ಕೇವಲ ಒಂದೇ ವಾರದ ಹಿಂದೆ 40 ರೂ ಇದ್ದ ಟೊಮೆಟೊ ಬೆಲೆ ಸದ್ದಿಲ್ಲದೇ 100 ರ ಗಡಿಯತ್ತ ದಾಪುಗಾಲು ಇಡುತ್ತಿದೆ. ಹವಮಾನ ವೈಪರಿತ್ಯದ ಪರಿಣಾಮ ಈ ಏರಿಕೆ ಎಂಬುದು ವ್ಯಾಪಾರಿಗಳು ಹೇಳುತ್ತಿದ್ದರೆ, ತರಕಾರಿ ಕೊಳ್ಳಲು ಮಾರುಕಟ್ಟೆಗೆ ಹೋದ ಗ್ರಾಹಕ ಜೇಬು ಮುಟ್ಟಿ ನೋಡಿ ವ್ಯಾಪಾರ ಮಾಡುವಂತಹ ಸ್ಥಿತಿ ತಲುಪಿದೆ.
ಹವಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಕೆಲವೆಡೆ ಆಲಿಕಲ್ಲು ಮಳೆಯಾಗಿದ್ದು ಟೊಮೆಟೊ, ಬೀನ್ಸ್, ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಕೆಲವು ತರಕಾರಿ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿವೆ. ಪರಿಣಾಮ, ಉತ್ಪಾದನೆ ಕುಂಠಿತವಾಗಿದ್ದು, ಬೆಲೆಗಳು ದಿಢೀರ್ ಏರಿಕೆಯಾಗಿವೆ. 40 ರಿಂದ 50 ರೂ. ಇದ್ದ ಕೆಜಿ ಟೊಮ್ಯಾಟೋ ಬೆಲೆ ಕೇವಲ ಆರೇಳು ದಿನಗಳಲ್ಲೇ 100 ರ ಗಡಿಯತ್ತ ಹೋಗಿದೆ.
ಅಲ್ಲಲ್ಲಿ ಮಳೆ ಆಗುತ್ತಿರುವುದರಿಂದ ಸೊಪ್ಪಿನ ಬೆಲೆಗಳಲ್ಲಿಯೂ ಏರಿಕೆ ಕಂಡುಬಂದಿದೆ. ಮೆಂತೆಪಲ್ಲೆ 20 ರೂ. ಒಂದು ಕಟ್ಟು ಆಗಿದ್ದರೆ, ಪಾಲಕ್ ಪಲ್ಲೆ 10 ರೂ.ಗೆ ಒಂದು ಕಟ್ಟು ಆಗಿದೆ.ಜತೆಗೆ ಈರುಳ್ಳಿ ಬೆಲೆಯಲ್ಲಿಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, 60- 70 ರೂ.ಏರಿಕೆ ಕಂಡಿದೆ.
ಸೌತೆಕಾಯಿ, ಬೆಂಡೆಕಾಯಿ ಸೇರಿ ಬಹುತೇಕ ತರಕಾರಿ ಬೆಲೆ ಕೆಜಿಗೆ 40 ರಿಂದ 50 ರೂ. ಇದೆ. ಆದರೆ, ಟೊಮ್ಯಾಟೋ ಬೆಲೆ ಮಾತ್ರ ಕಳೆದ ಮೂರ್ನಾಲ್ಕು ದಿನಗಳಿಂದ ಏರಿಕೆಯಾಗಿದ್ದು, ಕೆಜಿ ಬೆಲೆ 100 ರೂ. ಗಡಿಯತ್ತ ತಲುಪಿದೆ. ಇನ್ನು ಮಳೆಯ ಪ್ರಮಾಣ ಕಡಿಮೆ ಆಗದೇ ಇದ್ದಲ್ಲಿ ಸಧ್ಯದಲ್ಲೇ ಟೊಮಾಟೊ 150 ರೂ ಮುಟ್ಟಿದರೂ ಆಶ್ಚರ್ಯವಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ.