ಬಂಟ್ವಾಳದ ಕೊಳತ್ತಮಜಲು ಬಳಿ ಅಬ್ದುಲ್ ರಹಿಮಾನ್ ಕೊಲೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ, ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದ ವಿಹೆಚ್ ಪಿ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಕದ್ರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಶರಣ್ ಪಂಪ್ವೆಲ್ ಅವರನ್ನು ಬಂಧಿಸಿದ್ದಾರೆ. ಶರಣ್ ಪಂಪ್ವೆಲ್ ಅವರ ಬಂಧನ ತಿಳಿಯುತ್ತಿದ್ದಂತೆ ಮಂಗಳವಾರ ರಾತ್ರಿ ಕದ್ರಿ ಪೊಲೀಸ್ ಠಾಣೆ ಮುಂದೆ ಹಿಂದುತ್ವ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದರು.
ಈ ನಡುವೆ ಪ್ರಚೋದನಕಾರಿ ಭಾಷಣ ಮಾಡುವ ಯಾರನ್ನೇ ಆಗಲಿ ಬಂಧಿಸಿ ಎಂದು ಮುಸ್ಲಿಂ ಮುಖಂಡರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಮೊನ್ನೆ ಶ್ರೀಕಾಂತ್ ಶೆಟ್ಟಿ ಎಂಬಾತ ರಕ್ತಕ್ಕೆ ರಕ್ತ ಅಂತ ಹೇಳಿದ್ದಾನೆ. ಮತ್ತೊಬ್ಬ ಭರತ್ ಕುಮ್ಡೇಲ್ ಎಂಬ ಗೂಂಡಾ, ಪೋಸ್ಟ್ಮಾರ್ಟ್ಂ ಕೂಡ ಮಾಡಲು ಆಗದ ರೀತಿಯಲ್ಲಿ ಕೊಲೆ ಮಾಡುತ್ತೇನೆ ಎಂದಿದ್ದಾನೆ. ಸಾಮಾಜಿಕ ತಾಣಗಳಲ್ಲಿ ಬೆದರಿಕೆ ಹಾಕಿದವರ ವಿರುದ್ಧ 45 ಎಫ್‌ಐಆರ್ ಆಗಿವೆ. ಆದರೆ ಒಬ್ಬಿಬ್ಬರನ್ನು ಬಿಟ್ಟು ಯಾರನ್ನೂ ಬಂಧನ ಮಾಡಲಿಲ್ಲ. ಎಲ್ಲರನ್ನು ಬಂಧಿಸಿ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಒತ್ತಾಯಿಸಿದ್ದಾರೆ.