ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಹಾಗೂ ಅಶ್ಲೀಲ ಪೋಸ್ಟ್ ಮತ್ತು ಕಮೆಂಟ್‌ಗಳನ್ನು ಹಾಕಿದ್ದಾರೆನ್ನಲಾದ ಮೂರು ಇನ್‌ಸ್ಟಾಗ್ರಾಮ್ ಖಾತೆದಾರರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಪಿಸಿಸಿ (KPCC) ಕಾನೂನು ಘಟಕದ ಸದಸ್ಯರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಜುಲೈ 27ರಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ದೂರುದಾರರು ‘ground.reality_india’ ಎಂಬ ಖಾತೆಯು ಜುಲೈ 16 ರಂದು “ವಿರೋಧ ಪಕ್ಷ ಏಕೆ ಮೌನವಾಗಿದೆ” ಎಂಬ ಶೀರ್ಷಿಕೆಯೊಂದಿಗೆ 30 ಸೆಕೆಂಡುಗಳ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, ಇದರಲ್ಲಿ ರಾಹುಲ್ ವಿರುದ್ಧ ನಿಂದನಾತ್ಮಕ ಮತ್ತು ಅಶ್ಲೀಲ ಹೇಳಿಕೆಗಳನ್ನು ಬಳಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಈ ವೀಡಿಯೊ “ಮಾನಹಾನಿಕರ ಮತ್ತು ಲೈಂಗಿಕವಾಗಿ ಅಶ್ಲೀಲವಾದ ಹೇಳಿಕೆಗಳನ್ನು” ಹೊಂದಿದ್ದು, ಚುನಾಯಿತ ಸಾರ್ವಜನಿಕ ಪ್ರತಿನಿಧಿಯ ಘನತೆಗೆ ಕುಂದು ತರುವ ಉದ್ದೇಶವನ್ನು ಹೊಂದಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೀಡಿಯೊಗೆ ನಿಂದನಾತ್ಮಕ ಮತ್ತು ಪ್ರಚೋದನಾತ್ಮಕ ಕಮೆಂಟ್‌ಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ‘raashtravaadhi2’ ಮತ್ತು ‘manvithamanojsamanvi’ ಎಂಬ ಇಬ್ಬರು ಬಳಕೆದಾರರ ಹೆಸರುಗಳನ್ನೂ ಪೊಲೀಸರು ಎಫ್‌ಐಆರ್‌ನಲ್ಲಿ ಸೇರಿಸಿದ್ದಾರೆ.
