದ ಕಾರಣಕ್ಕೆ ಮೂವರು ವ್ಯಕ್ತಿಗಳು ಸೇರಿ 33 ವರ್ಷದ ದಲಿತ ಯುವಕನೊಬ್ಬನನ್ನು ಬೆಲ್ಟ್ ಮತ್ತು ಕಬ್ಬಿಣದ ರಾಡ್‌ಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಅತ್ಯಂತ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಲಲಿತ್‌ಪುರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಕಾಲು ಸಿಂಗ್ ಅವರು ಈ ಘಟನೆಯ ವಿವರಗಳನ್ನು ನೀಡಿದ್ದು, ಲಲಿತ್‌ಪುರದ ವರ್ಣಿ ಜೈನ್ ಕಾಲೇಜಿನ ಹಿಂಭಾಗದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ತೀವ್ರ ಗಾಯಗಳೊಂದಿಗೆ ಬಿದ್ದಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಭಾನುವಾರ ಮುಂಜಾನೆ ಲಭ್ಯವಾಗಿತ್ತು.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ರಾಜ್‌ಕುಮಾರ್ ಅಲಿಯಾಸ್ ಛನ್ನು ಎಂದು ಗುರುತಿಸಿ ಆಸ್ಪತ್ರೆಗೆ ದಾಖಲಿಸಿದರಾದರೂ, ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಧ್ರುವೀಕರಿಸಿದ್ದಾರೆ.
ಪೊಲೀಸ್ ತನಿಖೆಯ ವೇಳೆ ಈ ಕೊಲೆಯ ಹಿಂದಿನ ಕರಾಳ ಸತ್ಯ ಹೊರಬಿದ್ದಿದೆ. ಶನಿವಾರ ರಾತ್ರಿ ಸಮ್ಯಕ್ ರಾಜ್‌ನಾಯಕ್ ಎಂಬಾತನ ಮನೆಯಲ್ಲಿ ಆಯೋಜಿಸಲಾಗಿದ್ದ ಮದ್ಯದ ಪಾರ್ಟಿಗೆ ರಾಜ್‌ಕುಮಾರ್ ಹೋಗಿದ್ದರು. ಅಲ್ಲಿ ಮದ್ಯದ ಅಮಲಿನಲ್ಲಿದ್ದ ರಾಜ್‌ನಾಯಕ್ ಮತ್ತು ಆತನ ಇಬ್ಬರು ಸಹಚರರು ತಮಗೆ ಕಾಲು ಮಸಾಜ್ ಮಾಡುವಂತೆ ರಾಜ್‌ಕುಮಾರ್‌ಗೆ ಆದೇಶಿಸಿದ್ದಾರೆ. ಆದರೆ ಅದಕ್ಕೆ ರಾಜ್‌ಕುಮಾರ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಇದರಿಂದ ತೀವ್ರ ಆಕ್ರೋಶಗೊಂಡ ಮೂವರು ಆರೋಪಿಗಳು, ರಾಜ್‌ಕುಮಾರ್ ಅವರ ಮೇಲೆ ಬೆಲ್ಟ್ ಹಾಗೂ ಇಂಟರ್ ರಾಡ್‌ಗಳಿಂದ ಮರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಆ ನಂತರ ಈ ಕೊಲೆಯನ್ನು ಕೇವಲ ರಸ್ತೆ ಅಪಘಾತ ಎಂದು ಬಿಂಬಿಸುವ ಕುತಂತ್ರದಿಂದ ಶವವನ್ನು ತಂದು ಕಾಲೇಜು ಹಿಂಭಾಗದ ರಸ್ತೆಯ ಬದಿಗೆ ಎಸೆದು ಹೋಗಿದ್ದರು.
ಸದ್ಯ ಪೊಲೀಸರು ಮೂವರೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ತಮ್ಮ ಭೀಕರ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
