ಮಹಾರಾಷ್ಟ್ರ: ಬುಧವಾರ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶೇ.65.02ರಷ್ಟು ಅಂತಿಮ ಮತದಾನವಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಎಸ್. ಚೊಕ್ಕಲಿಂಗಂ ಹೇಳಿದರು.
ಬೀಡ್ ಜಿಲ್ಲೆಯಲ್ಲಿ ಸಣ್ಣಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ ಎಂದರು.
ಇದು 2019ರ ವಿಧಾನಸಭಾ ಚುನಾವಣೆಯಲ್ಲಿ ದಾಖಲಾದ ಮತದಾನಕ್ಕಿಂತ (61.6%) ಅಧಿಕ. ಮುಂಬೈ ನಗರವು ಕೇವಲ 52.07% ಮತದಾನವನ್ನು ದಾಖಲಿಸಿದರೆ, ಮುಂಬೈ ಉಪನಗರದಲ್ಲಿ 55.77%ರಷ್ಟು ಮತದಾನವಾಗಿದ್ದು ಅಂಕಿ-ಸಂಖ್ಯೆಗಳು ಇಲ್ಲಿ ಒಂದಷ್ಟು ಉತ್ತಮವಾಗಿವೆ. ಪುಣೆಯಲ್ಲಿ 60.70% ಮತ್ತು ಥಾಣೆಯಲ್ಲಿ 56.05% ಮತದಾನವಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಕೊಲ್ಲಾಪುರದಲ್ಲಿ ಗರಿಷ್ಠ 76.25%, ಗಡ್ಚಿರೋಲಿ 73.68% ಮತ್ತು ಜಲ್ನಾದ್ಲಲಿ 72.30% ಮತದಾನವಾಗಿದೆ.
ಇದೇ ವೇಳೆ ಲೋಕಸಭೆ ಉಪಚುನಾವಣೆಯೂ ನಡೆದ ನಾಂದೇಡ್ ನಲ್ಲಿ ಶೇ.62.89ರಷ್ಟು ಮತದಾನವಾಗಿದೆ. 288 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 4,136 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಎವಿಎಂ ಮೂಲಕ ಮತ ಚಲಾಯಿಸಿದ್ದಾರೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.