Saturday, November 9, 2024

ಸತ್ಯ | ನ್ಯಾಯ |ಧರ್ಮ

ಹವಾಮಾನ ವೈಪರಿತ್ಯದಿಂದ ಸಾವಿನ ಸಂಖ್ಯೆ, ಬೆಳೆಹಾನಿ ಹೆಚ್ಚಳ: ಆತಂಕ ಸೃಷ್ಟಿಸುವ ಭಾರತ ಹವಾಮಾನ ವರದಿ 2024

ಬೆಂಗಳೂರು : 3,200ಕ್ಕೂ ಅಧಿಕ ಮಂದಿಯ ಮರಣ, 32 ಲಕ್ಷ ಹೆಕ್ಟೇರ್ ಫಸಲು ಹಾನಿ, ಸುಮಾರು 2.3 ಲಕ್ಷ ಮನೆಗಳು ಮತ್ತು ಕಟ್ಟಡಗಳು ನೆಲಸಮ ಮತ್ತು 9,400 ಕ್ಕೂ ಹೆಚ್ಚು ಜಾನುವಾರುಗಳು ಸಾವು – ಇದು 2024 ರ ಮೊದಲ ಒಂಬತ್ತು ತಿಂಗಳ 274 ದಿನಗಳಲ್ಲಿ 255 ದಿನಗಳಲ್ಲಿ ಭಾರತದಾದ್ಯಂತ ನಡೆದ ಹವಾಮಾನ ವೈಪರೀತ್ಯದ ಪರಿಣಾಮ. ಇವು ಇತ್ತೀಚಿಗೆ ಬಿಡುಗಡೆಯಾದ ಇಂಡಿಯಾ ಕ್ಲೈಮೇಟ್ ರಿಪೋರ್ಟ್ 2024 ರಲ್ಲಿರುವ ಆತಂಕಕಾರಿ ಅಂಕಿಅಂಶ.

ಇಂಡಿಯಾ ಕ್ಲೈಮೇಟ್ ರಿಪೋರ್ಟ್ 2024‌ – ಇದನ್ನು ನವೆಂಬರ್ 8, ಶುಕ್ರವಾರದಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್ (ಸಿಎಸ್‌ಇ) ಮತ್ತು ಅದರ ಪಾಕ್ಷಿಕ ಪತ್ರಿಕೆ ʼಡೌನ್ ಟು ಅರ್ಥ್ʼ ಪ್ರಕಟಿಸಿವೆ. 

2024 ರಲ್ಲಿ ಭಾರತ ಅತ್ಯಂತ ಹೆಚ್ಚು ಹವಾಮಾನ ವೈಪರಿತ್ಯದ ಸಂಕಷ್ಟಗಳನ್ನು ಕಂಡಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಸಿಎಸ್‌ಇ ಪ್ರಕಟಿಸಿರುವ ಈ ವರದಿ ಮಹತ್ವದ ಅಂಶಗಳನ್ನು ನಮ್ಮ ಮುಂದೆ ಇಡುತ್ತದೆ. ಭಾರತದ ಹವಾಮಾನ ವರದಿ 2023 ಯು 2023 ರ ಮೊದಲ ಒಂಬತ್ತು ತಿಂಗಳುಗಳಲ್ಲಿ 273 ದಿನಗಳಲ್ಲಿ 235 ದಿನಗಳಲ್ಲಿ ಸಂಭವಿಸಿರುವ ವಿಪರೀತ ಹವಾಮಾನ ವೈಪರಿತ್ಯದ ಘಟನೆಗಳನ್ನು ವರದಿ ಮಾಡಿದೆ. ಆ ವರ್ಷ 2,923 ಜನರು ಸತ್ತಿದ್ದರು, 18.4 ಲಕ್ಷ ಹೆಕ್ಟೆರ್ ಕೃಷಿ ಭೂಮಿಯ ಹಾನಿಯಾಗಿತ್ತು.

ಪ್ರತೀ ವರ್ಷ ಹವಾಮಾನ ವೈಪರಿತ್ಯದಿಂದ ಸಂಭವಿಸುವ ದುರಂತಗಳು ಹೆಚ್ಚಾಗುತ್ತಲೇ ಇವೆ ಎಂಬುದನ್ನೇ 2024 ರ ಭಾರತದ ಹವಾಮಾನ ವರದಿಯೂ ಹೇಳುತ್ತದೆ.

ಪೆಟ್ರೋಲ್‌ ಮೊದಲಾದ ಪಳೆಯುಳಿಕೆ ಇಂಧನಗಳಿಂದ ಹೊರಸೂಸುವ ವಿಷಕಾರಿ ಅನಿಲಗಳಿಂದಾಗಿ ಭೂಮಿಯ ತಾಪಮಾನದಲ್ಲಿ ಏರಿಕೆಯಾಗುತ್ತಲೇ ಇದೆ. ಜಗತ್ತಿನ ಬೇರೆ ಬೇರೆ ಭಾಗಗಳು ಹವಾಮಾನ ಬದಲಾವಣೆಯಿಂದಾಗಿ ಸಮಸ್ಯೆಗಳನ್ನು ಎದುರಿಸಿವೆ. ಒಮ್ಮೆ ತಾಪಮಾನ ಹೆಚ್ಚಾದರೆ, ಮತ್ತೊಮ್ಮೆ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದೆ, ಅದರಲ್ಲೂ ಅಕಾಲಿಕ ಮಳೆ ಸುರಿಯುತ್ತಿದೆ.

ಇದಕ್ಕೆ ಭಾರತವೂ ಹೊರತಾಗಿಲ್ಲ. ಭಾರತದಲ್ಲಿ ಒಮ್ಮೆ ತೀವ್ರ ಮಳೆಯಾದರೆ, ಇನ್ನೊಮ್ಮೆ ಮೈ ಸುಡುವ ಬಿಸಿಲು.

ಹವಾಮಾನ ವೈಪರೀತ್ಯಗಳಿಗೆ ಭಾರತವೂ ಸಾಕ್ಷಿಯಾಗಿದೆ. ಇವು ತೀವ್ರ ಮಳೆಯಿಂದ ಹಿಡಿದು ಶಾಖದ ಅಲೆಗಳವರೆಗೆ ಇರುತ್ತದೆ. ಭಾರತೀಯ ಹವಾಮಾನ ಇಲಾಖೆ (IMD) ಹವಾಮಾನವನ್ನು ಮಿಂಚು ಮತ್ತು ಗುಡುಗು, ಭಾರೀ ಮಳೆಯಿಂದ ವಿಪರೀತ ಮಳೆ, ವಿಪರೀತ ಭಾರೀ ಮಳೆ, ಭೂಕುಸಿತ ಮತ್ತು ಪ್ರವಾಹ, ಚಳಿ ಗಾಳಿ, ಶಾಖದ ಅಲೆಗಳು, ಚಂಡಮಾರುತಗಳು, ಹಿಮಪಾತಗಳು, ಧೂಳು ಮತ್ತು ಮರಳು ಬಿರುಗಾಳಿಗಳು, ಸ್ಕ್ವಾಲ್ಸ್, ಆಲಿಕಲ್ಲುಗಳು ಮತ್ತು ಬಿರುಗಾಳಿಗಳು  ಎಂದು ವರ್ಗೀಕರಿಸಿದೆ. ( lightning and thunderstorms, heavy to very heavy, and extremely heavy rainfall, landslides and floods, cold waves, heatwaves, cyclones, snowfall, dust and sandstorms, squalls, hailstorms and gales)

ಸಿಎಸ್‌ಇ ಮತ್ತು ಅದರ ಪತ್ರಿಕೆ ಡೌನ್ ಟು ಅರ್ಥ್‌ನ ಸಂಶೋಧಕರು ಕಳೆದ ಮೂರು ವರ್ಷಗಳಿಂದ ಭಾರತದಾದ್ಯಂತ ಹವಾಮಾನ ವೈಪರೀತ್ಯದ ಘಟನೆಗಳ ಮಾಹಿತಿಯನ್ನು ಕಳೆಹಾಕುತ್ತಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ದೈನಂದಿನ ಮತ್ತು ಮಾಸಿಕ ಹವಾಮಾನ ವರದಿಗಳು, ಕೇಂದ್ರ ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗ (DMD) ಬಿಡುಗಡೆ ಮಾಡಿದ ಡೇಟಾ ಮತ್ತು ಮಾಧ್ಯಮ ವರದಿಗಳನ್ನು (ಮಾರ್ಚ್‌ನಿಂದ ಮೇ ವರೆಗಿನ ಪೂರ್ವ ಮಾನ್ಸೂನ್ ಅವಧಿಯಲ್ಲಿ ಘಟನೆಗಳಿಗಾಗಿ) ಅಧ್ಯಯನ ಮಾಡಿದ್ದಾರೆ.

2024 ರ ಮೊದಲ ಒಂಬತ್ತು ತಿಂಗಳುಗಳಲ್ಲಿ (ಜನವರಿ 1 ರಿಂದ ಸೆಪ್ಟೆಂಬರ್ 30) 93% ದಿನಗಳಲ್ಲಿ ಭಾರತವು ಹವಾಮಾನ ವೈಪರೀತ್ಯವನ್ನು ಎದುರಿಸಿದೆ. ಇದು ಒಟ್ಟು 274 ದಿನಗಳಲ್ಲಿ 255 ದಿನಗಳಲ್ಲಿ ಸಂಭವಿಸಿದ ಘಟನೆಗಳ ಗಂಭೀರತೆಯನ್ನು ಈ ವರದಿ ನಮ್ಮ ಮುಂದಿಡುತ್ತದೆ. ಮಿಂಚು ಮತ್ತು ಚಂಡಮಾರುತಗಳಿಂದ ಹಿಡಿದು ಭಾರೀ ಮಳೆ, ಪ್ರವಾಹ, ಭೂಕುಸಿತಗಳು ಮತ್ತು ಶಾಖದ ಅಲೆಗಳಂತಹ ವಿಕೋಪಗಳಿಗೆ 3,238 ಜನರು ಬಲಿಯಾಗಿದ್ದಾರೆ, 32 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ, 2,35,862 ಮನೆಗಳು ಮತ್ತು ಕಟ್ಟಡಗಳು ನೆಲಸಮವಾಗಿವೆ, 9,457 ಜಾನುವಾರುಗಳು ಸತ್ತಿವೆ. ಇದು ಇಡೀ ಭಾರತದಲ್ಲಿ ನಡೆದಿದೆ.

ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ 27 ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳು ಹೆಚ್ಚಿನ ಸಂಖ್ಯೆಯ ಹವಾಮಾನ ವೀಕೋಪಗಳನ್ನು ಎದುರಿಸಿವೆ. ಕರ್ನಾಟಕ, ಕೇರಳ ಮತ್ತು ಉತ್ತರ ಪ್ರದೇಶ ಈ ವರ್ಷ 40 ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ವಿಪರೀತ ಹವಾಮಾನ ವಿಕೋಪವನ್ನು ಕಂಡಿವೆ. ಹಾಗಾಗಿ ಕೇರಳ (550) ಅತೀ ಹೆಚ್ಚು ಸಾವನ್ನು ದಾಖಲಿಸಿದೆ, ಆ ನಂತರ ಮಧ್ಯಪ್ರದೇಶ (353) ಮತ್ತು ಅಸ್ಸಾಂ (256). ಆಂಧ್ರಪ್ರದೇಶದಲ್ಲಿ ಅತೀ ಹೆಚ್ಚು ಮನೆಗಳು (85,806) ಹಾನಿಗೀಡಾಗಿದ್ದು, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಮಾಣದ ಬೆಳೆ ಹಾನಿಯಾಗಿದೆ.

ಈ ಒಂಬತ್ತು ತಿಂಗಳಲ್ಲಿ 274 ದಿನಗಳಲ್ಲಿ 77 ದಿನಗಳ ಕಾಲ ದೇಶ ಬಿಸಿ ಶಾಖದ ಅಲೆಗಳಿಗೆ ತತ್ತರಿಸಿ ಹೋಗಿತ್ತು, ದೇಶದಾದ್ಯಂತ ಉರಿ ತಾಳಲಾರದೆ 210 ಮಂದಿ ಸಾವನ್ನಪ್ಪಿದರು. ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಮಾನ್ಸೂನ್ ಸೀಸನ್‌ನಲ್ಲಿ ದೇಶದಾದ್ಯಂತ ಪ್ರತಿ ದಿನ ಪ್ರಕೃತಿ ವಿಕೋಪದ ಘಟನೆಗಳು ಕಂಡುಬಂದಿವೆ. 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂತಹ ಘಟನೆಗಳು ವರದಿಯಾಗಿವೆ. ಈ ನಾಲ್ಕು ತಿಂಗಳಲ್ಲಿ 122 ದಿನ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ್ದವು,103 ದಿನ ಮಿಂಚು ಮತ್ತು ಬಿರುಗಾಳಿಗಳು ಕಂಡುಬಂದಿದ್ದವು. ಇದರಲ್ಲಿ ಅತೀ ಹೆಚ್ಚು ಹಾನಿಗೊಳಗಾದ ರಾಜ್ಯ ಅಸ್ಸಾಂ (111 ದಿನ). ಮಾನ್ಸೂನ್‌ನಲ್ಲಿ ದೇಶದಾದ್ಯಂತ 2,716 ಜನರು ಸಾವನ್ನಪ್ಪಿದ್ದಾರೆ ಮತ್ತು 30.4 ಲಕ್ಷ ಹೆಕ್ಟೆರ್ ಬೆಳೆ ಹಾನಿಯಾಗಿದೆ.

2024 ರ ಜನವರಿ ತಿಂಗಳಲ್ಲಿ ತಾಪಮಾನ ಏರಿಕೆಯಿಂದ ಕಂಡುಬಂದ ಒಣಗಿದಂತ ವಾತಾವರಣ 1901 ರಿಂದ ಕಂಡುಬಂದಿರುವ ಒಂಬತ್ತನೇ ಪರಿಸ್ಥಿತಿಯಾಗಿದೆ. ಫೆಬ್ರವರಿಯಲ್ಲಿ 123 ವರ್ಷಗಳಲ್ಲೇ ಎರಡನೇ ಬಾರಿಹೆ ಅತೀ ಹೆಚ್ಚು ತಾಪಮಾನ ದಾಖಲಾಗಿತ್ತು. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನ ಅತ್ಯಧಿಕ ಕನಿಷ್ಠ ತಾಪಮಾನವು 1901 ರಿಂದ ಅತಿ ಹೆಚ್ಚಿನದಾಗಿದೆ. ಪೂರ್ವ ಮತ್ತು ಈಶಾನ್ಯ ಭಾರತವು 123 ವರ್ಷಗಳಲ್ಲಿ 12 ನೇ ಡ್ರೈ ಜುಲೈಯನ್ನು ಕಂಡಿದೆ.

ಭಾರತದ ಹವಾಮಾನ ಇಲಾಖೆಯು ಉರಿಬಿಸಿಯ ರಾತ್ರಿಗಳ ಬಗೆಗಿನ ಡೇಟಾವನ್ನು ಕೂಡ ಕೊಟ್ಟಿದೆ. 2024 ರಲ್ಲಿ ಭಾರತ ಕಂಡ ಅತ್ಯಂತ ಬಿಸಿಯ ರಾತ್ರಿ ಎಂದರೆ 40 ° ಸೆಲ್ಸಿಯಸ್‌ ತಾಪಮಾನದ ರಾತ್ರಿ, ಕನಿಷ್ಠ ತಾಪಮಾನದ ರಾತ್ರಿ ಎಂದರೆ ಸಾಮಾನ್ಯಕ್ಕಿಂತ 4.5 ° – 6.4 ° ಸೆಲ್ಸಿಯಸ್‌ನ ರಾತ್ರಿ. ಇದರಿಂದ ಜನರ ಆರೋಗ್ಯದ ಮೇಲೆ ವ್ಯತಿರೀಕ್ತ ಪರಿಣಾಮಗಳು ಕಂಡುಬಂದಿದ್ದವು. ಫ್ಯಾನ್‌ಗಳ ಅಡಿಯಲ್ಲಿ ಕೂತರೂ ಬಿಸಿಗಾಳಿ ಬರುತ್ತಿತ್ತು, ಹೊರಗೆ ಹೋದರೆ ವಾತಾವರಣ ಇನ್ನೂ ಬಿಸಿ. ಒಟ್ಟಾರೆ ಕೆಂಡದ ಮೇಲೆ ನಿದ್ದೆ ಮಾಡಿದ ಅನುಭವವಾಗುತ್ತಿತ್ತು. 2024 ರ ಮಾರ್ಚ್ ಮತ್ತು ಜೂನ್ ನಡುವೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಬಿಸಿರಾತ್ರಿಯ ಉರಿಯಲ್ಲಿ ಬೆಂದಿವೆ.

ಚಂಡೀಗಢ, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಜೂನ್ ಮಧ್ಯದಲ್ಲಿ ವಿಪರೀತ ತಾಪಮಾನದ ರಾತ್ರಿಗಳನ್ನು ಕಳೆದಿವೆ. ಇವುಗಳಲ್ಲಿ ಚಂಡೀಗಢ, ದೆಹಲಿ ಮತ್ತು ಹರಿಯಾಣವು ಜೂನ್ 15 ರಿಂದ ಜೂನ್ 18 ರವರೆಗೆ ನಾಲ್ಕು ಬಾರಿ “ತೀವ್ರ ತಾಪಮಾನದ ರಾತ್ರಿಗಳನ್ನು” ದಾಖಲಿಸಿವೆ. 

ಆದರೂ ಭಾರತ ಹವಾಮಾನ ವರದಿ 2024 ಹೇಳುವಂತೆ, ಭಾರತದ ಹವಾಮಾನ ಇಲಾಖೆಯು ತಾಪ ಹೆಚ್ಚಿರುವ ರಾತ್ರಿಗಳ ಡೇಟಾವನ್ನು ನೀಡಿಲು ಆರಂಭಿಸಿದರೂ ಉಳಿದ ದೇಶಗಳಂತೆ ಇದು ಸಂಪೂರ್ಣ ತಾಪಮಾನದ ಮಿತಿಯ ಡೇಟಾ ಕೊಡುತ್ತಿಲ್ಲ. 2024 ರಿಂದ ಸಂಚಿತ ಡೇಟಾವನ್ನು ಒದಗಿಸುವುದನ್ನು ನಿಲ್ಲಿಸಿರುವುದರಿಂದ, ವಿಪತ್ತು ನಿರ್ವಹಣಾ ಇಲಾಖೆ ಕೊಡುವ ಮಾಹಿತಿಯಲ್ಲಿ ಸಮಗ್ರತೆ ಇಲ್ಲದೆ, ಅದನ್ನು ಹವಮಾನ ವೈಪರಿತ್ಯದಿಂದ ಉಂಟಾದ ಹಾನಿಯನ್ನು ನಿರ್ಧರಿಸಲು ಬಳಸುವುದರಲ್ಲಿ ಸಮಸ್ಯೆ ಇದೆ. ಅಲ್ಲಿರುವ ಅಂಕಿಅಂಶಗಳು ಅಂದಾಜಿನ ಮೇಲೆ ನಿರ್ಧರಿಸಲ್ಪಟ್ಟಿರುತ್ತವೆ. ಭಾರತದ ಹವಾಮಾನ ವರದಿ 2024 ಹವಾಮಾನ ವೈಪರಿತ್ಯಗಳ ಸಮಗ್ರ ಮಾಹಿತಿ ತಯಾರಿಸುವುದನ್ನು ಒತ್ತಾಯಿಸುತ್ತದೆ.

ಉದಾಹರಣೆಗೆ, ಭಾರತವು ಹವಾಮಾನ ವೈಪರೀತ್ಯಗಳಿಗೆ ಸಾಕ್ಷಿಯಾಗಿರುವ ದಿನಗಳ ಸಂಖ್ಯೆಯು 2022 ರಿಂದ 2024 ಕ್ಕೆ ಸ್ಥಿರವಾಗಿ ಏರಿದೆ. 2022 ರಲ್ಲಿ ಇದು ಮೊದಲ ಒಂಬತ್ತು ತಿಂಗಳಲ್ಲಿ 86% ದಿನಗಳು; 2023 ಕ್ಕೆ ಇದು 88% ಕ್ಕೆ ಏರಿತು ಮತ್ತು ಈಗ 2024 ರಲ್ಲಿ 93% ಆಗಿದೆ. ಜೀವಹಾನಿ ಮತ್ತು ಆರ್ಥಿಕ ನಷ್ಟಗಳು ಕೂಡ ಹೆಚ್ಚಾಗಿವೆ. 2022 ರಲ್ಲಿ 2,755 ಇದ್ದ ಜನರ ಜೀವಹಾನಿಯ ಸಂಖ್ಯೆ 2024 ರಲ್ಲಿ 3,238 ಕ್ಕೆ ಏರಿಕೆಯಾಗಿದೆ. ಕೇವಲ ಮೂರು ವರ್ಷಗಳಲ್ಲಿ 18% ಹೆಚ್ಚಳವಾಗಿದೆ ಎಂದು ವರದಿ ಹೇಳುತ್ತದೆ.

“ಕೇರಳವು ಅತ್ಯಂತ ಕೆಟ್ಟ ಭೂಕುಸಿತವನ್ನು ಕಂಡಿದೆ, ಕೇರಳದ ಪಶ್ಚಿಮ ಘಟ್ಟಗಳ ಅನೇಕ ಭಾಗಗಳಲ್ಲಿ ಇನ್ನೂ ಕಲ್ಲಿನ ಕ್ವಾರಿಗಳು ಕೆಲಸ ಮಾಡುತ್ತಿವೆ. ನಾಳೆ ಇಲ್ಲವೇನೋ ಎಂಬಂತೆ ಅಭಿವೃದ್ಧಿಯ ಕೆಲಸ ನಡೆಯುತ್ತಿದೆ. ಅದೇ ರೀತಿ ಹಿಮಾಲಯ, ದೆಹಲಿ ನಗರವೂ ​​ಅಷ್ಟೇ. ದೆಹಲಿಯ ಪ್ರವಾಹ ಬರೀ ಹೆಚ್ಚು ಮಳೆಯಾದ ಕಾರಣಕ್ಕೆ ಮಾತ್ರ ಅಲ್ಲ, ನಮ್ಮ ನಗರಗಳಲ್ಲಿರುವ ಕೆರೆಗಳು, ಕೊಳಗಳು ಮತ್ತು ಚರಂಡಿಗಳನ್ನು ನಾಶಪಡಿಸಿದ್ದೇ ಕಾರಣ" -  ಸುನೀತಾ ನರೇನ್, ಸಿಎಸ್‌ಇಯ ಮಹಾನಿರ್ದೇಶಕಿ ಮತ್ತು ಡೌನ್ ಟು ಅರ್ಥ್ ಸಂಪಾದಕಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page