Home ಬ್ರೇಕಿಂಗ್ ಸುದ್ದಿ ಎಚ್.ಎಸ್ ವೆಂಕಟೇಶಮೂರ್ತಿರವರಿಗೆ ಗೀತ ನಮನ ಸಲ್ಲಿಸಿದ ಕಸಾಪ

ಎಚ್.ಎಸ್ ವೆಂಕಟೇಶಮೂರ್ತಿರವರಿಗೆ ಗೀತ ನಮನ ಸಲ್ಲಿಸಿದ ಕಸಾಪ

· ಕವಿ ಎಚ್‌ಎಸ್‌ವಿ ಅಭಿಮಾನಿಗಳು ಭಾಗಿ

· ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಮಚ್ಚುಗೆ

ಹಾಸನ : ಅಗಲಿದ ಕವಿ ಎಚ್.ಎಸ್ ವೆಂಕಟೇಶಮೂರ್ತಿ ಅವರ ಗೌರವಾರ್ಥ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸ್ಕಾರ‍್ಸ್ ಇಂಟರ್ ನ್ಯಾಷನಲ್ ಸ್ಕೂಲ್, ಜ್ಞಾನಧಾರೆ,ಜ್ಞಾನದೀಕ್ಷ ಪ್ಯಾರಾ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಗೀತ ನಮನ ಕಾರ್ಯಕ್ರಮ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜರುಗಿತು.ಎಚ್‌ಎಸ್‌ವಿ ಅಭಿಮಾನಿಗಳು ಹಾಗೂ ಕಲಾಸಕ್ತ ಪ್ರೇಕ್ಷಕ ವರ್ಗದಿಂದ ತುಂಬಿದ್ದ ಸಭಾಂಗಣದಲ್ಲಿ ಕವಿಯ ಭಾವಚಿತ್ರಕ್ಕೆ ಜಿಲ್ಲೆಯ ಹಿರಿಯ ಸಾಹಿತಿಗಳು,ಕನ್ನಡ ಪರ ಸಂಘಟನೆಗಳ ಮುಖಂಡರು,ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ, ಎಚ್‌ಎಸ್‌ವಿ ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ರಚನೆ ಮಾಡಿದ್ದಾರೆ. ಅವರ ಸಾಹಿತ್ಯ ಓದುಗರನ್ನು ಗಂಭೀರವಾದ ಚಿಂತನೆಗೆ ದೂಡುತ್ತದೆ. ಅವರ ಕವಿತೆಗಳಲ್ಲಿನ ಸಾಲುಗಳು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ ಎಂದರು.ಜಿಲ್ಲಾ ಕಸಾಪ ಆಯೋಜಿಸಿದ್ದ ಹೊಯ್ಸಳ ಸಾಹಿತ್ಯೋತ್ಸವ, ಹಾಸನ ಸಾಹಿತ್ಯೋತ್ಸವಗಳಲ್ಲಿ ಡಾ.ಎಚ್‌ಎಸ್‌ವಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾರ್ಗದರ್ಶಕರಾಗಿದ್ದರು. ಕಾರ್ಯಕ್ರಮದ ರೂಪುರೇಷೆಯ ಕುರಿತು ಸಾಕಷ್ಟು ಸಲಹೆ ನೀಡಿದ್ದರು ಎಂದು ನೆನಪಿಸಿಕೊಂಡರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿರ್.ಆರ್ ಬೊಮ್ಮೇಗೌಡ, ಕವಿ ಅಳಿದರೂ ಕವಿತೆ ಅಳಿಯುವುದಿಲ್ಲ ಎಂಬ ಮಾತಿನೊಂದಿಗೆ ಮಾತು ಆರಂಭಿಸಿ, ಕವಿ ಬದುಕಿನ ಸಾರವನ್ನು ಕವಿತೆಯಲ್ಲಿ ಹುದುಗಿಸಿರುತ್ತಾರೆ. ಬುತ್ತಿ ಬಿಚ್ಚಿ ಅದನ್ನು ನಾವು ಸವಿಯಬೇಕಿದೆ ಎಂದರು.ಹಿರಿಯ ಸಾಹಿತಿ ಶೈಲಜಾ ಹಾಸನ್ ಗೀತ ನಮನದ ನಿರೂಪಣೆಯಲ್ಲಿ ಎಚ್‌ಎಸ್‌ವಿ ಅವರ ಬದುಕನ್ನು ಪ್ರೇಕ್ಷಕ ವರ್ಗಕ್ಕೆ ಪರಿಚಯಿಸಿದರಲ್ಲದೆ, ಅವರು ಸಾಗಿ ಬಂದ ಮೈಲುಗಲ್ಲುಗಳನ್ನು ಪರಿಚಯಿಸಿದ ಶೈಲಿಗೆ ಪ್ರೇಕ್ಷಕ ವರ್ಗದಿಂದ ಮೆಚ್ಚುಗೆ ವ್ಯಕ್ತವಾಯಿತು.ಕಾರ್ಯಕ್ರಮದ ಗಂಭೀರತೆ ಅರಿತು ಸೇರಿದ್ದ ಪ್ರೇಕ್ಷಕರಿಂದ ತುಂಬಿದ್ದ ಸಭಾಂಗಣದಲ್ಲಿ ಗೀತ ಗಾಯನದಲ್ಲಿ ಗಾಯಕ-ಗಾಯಕಿಯರ ಕಂಠದಿದ ಮೂಡಿಬಂದ ಗೀತೆಗಳಲ್ಲಿ ಚಪ್ಪಾಳೆಗಳ ಉತ್ತೇಜನ ಸಿಕ್ಕಿತು. ಡಾ.ಎಚ್‌ಎಸ್‌ವಿ ರಚಿತ 16 ಗೀತೆಗಳನ್ನು ಪ್ರಸ್ತುತಿ ಪಡಿಸಲಾಯಿತು.

ಗಾಯಕಿ ಬನುಮ ಗುರುದತ್ತ ಕಂಠದಲ್ಲಿ ಮೂಡಿಬಂದ ರೆಕ್ಕೆ ಇದ್ದರೆ ಸಾಕೆ, ವಾಣಿ ನಾಗೇಂದ್ರ ಪ್ರಸ್ತುತಿ ಪಡಿಸಿದ ಲೋಕದ ಕಣ್ಣಿಗೆ ರಾಧೆಯು ಕೂಡ, ಹೇಮಾ ಗಣೇಶ್ ಧನಿಯಲ್ಲಿ ಮೂಡಿಬಂದ ಅಮ್ಮ ನಾನು ದೇವರಾಣೆ, ಗಾಯಕ ಮಂಜುನಾಥ್ ಕಾಮನ ಬಿಲ್ಲಿನ ಮೇಲೆ ಕೂಗುತಾ ಸಾಗುವ ರೈಲಿದೆ ಗೀತೆಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.ಸ್ಥಳೀಯ ಕಲಾವಿದರಿಂದಲೆ ರೂಪಿಸಲ್ಪಟ್ಟ ಗೀತನಮನ ವಿಭಿನ್ನವಾಗಿ ಮೂಡಿಬಂದಿತಲ್ಲದೆ ಪ್ರೇಕ್ಷಕ ವರ್ಗದಿಂದ ಕಾರ್ಯಕ್ರಮದ ನಿರೂಪಣೆ,ಗೀತೆ,ವಾದ್ಯವೃಂದ ಸೇರಿದಂತೆ ಸಂಪೂರ್ಣ ನಿರ್ವಹಣೆಗೆ ಮೆಚ್ಚುಗೆಯ ಮಾತುಗಳು ಕೇಳಿಬಂದವು.

ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ ಮದನಗೌಡ,ಉದಯರವಿ, ಸಮಾಜ ಸೇವಕ ಲಕ್ಷ್ಮೀಕಾಂತ್(ಕಂಚಮಾರನಹಳ್ಳಿ ಕಾಂತಣ್ಣ),ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್ ವೇಣುಕುಮಾರ್,ಕಸಾಪ ರಾಜ್ಯ ಮಾರ್ಗದರ್ಶಿ ಸಮಿತಿ ಸದಸ್ಯ ಹೆತ್ತೂರು ನಾಗರಾಜ್, ಸಾಹಿತಿ ಎನ್.ಎಲ್ ಚನ್ನೇಗೌಡ, ರೋಟರಿ ಸೆಂಟ್ರಲ್ ಅಧ್ಯಕ್ಷ ರೊ.ನಾಗೇಶ್ ಎಂ.ಡಿ ಕನ್ನಡ ಪರ ಸಂಘಟನೆಗಳ ಮುಖಂಡ ದಿನೇಶ್‌ಗೌಡ,ಹರೀಶ್, ತಾಲೂಕು ಕಸಾಪಗಳ ಅಧ್ಯಕ್ಷರು ಇತರರು ಹಾಜರಿದ್ದರು.

You cannot copy content of this page

Exit mobile version