ಬೆಂಗಳೂರು: ಸೈಬರ್ ವಂಚಕರು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ₹3.75 ಕೋಟಿಗೂ ಹೆಚ್ಚು ವಂಚಿಸಿದ್ದಾರೆ. ಆಧ್ಯಾತ್ಮಿಕ ಗುರು ಸದ್ಗುರು ಅವರ ಡೀಪ್‌ಫೇಕ್ ವೀಡಿಯೊ ನಂಬಿದ್ದೇ ಈ ವಂಚನೆಗೆ ಕಾರಣವಾಗಿದೆ.
ಘಟನೆ ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿ ನಡೆದಿದೆ. ಸಂತ್ರಸ್ತೆ ವರ್ಷಾ ಗುಪ್ತಾ ಅವರು ಫೆಬ್ರವರಿ 25ರಂದು ತಮ್ಮ ಯೂಟ್ಯೂಬ್ ಚಾನೆಲ್ ನೋಡುತ್ತಿದ್ದಾಗ, ಸದ್ಗುರು ಮಾತನಾಡುತ್ತಿರುವಂತೆ ಇರುವ ಒಂದು ಎಐ (ಕೃತಕ ಬುದ್ಧಿಮತ್ತೆ) ವೀಡಿಯೊ ನೋಡಿದರು.
ಆ ವೀಡಿಯೊದಲ್ಲಿ, ಕೇವಲ 250 ಅಮೆರಿಕನ್ ಡಾಲರ್ ಹೂಡಿಕೆಯಿಂದ ಟ್ರೇಡಿಂಗ್ ಮೂಲಕ ಭಾರಿ ಲಾಭ ಗಳಿಸಬಹುದು ಎಂದು ಸದ್ಗುರು ಹೇಳುತ್ತಿರುವಂತೆ ಇತ್ತು. ಡೀಪ್‌ಫೇಕ್ ತಂತ್ರಜ್ಞಾನದ ಬಗ್ಗೆ ತಿಳಿಯದ ವರ್ಷಾ, ಆ ವೀಡಿಯೊವನ್ನು ನಿಜವೆಂದು ನಂಬಿ ಅದರ ಕೆಳಗೆ ನೀಡಿದ ಲಿಂಕ್ ಅನ್ನು ಕ್ಲಿಕ್ ಮಾಡಿದರು.
ಲಿಂಕ್ ಕ್ಲಿಕ್ ಮಾಡಿದ ತಕ್ಷಣ, ವಲೀದ್ ಬಿ ಎಂಬ ವ್ಯಕ್ತಿ ವರ್ಷಾ ಅವರನ್ನು ಸಂಪರ್ಕಿಸಿದರು. ತಾನು ‘ಮಿರಾಕ್ಸ್’ ಎಂಬ ಟ್ರೇಡಿಂಗ್ ಆ್ಯಪ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡ. ವಲೀದ್ ವಿವಿಧ ದೇಶಗಳ ಫೋನ್ ನಂಬರ್‌ಗಳು ಮತ್ತು ಇಮೇಲ್‌ಗಳ ಮೂಲಕ ವರ್ಷಾ ಅವರೊಂದಿಗೆ ಸಂಪರ್ಕದಲ್ಲಿದ್ದ. ನಂತರ, ‘ಮಿರಾಕ್ಸ್’ ಆ್ಯಪ್ ಡೌನ್‌ಲೋಡ್ ಮಾಡಲು ಹೇಳಿ, ಜೂಮ್ ಕರೆಗಳ ಮೂಲಕ ಟ್ರೇಡಿಂಗ್ ತರಬೇತಿ ನೀಡಿದರು. ವಲೀದ್ ಲಭ್ಯವಿಲ್ಲದಿದ್ದಾಗ, ಮೈಕೆಲ್ ಸಿ ಎಂಬ ಇನ್ನೊಬ್ಬ ವ್ಯಕ್ತಿ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದ.
ಫೆಬ್ರವರಿಯಿಂದ ಏಪ್ರಿಲ್ 2025ರ ನಡುವೆ, ವಂಚಕರು ಹೇಳಿದಂತೆ ವರ್ಷಾ ತಮ್ಮ ಬ್ಯಾಂಕ್ ಖಾತೆಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳಿಂದ ₹3.75 ಕೋಟಿ ಹಣವನ್ನು ಅವರಿಗೆ ವರ್ಗಾಯಿಸಿದರು. ನಂತರ ಹಣ ಕಳೆದುಕೊಂಡಿರುವುದು ತಿಳಿದು ಬಂದಾಗ, ಅವರು ಪೊಲೀಸರಿಗೆ ದೂರು ನೀಡಿದರು.
ಪೊಲೀಸರು ಈ ವಂಚನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಡೀಪ್‌ಫೇಕ್ ವೀಡಿಯೊಗಳು ಎಷ್ಟು ಅಪಾಯಕಾರಿಯಾಗಿವೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಬೇಕು ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.