Home ರಾಜ್ಯ ರಾಮನಗರ ದೇಶದಲ್ಲಿ ರೈತರ ಪರ ಮಾತನಾಡುವ ನೀವು ಕರ್ನಾಟಕದ ಲೂಟಿಯನ್ನು ತಡೆಯಿರಿ: ಬಿಡದಿ ಭೂಸ್ವಾಧೀನ ನಿಲ್ಲಿಸುವಂತೆ ರಾಹುಲ್...

ದೇಶದಲ್ಲಿ ರೈತರ ಪರ ಮಾತನಾಡುವ ನೀವು ಕರ್ನಾಟಕದ ಲೂಟಿಯನ್ನು ತಡೆಯಿರಿ: ಬಿಡದಿ ಭೂಸ್ವಾಧೀನ ನಿಲ್ಲಿಸುವಂತೆ ರಾಹುಲ್ ಗಾಂಧಿಗೆ ಬಿ.ವೈ. ವಿಜಯೇಂದ್ರ ಪತ್ರ

0

ಬೆಂಗಳೂರು: ಬಿಡದಿ ಜಾಗತಿಕ ಕೈಗಾರಿಕಾ ಟೌನ್‌ಶಿಪ್ ಯೋಜನೆಗಾಗಿ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.

ಈ ಬೃಹತ್ ಟೌನ್‌ಶಿಪ್ ಯೋಜನೆಯು ಸುಮಾರು 18,000 ಕೋಟಿ ರೂಪಾಯಿ ವೆಚ್ಚದ್ದಾಗಿದ್ದು, ಇದನ್ನು ಬೆಂಗಳೂರಿನ ಮತ್ತೊಂದು ಪ್ರಮುಖ ವಾಣಿಜ್ಯ ಕೇಂದ್ರದಂತೆ ಬಿಂಬಿಸಲಾಗುತ್ತಿದೆ ಎಂದು ವಿಜಯೇಂದ್ರ ಪತ್ರದಲ್ಲಿ ವಿವರಿಸಿದ್ದಾರೆ. ಈ ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತಾದ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರವು ಜೂನ್ 11 ರಂದು ಅಧಿಕೃತವಾಗಿ ರಾಜ್ಯ ಗೆಜೆಟ್‌ನಲ್ಲಿ ಪ್ರಕಟಿಸಿದೆ.

ಬಿಡದಿಯ “ಸಾವಿರಾರು ವಂಚಿತ ಮತ್ತು ಅಸಹಾಯಕ ರೈತ ಕುಟುಂಬಗಳ” ಪರವಾಗಿ ತಾನು ಈ ಪತ್ರವನ್ನು ಬರೆಯುತ್ತಿರುವುದಾಗಿ ತಿಳಿಸಿರುವ ವಿಜಯೇಂದ್ರ, ರಾಹುಲ್ ಗಾಂಧಿ ಅವರು ಈ ಸೂಕ್ಷ್ಮ ವಿಷಯದಲ್ಲಿ ಅತ್ಯಂತ ನ್ಯಾಯಸಮ್ಮತವಾಗಿ ಸ್ಪಂದಿಸಲಿದ್ದಾರೆ ಎಂಬ ನಂಬಿಕೆಯಿದೆ ಎಂದು ಆಶಿಸಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಬಿಡದಿ ಮತ್ತು ಹಾರೋಹಳ್ಳಿ ನಡುವಿನ ಬರೋಬ್ಬರಿ 7,481 ಎಕರೆ ಅತ್ಯಂತ ಫಲವತ್ತಾದ ಕೃಷಿ ಭೂಮಿಯಲ್ಲಿ ‘ವರ್ಕ್-ಲೈವ್-ಪ್ಲೇ’ ಸ್ಯಾಟಲೈಟ್ ಟೌನ್‌ಶಿಪ್ ನಿರ್ಮಿಸಲು ಹಠಕ್ಕೆ ಬಿದ್ದಂತೆ ಮುನ್ನುಗ್ಗುತ್ತಿದೆ ಎಂದು ವಿಜಯೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನೀವು ದೇಶದ ಉದ್ದಗಲಕ್ಕೂ ಸಂಚರಿಸುತ್ತಾ ರೈತರ ಭೂಮಿ ಹಕ್ಕುಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತೀರಿ. ಕಾರ್ಪೊರೇಟ್ ಹಿತಾಸಕ್ತಿಗಳ ಹಿಡಿತದಿಂದ ಭಾರತದ ನೆಲ ಮತ್ತು ರೈತರನ್ನು ರಕ್ಷಿಸುವ ಬಗ್ಗೆ ಮಾತನಾಡುತ್ತೀರಿ ಹಾಗೂ ಇದೇ ಉದ್ದೇಶಗಳನ್ನಿಟ್ಟುಕೊಂಡು ದೊಡ್ಡ ದೊಡ್ಡ ಪಾದಯಾತ್ರೆಗಳನ್ನು ನಡೆಸಿದ್ದೀರಿ. ಆದರೆ, ನಿಮ್ಮದೇ ಆಡಳಿತವಿರುವ ಕರ್ನಾಟಕದಲ್ಲಿ ನಮ್ಮ ರಾಜ್ಯದ ಅತ್ಯಂತ ಬಡ ರೈತರು ತಮ್ಮ ಜೀವನದ ಸರ್ವಸ್ವವನ್ನೇ ಕಳೆದುಕೊಂಡು ಬೀದಿಗೆ ಬೀಳುವ ಆತಂಕದಲ್ಲಿದ್ದರೂ, ಇಲ್ಲಿನ ಕಾಂಗ್ರೆಸ್ ಮುಖ್ಯಮಂತ್ರಿಗಳು ಮಾತ್ರ ಕಿಂಚಿತ್ತೂ ಕರುಣೆಯಿಲ್ಲದೆ ಅತ್ಯಂತ ನಿರ್ದಯವಾಗಿ ವರ್ತಿಸುತ್ತಿದ್ದಾರೆ,” ಎಂದು ವಿಜಯೇಂದ್ರ ಅವರು ರಾಹುಲ್ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

You cannot copy content of this page

Exit mobile version