ಮಣಿಪುರದ ಚುರಾಚಾಂದ್‌ಪುರ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಸೋಮವಾರ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 60 ವರ್ಷದ ಮಹಿಳೆ ಸೇರಿ ಕುಕಿ ಸಮುದಾಯದ ಹೋರಾಟಗಾರನೂ ಒಬ್ಬ ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ದಾಳಿಯ ಹೋಣೆಯನ್ನು ಯಾವುದೇ ಸಂಘಟನೆ ಈವರೆಗೂ ಹೊತ್ತುಕೊಂಡಿಲ್ಲ. ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಹಾಗೂ ಹೆಚ್ಚುವರಿ ಭದ್ರತಾ ಪಡೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳದಲ್ಲಿ 12 ಕಾಡತೂಸುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರ ಚುರಾಚಾಂದ್‌ಪುರದಿಂದ ಏಳು ಕಿಲೋ ಮೀಟರ್ ದೂರದಲ್ಲಿರುವ ಮೋಂಗ್‌ಜಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ತನಿಖೆ ಪ್ರಕಾರ, ಅತ್ಯಂತ ಸಮೀಪದಲ್ಲೇ ಗುಂಡು ಹಾರಿಸಲಾಗಿದೆ.
ಕುಕಿ ರಾಷ್ಟ್ರೀಯ ಸೇನೆಯ(ಕೆಎನ್‌ಎ) ಉಪ ಕಮಾಂಡರ್-ಇನ್-ಚೀಫ್ ಥಾಪಿ ಹಾವೋಕಿಪ್ ಅವರು ತಮ್ಮ ಇಬ್ಬರು ಅಂಗರಕ್ಷಕರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಕಾರಿನಲ್ಲಿ ಈ ಮೂವರು ಹಾಗೂ ಇತರ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಎಲ್ಲಾ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನೆಯಲ್ಲಿ ಮೃತಪಟ್ಟವರು ಮತ್ತು ಘಟನೆ ನಡೆದ ರೀತಿ ಗಮನಿಸಿದರೆ ಈ ಘಟನೆ ಬಣಗಳ ವೈಷಮ್ಯಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಆದರೆ ಯಾವುದೇ ಗುಂಪು ಇದುವರೆಗೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಘಟನೆಯ ನಂತರ, ಪರಿಸ್ಥಿತಿ ಉಲ್ಬಣಗೊಳ್ಳುವ ಭೀತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭದ್ರತಾ ಸಿಬ್ಬಂದಿ ಧಾವಿಸಿವೆ.