ಹಿಂದಿಯನ್ನು ಹೆಚ್ಚು ಭಾಷಿಕರು ಬಳಸುತ್ತಿರಬಹುದು. ಆದರೆ ಅದನ್ನು ನಮ್ಮ ಮೇಲೆ ಹೇರಲು ಅದೇನು ರಾಷ್ಟ್ರ ಭಾಷೆ ಅಲ್ಲ. ಹಿಂದಿ ಹೇರಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ವಿಪಕ್ಷಗಳ ಒತ್ತಡಕ್ಕೆ ಮಣಿದು ಮಹಾರಾಷ್ಟ್ರ ಸರಕಾರವು ರಾಜ್ಯದಲ್ಲಿ ತ್ರಿಭಾಷಾ ನೀತಿ ಜಾರಿ ಆದೇಶ ವಾಪಸ್ ಪಡೆದ ಬೆನ್ನಲ್ಲೇ ರಾಜ್ ಠಾಕ್ರೆ ಈ ಮಾತನ್ನು ಹೇಳಿದ್ದಾರೆ. ಹಿಂದಿ ರಾಷ್ಟ್ರಭಾಷೆಯಲ್ಲ. ಬೇರಾವುದೇ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳ ಮೇಲೆ ಹಿಂದಿ ಹೇರಿಕೆ ನಡೆದರೆ ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಶಾಲೆಗಳಲ್ಲಿ 1-5ನೇ ತರಗತಿಗೆ ತ್ರಿಭಾಷಾ ಸೂತ್ರದ ಭಾಗವಾಗಿ ಹಿಂದಿ ಕಲಿಸುವ ಬಿಜೆಪಿ ಸರ್ಕಾರದ ನಿರ್ಣಯಕ್ಕೆ ರಾಜ್ಯಾದ್ಯಂತ ವಿರೋಧ ಭುಗಿಲೆದ್ದ ಬೆನ್ನಲ್ಲೆ, ಸರ್ಕಾರ ತನ್ನ ನಿರ್ಣಯವನ್ನು ಹಿಂಪಡೆದುಕೊಂಡಿದೆ. ಇದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಮಹಾರಾಷ್ಟ್ರದ ವಿಪಕ್ಷ ನಾಯಕ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಹರ್ಷ ವ್ಯಕ್ತಪಡಿಸಿದ್ದಾರೆ.
ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಕೂಡ ಪ್ರತಿಕ್ರಿಯಿಸಿದ್ದು, ಹಿಂದಿ ಹೇರಿಕೆ ವಿರುದ್ಧ ರಾಜಕೀಯ ಪಕ್ಷಗಳ ಜಂಟಿ ಹೋರಾಟ ನಡೆಯಬಾರದು ಎಂಬ ಕಾರಣಕ್ಕೆ ಸರ್ಕಾರವು ಏಕಾಏಕಿ ತ್ರಿಭಾಷಾ ನೀತಿ ರದ್ದು ಮಾಡಿದೆ. ಹಾಗಂತ, ನಮ್ಮ ಹೋರಾಟ ನಿಲ್ಲಬಾರದು, ಮುಂದೆಯೂ ಎಲ್ಲ ವಿಚಾರಗಳಲ್ಲೂ ಇದೇ ರೀತಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ.