ಮಂಗಳೂರು: ವಿದೇಶದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಾಟ್ಸ್‌ಆ್ಯಪ್‌ನಲ್ಲಿ ತ್ರಿವಳಿ ತಲಾಖ್ ಸಂದೇಶ ಕಳುಹಿಸಿದ ಆರೋಪದ ಮೇಲೆ ಕರ್ನಾಟಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಈ ಸಂಬಂಧ ಸುಳ್ಯದ ಜಯನಗರ ನಿವಾಸಿ ಮಿಸ್ರಿಯಾ ಎಂಬವರು ತಮ್ಮ ಪತಿ ಅಬ್ದುಲ್ ರಶೀದ್ ವಿರುದ್ಧ ದೂರು ದಾಖಲಿಸಿದ್ದರು.
ದೂರಿನ ಪ್ರಕಾರ, ಕೇರಳದ ತ್ರಿಶೂರ್ ಮೂಲದ ರಶೀದ್ ಏಳು ವರ್ಷಗಳ ಹಿಂದೆ ಮಿಸ್ರಿಯಾರನ್ನು ಮದುವೆಯಾಗಿದ್ದಾನೆ.
ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಆರೋಪಿ ತನ್ನ ಪತ್ನಿ ಮಿಸ್ರಿಯಾರನ್ನು ಎರಡು ವರ್ಷಗಳ ಹಿಂದೆ ವಿದೇಶಕ್ಕೆ ಕರೆದುಕೊಂಡು ಹೋಗಿದ್ದ. ನಂತರ ತಮ್ಮ ಎರಡನೇ ಮಗುವಿನ ಹೆರಿಗೆಗೆಂದು ಆಕೆಯನ್ನು ವಾಪಸ್ ಕರೆತಂದಿದ್ದ.
ಈ ನಡುವೆ ಕಳೆದ ಆರು ತಿಂಗಳ ಹಿಂದೆ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಬೆಳೆದಿದ್ದವು, ಅದನ್ನು ಎರಡೂ ಕುಟುಂಬಗಳು ಪರಿಹರಿಸಲು ಪ್ರಯತ್ನಿಸಿದ್ದವು. ಆದರೆ, ವ್ಯಕ್ತಿ ತನ್ನ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ಸಂದೇಶ ಕಳುಹಿಸಿದ್ದಾನೆ.
ಈ ಸಂದೇಶದಿಂದ ಆಘಾತಕ್ಕೊಳಗಾದ ಪತ್ನಿ ತನ್ನ ಪತಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.
ಮುಂದಿನ ತನಿಖೆ ಪ್ರಗತಿಯಲ್ಲಿದೆ.