ಕುಂದಾಪುರದ ಸಮೀಪದ ಆಲೂರಿನಲ್ಲಿ ಕೊರಗ ಮಕ್ಕಳ ಮೇಳ ನಡೆಯುತ್ತಿದೆ. ಇವತ್ತು (ಅ. ೧೬) ಆರು ಗಂಟೆಗೆ ಸಮುದಾಯದ ವಾಸುದೇವ ಗಂಗೇರ್ ನಿರ್ದೇಶನದಲ್ಲಿ ಹುಬಾಶಿಕಾ ನಾಟಕ ಪ್ರಸ್ತುತಿಯೊಂದಿಗೆ ರಜಾಮೇಳಕ್ಕೆ ತೆರೆಬೀಳುತ್ತಿದೆ. ಕಾಡಿನ ಮಕ್ಕಳ ಬಣ್ಣದ ಹೆಜ್ಜೆಗೆ ಪೀಪಲ್ ಮೀಡಿಯಾದ ಶುಭಾಶಯಗಳು.
ಹುಬಾಶಿಕ ನಾಟಕದಲ್ಲಿ ʼನೀವಿದ್ದರೆ ಮಕ್ಕಳಿಗೆ ಖುಷಿಯಾಗುತ್ತದೆʼ ಎಂದು ಗೆಳೆಯ ಉದಯ ಗಾಂವ್ಕರ್ ಬರೆದಿದ್ದಾರೆ ( ದಾರಿಯ ವಿವರಕ್ಕಾಗಿ ಕರೆಮಾಡಿ: 9739249864). ಹತ್ತಿರ ಇದ್ದಿದ್ದರೆ ನಾನೀಗ ಆಲೂರಿನಲ್ಲಿ ಮಕ್ಕಳ ಜೊತೆ ಕುಣಿದಾಡುತ್ತಿದ್ದೆ.
ಕರಾವಳಿಯ ಅನೇಕ ಸಣ್ಣ ಸಮುದಾಯಗಳ ಬಗೆಗೆ ನಮ್ಮಲ್ಲಿನ್ನೂ ಗಂಭೀರವಾದ ಅಧ್ಯಯನಗಳು ನಡೆದಿಲ್ಲ. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಿ ನೆಲೆಸುವ ಗುಂಪುಗಳು ಆರಂಭಿಕ ಹಂತದಲ್ಲಿ ಸಂಘರ್ಷವನ್ನು ಇದಿರಿಸಲೇಬೇಕು. ಆನಂತರ ನಿಧಾನವಾಗಿ ಅವು ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತವೆ. ಹಾಗೆ ಹೊಂದಿಕೊಂಡಾಗ ಅಲ್ಲಿ ಹೊಸ ಬಗೆಯ ಸಂಸ್ಕೃತಿಯೊಂದು ಹುಟ್ಟಿಕೊಳ್ಳುತ್ತದೆ. ಭಾರತೀಯ ಸಂಸ್ಕೃತಿ ಎಂದು ಇಂದು ನಾವು ಏನನ್ನು ಗುರುತಿಸುತ್ತೇವೆಯೋ ಅದು ಶತಮಾನಗಳ ವಲಸೆ, ಸಂಘರ್ಷ ಮತ್ತು ಸಮನ್ವಯಗಳಲ್ಲಿ ರೂಪುಗೊಂಡದ್ದು. ಅಲ್ಲಿ ʼಶುದ್ಧʼ ಎಂಬುದಿಲ್ಲ.
ಕರಾವಳಿ ಕರ್ನಾಟಕದ ಪುಟ್ಟ ಕೊರಗ ಸಮುದಾಯವು ಯಾವಾಗ ಕರಾವಳಿಗೆ ವಲಸೆ ಬಂತೋ ತಿಳಿಯದು. ಅವರ ಅರಸನ ಹೆಸರು ‘ಹುಬಾಶಿಕ’. “ಜಿಲ್ಲೆಯಲ್ಲಿ ಅತಿ ಪೂರ್ವದಲ್ಲಿ ಕೊರಗರ ಪಂಗಡದವರಿಗೆ ಓರ್ವ ರಾಜ ಇದ್ದ. ಆತನ ಹೆಸರು ‘ಹುಬಶಿಕ’ ಈ ಹುಬಶಿಕನು ಜಿಲ್ಲೆಯ ಆಗಿನ ಅಧಿರಾಜನಾದ ಮಯೂರವರ್ಮನೆಂಬ ರಾಜನ ಮಗನಾದ ಲೋಕಾದಿತ್ಯನಿಂದ ಸೋಲಿಸಲ್ಪಟ್ಟು ಕಾಡಿಗೆ ಹೋದ” ಎಂಬುದು ಜನಪ್ರಿಯವಾದ ಒಂದು ಐತಿಹ್ಯವೂ ಹೌದು. ಇಂಥ ಹೇಳಿಕೆಗಳನ್ನೆಲ್ಲ ಸಂಗ್ರಹಿಸಿದ ಶ್ರೀ ಎಂ.ವೀರಪ್ಪ ಮೊಯಿಲಿ ಅವರು ತಮ್ಮ ʼಕೊಟ್ಟʼ ಕೃತಿಯಲ್ಲಿ ‘ಬಲಿಷ್ಠ ದೊರೆ ಹಬಾಶಿಕನು ಮಂಜೇಶ್ವರದ ದೊರೆ ಅಂಗಾರವರ್ಮನಿಂದ’ ವಂಚಿಸಲ್ಪಟ್ಟು ಕೊಲೆಯಾಗುತ್ತಾನೆʼ ಎಂದು ಬರೆದಿದ್ದಾರೆ.
ವಾಸ್ತವವಾಗಿ ಈ ‘ಹಬಾಶಿಕ’ ಅಥವಾ ‘ಹುಬಾಶಿಕ’ ಯಾರು? ತುಳುನಾಡಿಗೆ ‘ಅನ್ಯ’ವೆಂಬಂತೆ ಕಾಣುವ ಈ ಹೆಸರಿನ ಅರ್ಥವೇನು? ಎಂಬಿತ್ಯಾದಿ ವಿಚಾರಗಳ ಬಗೆಗೆ ಸಮಯ ಸಿಕ್ಕಾಗಲೆಲ್ಲ ನಾವು ಚರ್ಚಿಸುತ್ತಿದ್ದುದುಂಟು. ಆದರೂ ‘ಹಬಾಶಿಕ’ನ ಚಿತ್ರ ಅಸ್ಪಷ್ಟವಾಗುಳಿದಿದೆ. ೨೦೦೮ರಲ್ಲಿ ನಾನು ಜಪಾನ್ ಸುತ್ತುವಾಗ ‘ಹಬಶಿ’ ಪದ ನನ್ನ ಕಿವಿಗೆ ಬಿದ್ದಿತ್ತು. ವಿಚಾರಿಸುವಾಗ ‘ಹಬಶಿ’ ಎಂದರೆ ‘ಕಾಡು ಅಥವಾ ದೊಡ್ಡ ಪೊದರು’ ಎಂಬ ಅರ್ಥವಿರುವುದು ತಿಳಿಯಿತು. ಈ ಪದಕ್ಕೂ ಬೌದ್ಧ ಧರ್ಮಕ್ಕೂ ಸಂಬಂಧ ಇದೆ. ಇದನ್ನು ಅನುಸರಿಸಿ ಕೊರಗರು ಮೂಲದಲ್ಲಿ ಬೌದ್ಧರಾಗಿದ್ದರು ಎಂದೂ ಕೆಲವರು ಹೇಳಿದ್ದಾರೆ. ಸ್ವತಃ ಕೊರಗ ಭಾಷೆಯಲ್ಲಿ ‘ಹುಬಶಿ’ ಎಂದರೆ ‘ಕಾಡನ್ನು ಬಗೆಯುತ್ತಾ ಒಳಗೆ ಹೋಗು’ ಎಂಬರ್ಥವಿದೆ. ಇವೆಲ್ಲವನ್ನೂ ಗಮನಿಸಿದರೆ ‘ಹಬಾಶಿಕ’-ಅಥವಾ ‘ಹುಬಾಶಿಕ’ ಪದವು ಕಾಡು ಮತ್ತು ಕೊರಗರ ನಡುವಣ ಸಂಬಂಧವನ್ನು ವಿವರಿಸುವ ಒಂದು ಪಾರಿಭಾಷಿಕ ಪದದ ಹಾಗೆ ತೋರುತ್ತದೆ.
‘ಹಬಾಶಿಕ’ ಪದವು ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದ ಸಿದ್ಧಿ ಸಮುದಾಯದೊಂದಿಗೂ ಸಂಬಂಧ ಹೊಂದಿದೆ. ಈ ಸಿದ್ಧಿ ಸಮುದಾಯದ ಬಗ್ಗೆ ಆಳವಾಗಿ ಕೆಲಸ ಮಾಡಿರುವ ಪ್ರೊ. ನಜೀರ್ ಅಲಿ, ಅಮಿ ಕ್ಯಾಟ್ಲಿನ್, ಹೆಲೆನ್ಬಸು, ಹೆನ್ರಿಜಾನ್ ಡ್ರುವೆಲ್ ಮೊದಲಾದವರು ಆಫ್ರಿಕಾದಿಂದ ಹೊರಟ ಸಿದ್ಧಿಯರು ನೇರವಾಗಿ ಸಮುದ್ರ ಮಾರ್ಗವಾಗಿ ಭಾರತದ ಪಶ್ಚಿಮ ಕರಾವಳಿಗೆ ಬಂದ ಬಗ್ಗೆಯೋ ಅಥವಾ ಆಫ್ರಿಕಾದಿಂದ ಮಧ್ಯ ಏಷಿಯಾದ ಮೂಲಕ ಭಾರತದ ಗುಜರಾತಿಗೆ ಬಂದಿಳಿದ ಬಗ್ಗೆಯೋ ಬರೆದಿದ್ದಾರೆ.
ಹಾಗೆ ಬರೆಯುವಾಗ ಅವರೆಲ್ಲ ಇಥಿಯೋಪಿಯಾದಿಂದ ಭಾರತಕ್ಕೆ ಆಗಮಿಸಿದ ‘ಹಬಶಿ’ ಗುಂಪಿನ ಬಗ್ಗೆ ವಿವರ ನೀಡಿದ್ದಾರೆ. ೧೩ನೇ ಶತಮಾನದ ಉತ್ತರಾರ್ಧದಲ್ಲಿ ಇಥಿಯೋಪಿಯಾದಿಂದ ಯೋಧರಾಗಿ ಭಾರತಕ್ಕೆ ಆಗಮಿಸಿದ ಹಬಶಿಗಳು ದೆಹಲಿ ಸುಲ್ತಾನರ ಕೈಕೆಳಗೆ ಕೆಲಸ ಮಾಡಿದರೆಂದೂ ಅರೆಬಿಕ್ ಭಾಷೆಯಲ್ಲಿ ‘ಹಬಶಿ’ ಎಂದರೆ ‘ಇಥಿಯೋಪಿಯಾದ ಜನರು’ ಎಂಬ ಅರ್ಥವಿರುವುದರನ್ನೂ ಅವರು ಸೂಚಿಸುತ್ತಾರೆ. ಇತಿಹಾಸ ತಜ್ಞೆ ರೇಖಾ ಪಾಂಡೆಯವರು ಕ್ರಿ.ಶ. ೧೨೩೬ರಷ್ಟು ಹಿಂದೆ ಇದ್ದ ‘ಹಬಶಿ ಗುಲಾಮ’ನೊಬ್ಬನ ಬಗ್ಗೆ ಉಲ್ಲೇಖ ನೀಡಿದ್ದಾರೆ.
ಮೊರೊಕ್ಕೋದಿಂದ ಭಾರತಕ್ಕೆ ಬಂದ ಇಬ್ನ ಬಟೂಟನು ಸೈನಿಕರಾಗಿ ಮತ್ತು ನಾವಿಕರಾಗಿ ಉತ್ತರ ಭಾರತದಿಂದ ಶ್ರೀಲಂಕಾದವರೆಗೆ ಕೆಲಸ ಮಾಡುತ್ತಿದ್ದ ‘ಹಬಶಿ’ಗಳ ಕುರಿತು ವಿಶೇಷ ಉಲ್ಲೇಖ ನೀಡಿದ್ದಾನೆ. ಕ್ರಿ.ಶ. ೧೩೯೪ರಲ್ಲಿ ‘ಮಲ್ಲಿಕ್ ಸರ್ವಾರ್’ ಎಂಬ ಹಬಶಿಯು ‘ತಾನು ದೆಹಲಿ ಸುಲ್ತಾನರ ಗುಲಾಮನಲ್ಲ, ಸ್ವತಂತ್ರ ಅರಸ’ ಎಂದು ಘೋಷಿಸಿಕೊಂಡು ಜಾನ್ಪುರ್ ರಾಜ್ಯವಾಳಿಕೊಂಡಿದ್ದನಂತೆ. ಕ್ರಿ.ಶ. ೧೪೫೯ರ ಹೊತ್ತಿಗೆ ಹಬಶಿಗಳು ದೆಹಲಿಯಿಂದ ಬಂಗಾಳದವರೆಗೆ ವ್ಯಾಪಿಸಿಕೊಂಡದ್ದನ್ನು ಮಧ್ಯಕಾಲೀನ ಇತಿಹಾಸ ತಜ್ಞರು ಗುರುತಿಸಿದ್ದಾರೆ. ಕ್ರಿ.ಶ ೧೪೯೧ರಲ್ಲಿ ಬಂಗಾಳದ ಹುಸೇನ್ ಶಾಹಿ ದೊರೆಗಳು ಹಬಶಿಗಳನ್ನು ದಕ್ಷಿಣಕ್ಕೆ ಓಡಿಸಿದರು. ಹಾಗೆ ಓಡಿ ಬಂದ ಹಬಶಿಗಳು ಕರ್ನಾಟಕದ ಬಹುಮನಿ ಸುಲ್ತಾನರ ಕೈಕೆಳಗೆ ಮಿಲಿಟರಿ ಅಧಿಕಾರಿಗಳಾಗಿ ಕೆಲಸ ಮಾಡಿದ್ದರು. ಬಹುಮನಿ ಸುಲ್ತಾನರ ರಾಜಧಾನಿಯಾಗಿದ್ದ ಬೀದರದಲ್ಲಿರುವ ‘ಹಬಶಿಕೋಟ್’ನಲ್ಲಿ ಇಥಿಯೋಪಿಯಾ ಸೈನಿಕರ ಸಮಾಧಿಗಳಿರುವುದನ್ನು ಈಗಲೂ ಕಾಣಬಹುದು. ಅಹ್ಮದ್ ನಗರದಲ್ಲಿ ಕ್ರಿ.ಶ. ೧೬೦೦-೧೬೨೬ರ ನಡುವೆ ವಜೀರನಾಗಿ ಕೆಲಸ ಮಾಡುತ್ತಿದ್ದ ಮಲಿಕ್ ಅಂಬರನು ಹಬಶಿಯಾಗಿದ್ದ.
ಇವೆಲ್ಲಕ್ಕಿಂತ ಮುಖ್ಯವಾಗಿ ಹಬಶಿಗಳು ಕರ್ನಾಟಕ ಕರಾವಳಿ ಪ್ರಾಂತ್ಯದಲ್ಲಿ ಜಲಸೇನೆಯ ಮುಖ್ಯಸ್ಥರಾಗಿ ಮತ್ತು ಸೈನಿಕರಾಗಿ ಕೆಲಸ ಮಾಡಿದ್ದಾರೆಂದು ಅಲ್ತ್ರಸ್ ಬರೆಯುತ್ತಾರೆ. ಅವರ ಪ್ರಕಾರ ಈ ಘಟನೆಯು ೧೬ನೇ ಶತಮಾನದಲ್ಲಿ ನಡೆದಿದೆ. ಕ್ರಿ.ಶ. ೧೮೧೯ರಲ್ಲಿ ಬ್ರಿಟಿಷರು ಕರಾವಳಿ ಪ್ರಾಂತ್ಯದ ಮೇಲೆ ಹಿಡಿತ ಸಾಧಿಸುವವರೆಗೆ ಹುಬಶಿಗಳು ಕಡಲ ಮೇಲೆ ಒಡೆತನ ಸಾಧಿಸಿದ್ದರು ಎಂದು ಹೇಳಲಾಗಿದೆ. ಹಬಶಿಗಳು ತಯಾರಿಸುತ್ತಿದ್ದ ‘ಮಣಿಸರಕು’ಗಳಿಗೆ ಆಫ್ರಿಕಾದಲ್ಲಿ ಒಳ್ಳೆಯ ಬೇಡಿಕೆ ಇತ್ತೆಂದು ವಿದ್ವಾಂಸರು ಹೇಳಿದ್ದಾರೆ. ಇತಿಹಾಸಕಾರರ ಪ್ರಕಾರ ಕ್ರಿ.ಶ. ೧೫೩೦ರ ಹೊತ್ತಿಗೆ ಭಾರತದಲ್ಲಿ ಸುಮಾರು ೫,೦೦೦ ಹುಬಶಿಗಳಿದ್ದು ಇವರೆಲ್ಲರೂ ಇಥಿಯೋಪಿಯಾ ಮೂಲದವರಾಗಿದ್ದರು. ಇವನ್ನೆಲ್ಲ ಆಧರಿಸಿ ಹೇಳುವುದಾದರೆ ಇಥಿಯೋಪಿಯನ್ನರು ಅಥವಾ ‘ಹುಬಶಿ’ಗಳು ಕ್ರಿ.ಶಕದ ಆರಂಭದಲ್ಲಿ ಭಾರತಕ್ಕೆ ಬಂದಿದ್ದಾರೆ.
ಇವತ್ತು ಹುಬಾಶಿಕಾನ ಕುರಿತೊಂದು ನಾಟಕ ಇದೆ! ಅದಕ್ಕೆ ಇಷ್ಟೆಲ್ಲಾ ಬರೆದೆ. ಗಾಂವ್ಕರ್ ಬಳಗಕ್ಕೆ ಶುಭಾಶಯಗಳುʼ
ಫೋಟೋ ಕೃಪೆ : ಉದಯ ಗಾಂವ್ಕರ್