ಚೆನ್ನೈ: ವಂದೇ ಭಾರತ್ ರೈಲು ಬಿಡುಗಡೆಯಾದಾಗಿನಿಂದಲೂ ಆ ರೈಲುಗಳ ಕುರಿತು ಜನರಿಗೆ ಇದ್ದ ಅಸಮಾಧಾನವೆಂದರೆ ಅದರ ಟಿಕೆಟ್ ಬೆಲೆ. ಬಹುತೇಕ ಶತಾಬ್ಧಿ ರೈಲಿನಲ್ಲಿರುವ ಸೌಕರ್ಯಗಳನ್ನೇ ಹೊಂದಿದ್ದ ಈ ರೈಲಿನ ಪ್ರಯಾಣ ಬೆಲೆ ಮಾತ್ರ ವಿಪರೀತವಿತ್ತು. ಹೀಗಾಗಿ ಈ ರೈಲುಗಳಲ್ಲಿ ಓಡಾಡಲು ಜನಸಾಮಾನ್ಯರು ಹಿಂದೆ-ಮುಂದೆ ನೋಡುತ್ತಿದ್ದರು.
ಈಗ ಈ ಸಮಸ್ಯೆಗೆ ಪರಿಹಾರವೆಂಬಂತೆ ಇಂಡಿಯನ್ ರೈಲ್ವೆಯು ಹೊಸ ರೈಲುಗಳನ್ನು ಹಳಿಗಿಳಿಸಿಲು ನಿರ್ಧರಿಸಿದೆ. ಈ ರೈಲಿನ ಟಿಕೇಟು ದರಗಳು ಜನಸಮಾನ್ಯರ ಕೈಗೆಟುಕುವಂತಿದ್ದು, ಇದಕ್ಕೆ ವಂದೇ ಸಾಧಾರಣ್ ಎಂದು ಹೆಸರಿಡಲಾಗಿದೆ. ಆದರೆ ಈ ರೈಲು ವಂದೇ ಭಾರತ್ ರೈಲುಗಳಂತೆ ಎಸಿ ಹೊಂದಿರುವುದಿಲ್ಲ. ಇವು ಸಾಧಾರಣ ಸ್ಲೀಪರ್ ಕೋಚ್, ಮತ್ತು ಸೀಟರ್ ಕೋಚ್‌ಗಳನ್ನು ಹೊಂದಿರಲಿವೆ ಎನ್ನಲಾಗಿದೆ.
ಈಗಾಗಲೇ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿರುವ ಈ ರೈಲುಗಳನ್ನು ಚೈನ್ನೈಯಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ತಯಾರಿಸಲಾಗುತ್ತದೆ. ರೈಲಿನ ಸ್ಲೀಪರ್ ಆವೃತ್ತಿಯು ದೇಶಾದ್ಯಂತ 30 ಮಾರ್ಗಗಳಲ್ಲಿ ಚಲಿಸಲಿದೆ.
ಈ ನಾನ್-ಎಸಿ ರೈಲುಗಳು ಪುಶ್-ಪುಲ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಈ ರೈಲುಗಳಲ್ಲಿ, ಪ್ರತಿ ಕೋಚ್‌ನಲ್ಲಿ ಬಯೋ ವ್ಯಾಕ್ಯೂಮ್ ಶೌಚಾಲಯಗಳು, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಪ್ರತಿ ಸೀಟಿನಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳಂತಹ ಆಧುನಿಕ ಸೌಲಭ್ಯಗಳಿರಲಿವೆ. ಪ್ರಯಾಣಿಕರ ಭದ್ರತೆಯನ್ನು ಬಲಪಡಿಸಲು ಪ್ರತಿ ಕೋಚ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತೆ, ವಂದೇ ಸಾಧಾರಣ್ ರೈಲು ಸ್ವಯಂಚಾಲಿತ ಬಾಗಿಲು ವ್ಯವಸ್ಥೆಯನ್ನು ಹೊಂದಿರಲಿದೆ.
ಈ ರೈಲುಗಳು ಡಿಸೆಂಬರ್ ತಿಂಗಳಿನಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಿವೆ ಎಂದು ಮೂಲಗಳು ತಿಳಿಸಿವೆ. ರೈಲು 22 ಕೋಚ್‌ಗಳನ್ನು ಹೊಂದಿರುತ್ತದೆ ಮತ್ತು ಒಂದು ಸಮಯದಲ್ಲಿ 1834 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. ರೈಲು ಅನುಭವದಲ್ಲಿ ವಂದೇ ಭಾರತ್ ರೈಲಿಗೆ ಸಮಾನವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ದೇಶದಲ್ಲಿ ಎರ್ನಾಕುಲಂ ಮತ್ತು ಗುವಾಹಟಿಯಲ್ಲಿ ಈ ರೈಲುಗಳಿಗೆ ಚಾಲನೆ ಸಿಗಲಿದೆ ಎನ್ನಲಾಗುತ್ತಿದೆ.