ದೆಹಲಿ: ಇಂದಿನಿಂದ ರೈಲು ಟಿಕೆಟ್ ದರಗಳು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿವೆ. ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಎಸಿ ಇಲ್ಲದ ವರ್ಗಗಳ ಟಿಕೆಟ್ ದರವನ್ನು ಪ್ರತಿ ಕಿ.ಮೀ.ಗೆ 1 ಪೈಸೆ ಮತ್ತು ಎಲ್ಲಾ ಎಸಿ ವರ್ಗಗಳಿಗೆ ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಿಸಲಾಗಿದೆ ಎಂದು ರೈಲ್ವೆ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಈ ಬೆಲೆಗಳು ಜುಲೈ 1ರಿಂದ ಜಾರಿಗೆ ಬರಲಿವೆ ಎಂದು ಸೋಮವಾರ ಆದೇಶ ಹೊರಡಿಸಲಾಗಿದೆ. ಜೂನ್ 24ರಂದು ಪ್ರಸ್ತಾವಿತ ದರ ಹೆಚ್ಚಳದ ಕುರಿತು ರೈಲ್ವೆ ಅಧಿಕಾರಿಗಳು ಸೂಚನೆ ನೀಡಿದ್ದರು. ಇದೀಗ, ಸೋಮವಾರ ದರ ಪಟ್ಟಿಯನ್ನು ರೈಲ್ವೆ ಅಧಿಕೃತವಾಗಿ ಪ್ರಕಟಿಸಿದೆ.
ದೈನಂದಿನ ಪ್ರಯಾಣಿಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಉಪನಗರ ರೈಲುಗಳು ಮತ್ತು ಮಾಸಿಕ ಸೀಸನ್ ಟಿಕೆಟ್‌ಗಳ ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ನಿಯಮಿತ ಎರಡನೇ ದರ್ಜೆಯ ದರಗಳನ್ನು 500 ಕಿ.ಮೀ. ವರೆಗೆ ಹೆಚ್ಚಿಸಲಾಗಿಲ್ಲ.
ಅಂದಹಾಗೆ, ಪ್ರತಿ ಕಿ.ಮೀ.ಗೆ ಅರ್ಧ ಪೈಸೆ ಹೆಚ್ಚಿಸಲಾಗಿದೆ. ಜುಲೈ 1 ರಿಂದ ನಿಯಮಿತ ಸ್ಲೀಪರ್ ಕ್ಲಾಸ್ ಮತ್ತು ಪ್ರಥಮ ದರ್ಜೆ ಪ್ರಯಾಣಿಕರು ಪ್ರತಿ ಕಿಲೋಮೀಟರಿಗೆ ಅರ್ಧ ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ.
ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್, ತೇಜಸ್, ಹಮ್ಸಫರ್, ಅಮೃತ್ ಭಾರತ್, ಮಹಾಮನ, ಗತಿಮಾನ್, ಅಂತ್ಯೋದಯ, ಜನ ಶತಾಬ್ದಿ, ಯುವ ಎಕ್ಸ್‌ಪ್ರೆಸ್, ಎಸಿ ವಿಸ್ಟಾಡೋಮ್ ಕೋಚ್‌ಗಳು, ಅನುಭವ್ ಕೋಚ್‌ಗಳು ಮತ್ತು ನಿಯಮಿತ ನಾನ್-ಸಬರ್ಬನ್ ಸೇವೆಗಳಿಗೆ ವರ್ಗವಾರು ದರ ಹೆಚ್ಚಳವು ಅನ್ವಯಿಸುತ್ತದೆ.
ಜುಲೈ 1ರ ಮೊದಲು ನೀಡಲಾದ ಟಿಕೆಟ್‌ಗಳು ಹಳೆಯ ದರಗಳಲ್ಲಿ ಮಾನ್ಯವಾಗಿರುತ್ತವೆ. ರಿಜರ್ವೇಷನ್ ಶುಲ್ಕಗಳು, ಸೂಪರ್‌ಫಾಸ್ಟ್ ಸರ್‌ಚಾರ್ಜ್‌ಗಳು ಮತ್ತು ಇತರ ಶುಲ್ಕಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ರೈಲ್ವೆ ತಿಳಿಸಿದೆ. ನಿಯಮಗಳ ಪ್ರಕಾರ ಜಿಎಸ್‌ಟಿ ಇರುತ್ತದೆ ಎಂದು ರೈಲ್ವೆ ತಿಳಿಸಿದೆ. ಮತ್ತೊಂದೆಡೆ, ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಆಧಾರ್ ವಿವರಗಳನ್ನು ನೋಂದಾಯಿಸುವುದು ಕಡ್ಡಾಯಗೊಳಿಸಿದೆ.