ನವದೆಹಲಿ: ಇಂಟರ್ನೆಟ್ ಬಳಸದೆ ಕೇವಲ ಕರೆ ಮತ್ತು ಮೆಸೇಜ್ (SMS) ಸೇವೆಯನ್ನು ಬಯಸುವ ಕೋಟ್ಯಂತರ ಮೊಬೈಲ್ ಗ್ರಾಹಕರಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಬಿಗ್ ರಿಲೀಫ್ ನೀಡಿದೆ.ಕೇವಲ ವಾಯ್ಸ್ ಹಾಗೂ ಎಸ್ಎಮ್ಎಸ್ ಆಧಾರಿತ ಕೈಗೆಟುಕುವ ಬೆಲೆಯ ಪ್ಲಾನ್ಗಳನ್ನು ಪರಿಚಯಿಸುವಂತೆ ಟೆಲಿಕಾಂ ಕಂಪನಿಗಳಿಗೆ ಹೊಸ ಆದೇಶ ಹೊರಡಿಸಿದೆ. ಟೆಲಿಕಾಂ ಗ್ರಾಹಕರ ಹಿತರಕ್ಷಣೆ ನಿಯಮಾವಳಿಗಳ (13ನೇ ತಿದ್ದುಪಡಿ) ಅಡಿಯಲ್ಲಿ ಟ್ರಾಯ್ ಈ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದೆ.
ಬದಲಾವಣೆಗೆ ಕಾರಣವೇನು?
ಇತ್ತೀಚಿನ ವರ್ಷಗಳಲ್ಲಿ ಜಿಯೋ, ಏರ್ಟೆಲ್ ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಕೇವಲ ಕರೆ ಸೌಲಭ್ಯವಿರುವ ರೀಚಾರ್ಜ್ ಪ್ಲಾನ್ಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದವು. ಇಂಟರ್ನೆಟ್ ಬಳಸದ ಫೀಚರ್ ಫೋನ್ (ಕೀಪ್ಯಾಡ್ ಫೋನ್) ಬಳಕೆದಾರರು ಸಹ ಅನಿವಾರ್ಯವಾಗಿ ಡೇಟಾ ಒಳಗೊಂಡಿರುವ ದುಬಾರಿ ಪ್ಲಾನ್ಗಳನ್ನು ರೀಚಾರ್ಜ್ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಟ್ರಾಯ್, ಸಾರ್ವಜನಿಕರು ಹಾಗೂ ಟೆಲಿಕಾಂ ಕಂಪನಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ಈ ಹೊಸ ನಿರ್ಧಾರಕ್ಕೆ ಬಂದಿದೆ.
ಹೊಸ ನಿಯಮಾವಳಿಯ ಪ್ರಮುಖ ಅಂಶಗಳು:
- ಡೇಟಾ ಪ್ಲಾನ್ಗಳಂತೆಯೇ 30 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ವಾಯ್ಸ್ ಮತ್ತು ಎಸ್ಎಮ್ಎಸ್ ಪ್ಲಾನ್ಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು.
- ಪ್ರತಿ ತಿಂಗಳು ಒಂದೇ ದಿನಾಂಕದಂದು ನವೀಕರಣಗೊಳ್ಳುವ (Renew) ಸರಳ ಮಾಸಿಕ ಯೋಜನೆಗಳನ್ನು ನೀಡಬೇಕು.
- ಹೆಚ್ಚು ದಿನಗಳ ವ್ಯಾಲಿಡಿಟಿ (Validity) ಬಯಸುವ ಗ್ರಾಹಕರಿಗಾಗಿ ಕನಿಷ್ಠ ಒಂದು ದೀರ್ಘಾವಧಿಯ ‘ವಾಯ್ಸ್ ಮತ್ತು SMS’ ಪ್ಲಾನ್ ಲಭ್ಯವಿರಬೇಕು.
ಬಡ ಮತ್ತು ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲ!
ಟ್ರಾಯ್ನ ಈ ನಿರ್ಧಾರದಿಂದಾಗಿ ಹೆಚ್ಚುವರಿ ಡೇಟಾಗೆ ಹಣ ನೀಡಲಾಗದೆ ಕಷ್ಟಪಡುತ್ತಿದ್ದ ಬಡ ಕುಟುಂಬಗಳು, ವಯೋವೃದ್ಧರು ಹಾಗೂ ಫೀಚರ್ ಫೋನ್ ಬಳಸುವ ಸಾಮಾನ್ಯ ಗ್ರಾಹಕರಿಗೆ ದೊಡ್ಡ ಮಟ್ಟದ ಆರ್ಥಿಕ ಸಮಾಧಾನ ಸಿಗಲಿದೆ. ತಮಗೆ ಅಗತ್ಯವಿರುವ ಸೇವೆಗೆ ಮಾತ್ರ ಹಣ ಪಾವತಿಸುವ ಸ್ವಾತಂತ್ರ್ಯ ಈಗ ಗ್ರಾಹಕರಿಗೆ ಸಿಕ್ಕಂತಾಗಿದೆ.
