ಹಾಸನ: ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಹತ್ತು ಯುವಕರ ತಂಡದ ಪೈಕಿ ಮೂವರು ಯುವಕರು ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ರೋಸರಿ ಚರ್ಚ್ (Shettihalli Rosary Church) ಸಮೀಪದ ಹಳ್ಳದಲ್ಲಿ ಈಜಲು ಹೋಗಿ ನೀರಿನ ರಭಸಕ್ಕೆ ಕೊಚ್ಚಿಹೋಗಿರುವ ಅತ್ಯಂತ ದುಃಖದ ಘಟನೆ ಭಾನುವಾರದಂದು ಸಂಭವಿಸಿದೆ.
ಬೆಂಗಳೂರಿನ ಗಿರಿನಗರ ಮತ್ತು ಬ್ಯಾಟರಾಯನಪುರ ನಿವಾಸಿಗಳಾದ ಹತ್ತು ಯುವಕರ ತಂಡವು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರವಾಸ ಕೈಗೊಂಡಿತ್ತು. ಧರ್ಮಸ್ಥಳದಿಂದ ವಾಪಸ್ ಊರಿಗೆ ಮರಳುವ ಮಾರ್ಗಮಧ್ಯೆ ಈ ಯುವಕರು ಶೆಟ್ಟಿಹಳ್ಳಿಯ ಪ್ರಸಿದ್ಧ ರೋಸರಿ ಚರ್ಚ್ ನೋಡಲು ಭೇಟಿ ನೀಡಿದ್ದರು. ಆ ನಂತರ ಚರ್ಚ್‌ನ ಸಮೀಪದಲ್ಲೇ ಹರಿಯುವ ಹಳ್ಳದಲ್ಲಿ ಈಜಾಡಲು ನೀರಿನಲ್ಲಿ ಇಳಿದಿದ್ದಾರೆ.
ಈ ವೇಳೆ ನೀರಿನ ತೀವ್ರ ರಭಸಕ್ಕೆ ಸಿಲುಕಿದ ಮಣಿಕಂಠ (20), ಮಿಲನ್ ಗೌಡ (23) ಮತ್ತು ಚರಣ್ (20) ಎಂಬ ಮೂವರು ಯುವಕರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಗೋರೂರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸದ್ಯ ತೀವ್ರ ಹುಡುಕಾಟದ ನಂತರ ಮಣಿಕಂಠ ಎಂಬ ಯುವಕನ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಕೊಚ್ಚಿಹೋಗಿರುವ ಉಳಿದ ಇಬ್ಬರು ಯುವಕರಿಗಾಗಿ ಗೋರೂರು ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಜಂಟಿಯಾಗಿ ಹಳ್ಳದ ಉದ್ದಕ್ಕೂ ತೀವ್ರ ಆಪರೇಷನ್ ಮುಂದುವರಿಸಿದ್ದಾರೆ.
