ಚಂಡೀಗಢ : ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ನಡೆದ ಜಾತ್ರೆಯೊಂದರಲ್ಲಿ ಸ್ಟಂಟ್‌ಮ್ಯಾನ್ ಟ್ಯಾಕ್ಟರ್‌ನಡಿ ಸಿಲುಕಿ ಸಾವನ್ನಪ್ಪಿದ ಹಿನ್ನಲೆಯಲ್ಲಿ, ಪಂಜಾಬ್ ಸರ್ಕಾರವು ಸೋಮವಾರ ಟ್ರ್ಯಾಕ್ಟರ್‌ನೊಂದಿಗಿನ ಯಾವುದೇ ರೀತಿಯ ಸ್ಟಂಟ್ ಮತ್ತು ಅಪಾಯಕಾರಿ ಪ್ರದರ್ಶನವನ್ನು ನಿಷೇಧಿಸಿದೆ.
ಈ ಘಟನೆಯು ಪಂಜಾಬ್‌ನ ಗುರುದಾಸ್‌ಪುರದ ಬಟಾಲಾದಲ್ಲಿ ನಡೆದ ಜಾತ್ರೆಯೊಂದರಲ್ಲಿ ನಡೆದಿದ್ದು, ಸ್ಟಂಟ್‌ಮ್ಯಾನ್ ಅನ್ನು ಸುಖ್ಮನ್‌ದೀಪ್ ಸಿಂಗ್ (29 ) ಎಂದು ಗುರುತಿಸಲಾಗಿದೆ. ಈ ಘಟನೆಯು ಸ್ಟಂಟ್‌ಮ್ಯಾನ್ ತನ್ನದೆ ಆದ ಟ್ಯಾಕ್ಟರ್ ನಲ್ಲಿ ಸಾಹಸ ಪ್ರದರ್ಶಿಸುತ್ತಿರುವಾಗ ತನ್ನ ಮೇಲೆ ಟ್ಯಾಕ್ಟರ್ ಹರಿದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಎಕ್ಸ್ ( X ) ನಲ್ಲಿ ಪೋಸ್ಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, “ಪ್ರಿಯ ಪಂಜಾಬಿಗಳೇ, ಟ್ರಾಕ್ಟರ್ ಅನ್ನು ಹೊಲಗಳ ರಾಜ ಎಂದು ಕರೆಯಲಾಗುತ್ತದೆ. ಅದನ್ನು ಸಾವಿನ ದೇವತೆಯನ್ನಾಗಿ ಮಾಡಬೇಡಿ. ಇನ್ನು ಮುಂದೆ ಟ್ರಾಕ್ಟರ್ ಮತ್ತು ಅದಕ್ಕೆ ಸಂಬಂಧಿತ ಉಪಕರಣಗಳೊಂದಿಗೆ ಯಾವುದೇ ರೀತಿಯ ಸಾಹಸ ಅಥವಾ ಅಪಾಯಕಾರಿ ಪ್ರದರ್ಶನವನ್ನು ಪಂಜಾಬ್‌ನಲ್ಲಿ ನಿಷೇಧಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.