ಸೆಪ್ಟೆಂಬರ್ ಕ್ರಾಂತಿ ಎಂಬ ಹೇಳಿಕೆಯಲ್ಲಿ ಕ್ರಾಂತಿ ಪದ ಬಳಕೆ ಸರಿಯಲ್ಲ ಎಂದು ಹೇಳಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಮ್ಮ ಸರಕಾರ ಬೀಳುತ್ತದೆ ಎಂದು ಬಿಜೆಪಿಯವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಸೆಪ್ಟೆಂಬರ್ ಕ್ರಾಂತಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, “ಕ್ರಾಂತಿ’ ಪದ ಬಳಕೆ ಸರಿಯಲ್ಲ, ಇದರಿಂದ ಗೊಂದಲ ಸೃಷ್ಟಿಯಾಗುತ್ತದೆ, ಯಾವ ಕ್ರಾಂತಿಯೂ ಆಗದು.
ಸರಕಾರ ಸುಭದ್ರವಾಗಿದೆ. ಬಿಜೆಪಿ ನಾಯಕರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ, ಮೂರು ತಿಂಗಳಲ್ಲಿ ಸರಕಾರ ಬಿದ್ದು ಹೋಗುತ್ತದೆ ಎಂಬ ತಿರುಕನ ಕನಸು ಕಾಣತೊಡಗಿದ್ದಾರೆ. ನಮ್ಮ ಬಟ್ಟಲಲ್ಲಿ ಸೊಳ್ಳೆ ಇದ್ರೆ ಅವರ ಬಟ್ಟಲಲ್ಲಿ ಹೆಗ್ಗಣ ಇದೆ, ಅವರನ್ನು ಅವರು ಉಳಿಸುವುದನ್ನು ನೋಡಿಕೊಳ್ಳಲಿ ಎಂದರು.
ದೇಶದಲ್ಲೇ ಭ್ರಷ್ಟಾಚಾರ
ಮನೆ ಹಂಚಿಕೆ ಭ್ರಷ್ಟಾಚಾರ ಬಗ್ಗೆ ಹೇಳಿಕೆ ನೀಡಿದ ಶಾಸಕ ಬಿ.ಆರ್. ಪಾಟೀಲ್ ಅವರಲ್ಲೂ ಸಿಎಂ ಮಾತನಾಡಿದ್ದಾರೆ, ಭ್ರಷ್ಟಾಚಾರ ಆಗಿದ್ದರೆ ಅ ಬಗ್ಗೆ ಮಾಹಿತಿ ಕೊಡಲಿ. ಇಡೀ ದೇಶದಲ್ಲಿಯೇ ಭ್ರಷ್ಟಾಚಾರ ಇದೆ, ಭ್ರಷ್ಟಾಚಾರ ಇಲ್ಲ ಅಂತ ಹೇಳಲಾಗದು, ಇದರ ನಿರ್ಮೂಲನೆಯನ್ನು ನಾವು ಮಾಡಬೇಕು ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಅವರು ಎಲ್ಲಾ ಕೈ ಶಾಸಕರನ್ನು ಭೇಟಿಯಾಗಲಿದ್ದಾರೆ, ಅವರ ಅಭಿಪ್ರಾಯವನ್ನು ಸಂಗ್ರಹಿಸಿ ನಂತರ ಮುಂದಿನಕ್ರಮ ಕೈಗೊಳ್ಳಲಿದ್ದಾರೆ. ಬೇರೆ ಬೇರೆಯವರ ಅಭಿಪ್ರಾಯ ಬೇರೆ ಬೇರೆ ಇರುತ್ತದೆ, ನಾನೂ ಅವರನ್ನು ಭೇಟಿ ಅಗುತ್ತೇನೆ. ನಮ್ಮ ಅಂತರಿಕ ಸಮಸ್ಯೆ ನಮ್ಮಲ್ಲೇ ಬಗೆಹರಿಸುತ್ತೇವೆ ಎಂದರು.