ಬೆಂಗಳೂರು : ದಂಡ ವಸೂಲಿಗೆ ಹೆಚ್ಚಾಗಿ ಬಳಕೆಯಾಗುತ್ತಿರುವ ಬೆಂಗಳೂರಿನ ಸಂಚಾರಿ ಪೊಲೀಸರನ್ನು ಸಂಚಾರದಟ್ಟಣೆ ಸಮಸ್ಯೆ ನಿವಾರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕೆಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.
ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿರುವ ಜಗದೀಶ್ ವಿ ಸದಂ, “ಬೆಂಗಳೂರಿನ ಸಂಚಾರದಟ್ಟಣೆ ಸಮಸ್ಯೆಯು ಇಲ್ಲಿನ ಜನತೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನು ಬಗೆಹರಿಸಬೇಕಾದ ಸಂಚಾರಿ ಪೊಲೀಸ್ ಸಿಬ್ಬಂದಿಗಳು ದಂಡ ವಸೂಲಿ ಮಾಡಲೆಂದೇ ಹೆಚ್ಚಾಗಿ ಬಳಕೆಯಾಗುತ್ತಿರುವುದು ದುರದೃಷ್ಟಕರ. ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲೆಂದು ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ತಪ್ಪಿತಸ್ಥರಿಗೆ ಮನಗೇ ನೋಟಿಸ್ ಕಳುಹಿಸುವ ವ್ಯವಸ್ಥೆ ಕೂಡ ಜಾರಿಯಲ್ಲಿದೆ. ಆದರೂ ಕೂಡ ಬಹುತೇಕ ಸಂಚಾರಿ ಪೊಲೀಸರು ವಾಹನ ಸವಾರರನ್ನು ಅಡ್ಡಗಟ್ಟಿ ದಂಡ ವಿಧಿಸುವುದರಲ್ಲೇ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇದರಿಂದಾಗಿ, ಟ್ರಾಫಿಕ್ ಜಾಮ್ ಆಗುವುದನ್ನು ತಡೆಯುವುದಕ್ಕೆ ಸಂಚಾರಿ ಪೊಲೀಸರ ಕೊರತೆ ಎದುರಾಗಿರುವುದು ಕಂಡುಬರುತ್ತಿದೆ” ಎಂದು ಹೇಳಿದರು.
“ಪಾದಚಾರಿ ಮಾರ್ಗಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಜನರ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡುವುದು ಸಂಚಾರಿ ಪೊಲೀಸರ ಜವಾಬ್ದಾರಿ. ಆದರೆ ಬೆಂಗಳೂರಿನ ಅನೇಕ ರಸ್ತೆಗಳ ಪಾದಚಾರಿ ಮಾರ್ಗಗಳನ್ನು ವ್ಯಾಪಾರಿಗಳು ಅತಿಕ್ರಮಣ ಮಾಡಿಕೊಂಡಿದ್ದರೂ ಸಂಚಾರಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಪಾದಚಾರಿಗಳಿಗೆ ಸಮಸ್ಯೆಯಾಗಿದೆ. ಇದರಿಂದಾಗಿ ಜನರು ರಸ್ತೆಗಳಲ್ಲಿ ಸಂಚರಿಸಿ ಅಪಘಾತ ಸಂಭವಿಸುತ್ತಿರುವುದನ್ನು ಕೂಡ ನೋಡುತ್ತಿದ್ದೇವೆ” ಎಂದು ಜಗದೀಶ್ ವಿ ಸದಂ ಹೇಳಿದರು.
“ಗೃಹರಕ್ಷಕ ದಳದ ಸಿಬ್ಬಂದಿಗಳು ನಿಷ್ಕ್ರಿಯರಾಗಿದ್ದು, ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲಿ ಇಲಾಖೆ ವಿಫಲವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕಂಡುಬರುತ್ತಿದ್ದ ಟ್ರಾಫಿಕ್ ವಾರ್ಡನ್‌ಗಳು ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿಲ್ಲ. ಗೂಗಲ್ ಮ್ಯಾಪ್ ಹಾಗೂ ಡ್ರೋನ್‌ಗಳನ್ನು ಬಳಸಿಕೊಂಡು ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸುವ ಘೋಷಣೆಗಳು ಕೇವಲ ಘೋಷಣೆಗಳಾಗಿಯೇ ಉಳಿದಿವೆ. ವಾಹನ ದಟ್ಟಣೆಯ ಪೀಕ್ ಅವರ್ ಗಳಲ್ಲಿ ಎಚ್ ಜಿ ವಿ ವಾಹನಗಳು ಅಂದರೆ ಭಾರೀ ಸರಕು ವಾಹನಗಳನ್ನು ಲಂಚವನ್ನು ತೆಗೆದುಕೊಂಡು ಬೆಂಗಳೂರಿನ ಒಳಗೆ ಪ್ರವೇಶ ಮಾಡಲು ಅವಕಾಶ ಮಾಡಿ ಕೊಡುತ್ತಿರುವ ನಿಮ್ಮ ಇಲಾಖೆಯ ಎಸಿಪಿಗಳು ಇನ್ಸ್‌ಪೆಕ್ಟರ್‌ಗಳು ಹಾಗೂ ಪೊಲೀಸರ ವಿರುದ್ಧ ಈಗಾಗಲೇ ಭ್ರಷ್ಟಾಚಾರ ನಿಯಂತ್ರಣ ದಳದಲ್ಲಿ ಎಫ್ಐಆರ್ ಆಗಿದ್ದರೂ ಸಹ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಈ ಕಳಂಕಿತ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಬೆಂಗಳೂರಿನ ಹೊರಗೆ ಕಳುಹಿಸಬೇಕು” ಎಂದು ಜಗದೀಶ್ ವಿ ಸದಂ ಆಗ್ರಹಿಸಿದರು.