ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ ಎಂಬ ವರದಿಗಳಿವೆ. ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
ಸಾಮಾನ್ಯವಾಗಿ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸಭೆಯ ಪ್ರಮುಖ ಅಂಶಗಳನ್ನು ವಿವರಿಸಲಾಗುತ್ತದೆ. ಈ ಬಾರಿ ಸಂಪುಟ ಸಭೆ ಬಳಿಕ ಈ ಸಂಪ್ರದಾಯ ಪಾಲಿಸಿಲ್ಲ.
ಆದರೆ, ಮಹಿಳಾ ಮಸೂದೆಗೆ ಸಂಪುಟದ ಒಪ್ಪಿಗೆ ನೀಡುವ ಮೂಲಕ ಮಹಿಳಾ ಮೀಸಲಾತಿಗೆ ನಾಂದಿ ಹಾಡಲು ಸಿದ್ಧ ಎಂದು ಮೋದಿ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಮತ್ತು ಜಲವಿದ್ಯುತ್ ಖಾತೆ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಸೋಮವಾರ ರಾತ್ರಿ ಟ್ವೀಟ್ ಮಾಡಿದ್ದರು. ಬಳಿಕ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.
https://x.com/Jairam_Ramesh/status/1703808646558421128?s=20
ಈ ವಿಚಾರವಾಗಿ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವಿಟ್ಟರ್ (X) ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ”ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ಮಹಿಳಾ ಮೀಸಲಾತಿ ಮಸೂದೆಗೆ ಆಗ್ರಹಿಸುತ್ತಿದೆ. ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂಬ ಸುದ್ದಿಯನ್ನು ಸ್ವಾಗತಿಸುತ್ತೇವೆ. ಈ ಹಿಂದೆ ಆಯೋಜಿಸಿದ್ದ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿದ್ದರೆ ಉತ್ತಮವಾಗಿರುತ್ತಿತ್ತು. ವಿಶೇಷ ಅಧಿವೇಶನಗಳು, ಮುಚ್ಚಿದ ಕೋಣೆಗಳ ರಹಸ್ಯ ಚರ್ಚೆಗಳ ಬದಲಿಗೆ, ನಾವು ಎಲ್ಲರ ಬೆಂಬಲವನ್ನು ಸಂಗ್ರಹಿಸಬಹುದಿತ್ತು.” ಎಂದು ಅವರು ಮಸೂದೆಯ ಬಗ್ಗೆ ಕೆಲವು ವಿವರಗಳೊಂದಿಗೆ ಟ್ವೀಟ್ ಮಾಡಿದ್ದಾರೆ.
ರಾಜೀವ್ ಗಾಂಧಿ ಅವರು ಮೇ 1989ರಲ್ಲಿ ಪಂಚಾಯತ್ ಮತ್ತು ಪುರಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಸೇರಿದಂತೆ ಮೊದಲ ಬಾರಿಗೆ ಮಸೂದೆಗಳನ್ನು ಮಂಡಿಸಿದರು ಎಂದು ಜೈರಾಮ್ ರಮೇಶ್ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.
ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ 1993ರ ಏಪ್ರಿಲ್‌ನಲ್ಲಿ ಆ ಮಸೂದೆಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡಿ ಮತ್ತೊಮ್ಮೆ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆದು ಕಾನೂನಾಗಿ ಪರಿವರ್ತಿಸಲಾಯಿತು ಎಂದರು.
ಪ್ರಸ್ತುತ ದೇಶದಲ್ಲಿ ಪಂಚಾಯಿತಿ ಮತ್ತು ಪುರಸಭೆಗಳಲ್ಲಿ 1.5 ಲಕ್ಷ ಮಹಿಳಾ ಜನಪ್ರತಿನಿಧಿಗಳಿದ್ದು, ಇದು ಶೇ.40ಕ್ಕೂ ಹೆಚ್ಚು ಎಂದು ಹೇಳಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಗಾಗಿ ಇತ್ತೀಚೆಗೆ ದೆಹಲಿಯ ಜಂತರ್‌ಮಂತರ್‌ನಲ್ಲಿ ಒಂದು ದಿನದ ಪ್ರತಿಭಟನೆ ನಡೆಸಿದ ಎಂಎಲ್‌ಸಿ ಮತ್ತು ಬಿಆರ್‌ಎಸ್ ನಾಯಕಿ ಕವಿತಾ ಕೂಡ ಈ ವಿಷಯದ ಕುರಿತು ಟ್ವೀಟ್ ಮಾಡಿದ್ದಾರೆ.
“ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಇದು ದೇಶದ ಪ್ರತಿಯೊಬ್ಬ ಮಹಿಳೆಯ ವಿಜಯವಾಗಿದೆ. ಈ ಸಂದರ್ಭದಲ್ಲಿ ದೇಶದ ನಾಗರಿಕರು ಮತ್ತು ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳು.
ಲೋಕಸಭೆಯಲ್ಲಿ ಆಡಳಿತ ಪಕ್ಷಕ್ಕೆ ಸಂಪೂರ್ಣ ಬಹುಮತವಿದೆ. ಯಾವುದೇ ಅಡೆತಡೆಯಿಲ್ಲದೆ ಮಸೂದೆ ಅಂಗೀಕಾರವಾಗಲಿದೆ ಎಂದು ನಾನು ಭಾವಿಸುತ್ತೇನೆ. ಬಿಜೆಪಿ ತನ್ನ 2014 ಮತ್ತು 2019ರ ಪ್ರಣಾಳಿಕೆಯಲ್ಲಿ ಈ ಮಸೂದೆಯ ಬಗ್ಗೆ ಒಂದಲ್ಲ ಎರಡು ಬಾರಿ ಭರವಸೆ ನೀಡಿದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ.
ದೇಶದ ರಾಜಕೀಯದಲ್ಲಿ ಮಹಿಳೆಯರು ಬಹುಮುಖ್ಯ ಪಾತ್ರ ವಹಿಸಲು ಮತ್ತು ತಕ್ಕ ಪಾಲು ಪಡೆಯಲು ಇದು ಸೂಕ್ತ ಸಮಯ. ಇದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಹೊಸ ಅಧ್ಯಾಯಕ್ಕೆ ನಾಂದಿಯಾಗಿದೆ. ಮಹಿಳಾ ಸಬಲೀಕರಣದ ಮೂಲಕ ರಾಷ್ಟ್ರವನ್ನು ಬಲಪಡಿಸುವುದು ಇನ್ನು ದೂರದ ಕನಸಾಗಿ ಉಳಿದಿಲ್ಲ ಎಂದು” ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.