ವಾಷಿಂಗ್ಟನ್: ರಷ್ಯಾದಿಂದ ಕಚ್ಚಾ ತೈಲ ಆಮದು ನಿಲ್ಲಿಸಿದರೆ ಮಾತ್ರ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮುಂದುವರಿಯಲಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ. ರಷ್ಯಾದ ತೈಲ ಆಮದನ್ನು ನಿಲ್ಲಿಸುವುದು ಭಾರತದೊಂದಿಗಿನ ವ್ಯಾಪಾರಕ್ಕೆ ಪ್ರಮುಖ ಆಧಾರವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶೇ. 50ರಷ್ಟು ಸುಂಕಗಳ ಬಗ್ಗೆ ಟ್ರಂಪ್ ಹೇಳಿಕೆಯಿಂದ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿರುವಾಗಲೇ ಲುಟ್ನಿಕ್ ಈ ಹೇಳಿಕೆ ನೀಡಿದ್ದಾರೆ. ಅಮೆರಿಕ, ತೈವಾನ್ ಜೊತೆ ಅತಿ ದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಅವರು ತಿಳಿಸಿದರು. ಜೊತೆಗೆ, ಸ್ವಿಟ್ಜರ್‌ಲ್ಯಾಂಡ್ ಜೊತೆಗೂ ಶೀಘ್ರದಲ್ಲೇ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದರು.
ಇತ್ತೀಚೆಗೆ, ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ, “ನನ್ನ ಸ್ನೇಹಿತ ನರೇಂದ್ರ ಮೋದಿಯವರೊಂದಿಗೆ ಮಾತನಾಡಲು ಎದುರು ನೋಡುತ್ತಿದ್ದೇನೆ. ವ್ಯಾಪಾರ ಅಡೆತಡೆಗಳನ್ನು ನಿವಾರಿಸಲು ಚರ್ಚೆಗಳು ನಡೆಯುತ್ತಿದ್ದು, ಎರಡೂ ದೇಶಗಳಿಗೆ ಯಶಸ್ವಿ ಅಂತ್ಯ ಸಿಗಲಿದೆ ಎಂದು ನಾನು ನಂಬುತ್ತೇನೆ” ಎಂದು ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಭಾರತ ಮತ್ತು ಅಮೆರಿಕ ನಿಕಟ ಮಿತ್ರರು ಮತ್ತು ಸಹಜ ಪಾಲುದಾರರು. ನಮ್ಮ ವ್ಯಾಪಾರ ಚರ್ಚೆಗಳು ಭಾರತ-ಅಮೆರಿಕ ಪಾಲುದಾರಿಕೆಯ ಸಾಮರ್ಥ್ಯವನ್ನು ತೋರಿಸುತ್ತವೆ ಎಂದು ನಾನು ನಂಬುತ್ತೇನೆ” ಎಂದು ಹೇಳಿದ್ದರು.
ಉಭಯ ದೇಶಗಳ ನಡುವೆ ಸಾಮರಸ್ಯ ಮೂಡುವ ಈ ಸಂದರ್ಭದಲ್ಲಿ, ಲುಟ್ನಿಕ್ ಅವರ ಈ ಹೇಳಿಕೆ ಬಂದಿದೆ. ಈ ಹಿಂದೆಯೂ ಲುಟ್ನಿಕ್ ಅವರು ಭಾರತದ ಕುರಿತು ಕಠಿಣವಾಗಿ ಮಾತನಾಡಿದ್ದರು. “ಭಾರತ ಶೀಘ್ರದಲ್ಲೇ ಕ್ಷಮೆಯಾಚಿಸಿ ಚರ್ಚೆಗಳಿಗೆ ಹಿಂದಿರುಗುತ್ತದೆ” ಎಂದು ಅವರು ಹೇಳಿದ್ದರು. ಈಗ ಮತ್ತೊಮ್ಮೆ, ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಬೆದರಿಕೆ ಹಾಕುವಂತೆ ಅವರು ಈ ಹೇಳಿಕೆ ನೀಡಿದ್ದಾರೆ.