ಸರ್ಕಾರಿ ಮತ್ತು ಸಾರ್ವಜನಿಕ ಜಾಗಗಳಲ್ಲಿ ಆರ್‌ಎಸ್ಎಸ್ ಚಟುವಟಿಕೆ ನಿಷೇಧದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಕಡೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಬೆನ್ನಲ್ಲೇ ಇಂದು ನಡೆದ ಸಂಪುಟ ಸಭೆಯಲ್ಲಿ ಕ್ಯಾಬಿನೆಟ್ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ವಿಶೇಷ ಎಂದರೆ ಎಲ್ಲೂ ಸಹ RSS ಸಂಘಟನೆ ಹೆಸರನ್ನು ಬಳಸದೇ ಸರ್ಕಾರ ಎಲ್ಲಾ ಕಡೆಯೂ ಖಾಸಗಿ ಸಂಘಟನೆಗಳು ಮತ್ತು ಸಂಸ್ಥೆಗಳು ಎಂದು ಉಲ್ಲೇಖಿಸಿದೆ. ಖಾಸಗಿ ಸಂಸ್ಥೆ ಮತ್ತು ಸಂಘಟನೆಗಳು ಚಟುವಟಿಕೆಗಳನ್ನ ನಡೆಸಲು ಪೂರ್ವಾನುಮತಿ ಕಡ್ಡಾಯ ಮಾಡಿ ಹೊಸ ನಿಯಮ ತರಲು ಮುಂದಾಗಿದೆ.
ಇನ್ನೊಂದು ಸೂಕ್ಷ್ಮ ವಿಚಾರ ಎಂದರೆ 2013 ರಲ್ಲಿ ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಲದಲ್ಲಿ ತಂದಿದ್ದ ಬಿಜೆಪಿ ಸರ್ಕಾರದ ಆದೇಶವನ್ನೇ ಮುಂದಿಟ್ಟು ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಇದಕ್ಕೆ ತಮಿಳುನಾಡು ಸರ್ಕಾರದ ಮಾದರಿ ಎಂಬ ಹಣೆಪಟ್ಟಿ ಬಿಟ್ಟರೆ ಮತ್ತೆಲ್ಲವೂ ಆಗಿನ ಬಿಜೆಪಿ ಸರ್ಕಾರದ ನಿಯಮಗಳನ್ನೇ ಜಾರಿಗೆ ತಂದಿದೆ. ಆ ಮಟ್ಟಿಗೆ ಬಿಜೆಪಿಗೆ ಈ ನಿಯಮ ಉಸಿರುಗಟ್ಟಿಸುವಂತಿದೆ.
ಈ ನಿಯಮ ಜಾರಿಯಾದರೆ ಆರ್‌ಎಸ್‌ಎಸ್ ಮಾತ್ರವಲ್ಲ ಖಾಸಗಿ ಸಂಘ ಸಂಸ್ಥೆಗಳು / ಸಂಘಟನೆಗಳು ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಕಡಿವಾಣ ಬೀಳಲಿದೆ. ಯಾರೇ ಯಾವುದೇ ಕಾರ್ಯಕ್ರಮ ಮಾಡುವುದಾದರೂ ಅನುಮತಿ ಪಡೆಯಬೇಕಾಗುತ್ತದೆ.