● ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕರ್ಮಕಾಂಡ
● ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಬಂದಿತ್ತು ಸನ್ನಿ ಲಿಯೋನ್ ಅರೆಬೆತ್ತಲೆ ಭಾವಚಿತ್ರ
● ನೀಲಿಚಿತ್ರತಾರೆಯರ ಫೋಟೋದಿಂದ ಮುಜುಗರಕ್ಕೀಡಾದ ಅಭ್ಯರ್ಥಿ
● ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಲಾಖೆಯ ವೆಬ್ಸೈಟ್ ಗಳು ನೀಲಿಚಿತ್ರಗಳ ತಾಣವಾಗಿದೆಯೇ?
ಈ ಸರ್ಕಾರ ರಚನೆ ಆದಾಗಿನಿಂದ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ದೊಡ್ಡ ಗೊಂದಲ ಮತ್ತು ಅವ್ಯವಸ್ಥೆಯ ಆಗರವಾಗಿದೆ. ಆದರೆ ಈ ಬಾರಿಯಂತೂ ಇನ್ನೂ ಒಂದು ಹಂತ ಕೆಳಗಿಳಿದು ಶಿಕ್ಷಕರಾಗಿ ಪ್ರವೇಶಾತಿ ಬಯಸುವ ಶಿಕ್ಷಕರು ತಮ್ಮ ಪ್ರವೇಶ ಪತ್ರವನ್ನು ತಾವೇ ನೋಡಲು ಆಗದಂತಹ ಅಸಹ್ಯಕ್ಕೆ ಎಡೆಮಾಡಿಕೊಟ್ಟಿದೆ ಈ ಇಲಾಖೆ.
ಶಿಕ್ಷಕರಾಗಿ ಸೇವೆ ಸಲ್ಲಿಸಲು ಬಯಸಿದ ಅಭ್ಯರ್ಥಿಯೊಬ್ಬರು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ನಂತರ, ಅವರ ಅರ್ಹತೆಯ ಅಡಿಯಲ್ಲಿ ಪರೀಕ್ಷೆಗೆ ಪ್ರವೇಶ ಪತ್ರ ಸಿಗುತ್ತದೆ. ಆದರೆ ಪ್ರವೇಶ ಪತ್ರದಲ್ಲಿ ಅವರ ಫೋಟೋದ ಹೊರತಾಗಿ ಸಿಕ್ಕಿದ್ದು ನೀಲಿ ಚಿತ್ರತಾರೆ ಸನ್ನಿ ಲಿಯೋನ್ ನ ಅರೆಬೆತ್ತಲೆ ಫೋಟೋ. ಇಂತಹ ಅಸಹ್ಯದ ಪ್ರಕರಣವೊಂದು ನವೆಂಬರ್ 6 ರಂದು ನಡೆದ KARTET 2022 ರ ಪರೀಕ್ಷೆಯ ಸಂದರ್ಭದಲ್ಲಿ ನಡೆದಿದೆ.
ಆದದ್ದೇನು?
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಶೃತಿ (ಹೆಸರು ಬದಲಿಸಿದೆ) ಎಂಬ ಹೆಣ್ಣು ಮಗಳು ತಮ್ಮ ಒಂದು ಹಂತದ ಶಿಕ್ಷಣ ಮುಗಿಸಿ ತಮ್ಮ ಔದ್ಯೋಗಿಕ ಜೀವನ ನಡೆಸುವ ಹಿನ್ನೆಲೆಯಲ್ಲಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯಂತೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಜಾತಿ, ಮೆರಿಟ್ ಅರ್ಹತೆಯ ಆಧಾರದಲ್ಲಿ ಪ್ರವೇಶ ಪತ್ರವನ್ನೂ ಸ್ವೀಕರಿಸಿದ್ದಾರೆ. ಆದರೆ ಪ್ರವೇಶ ಪತ್ರದಲ್ಲಿ ತಮ್ಮ ಫೋಟೋದ ಬದಲಾಗಿ ಅವರಿಗೆ ಸಿಕ್ಕಿದ್ದು ಅರೆಬೆತ್ತಲಾದ ಸನ್ನಿ ಲಿಯೋನ್ ಫೋಟೋ.
ಒಂದು ಬಾರಿ ಗೊಂದಲ ಮತ್ತು ಆತಂಕಕ್ಕೀಡಾದ ಶೃತಿಯವರು ಎಲ್ಲೋ ಏನೋ ತಪ್ಪಾಗಿದೆ ಎಂದು ಭಾವಿಸಿ ಮತ್ತೊಮ್ಮೆ ಪರಿಶೀಲಿಸಿ ತಮ್ಮ ಪ್ರವೇಶ ಪತ್ರವನ್ನು ಆನ್ಲೈನ್ ಮೂಲಕ ತರಿಸಿದರೂ ಅವರಿಗೆ ಸಿಕ್ಕಿದ್ದು ಮತ್ತದೇ ಸನ್ನಿ ಲಿಯೋನ್ ಫೋಟೋ ಹೊಂದಿರುವ ಪ್ರವೇಶ ಪತ್ರ. ಜೊತೆಗೆ ಸನ್ನಿ ಲಿಯೋನ್ ಫೋಟೋ ಇರುವ ಪ್ರವೇಶ ಪತ್ರದಲ್ಲಿ ಇರುವ ಸಹಿ ಕೂಡಾ ಇವರದ್ದಾಗಿರುವುದಿಲ್ಲ.
ಇದರಿಂದ ತೀವ್ರ ಮನನೊಂದ ಶೃತಿಯವರು ಪರೀಕ್ಷೆ ಬರೆಯುವುದೋ ಅಥವಾ ಬಿಡುವುದೋ ಎಂಬ ಗೊಂದಲ ಮತ್ತು ಆತಂಕಕ್ಕೆ ಒಳಗಾಗುತ್ತಾರೆ. ಪರೀಕ್ಷೆಗೆ ತಯಾರಿ ನಡೆಸಿ, ಓದಲು ಆಸಕ್ತಿ ಕೊಡುವುದು ಬಿಟ್ಟು ಇಲಾಖೆಯ ಅಡಿಯಲ್ಲಿ ಆದ ಗೊಂದಲದ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಹೇಳಿಕೇಳಿ ಸುತ್ತಲಿರುವ ದುಷ್ಟ ಸಮಾಜ ಇದನ್ನೇ ಆಡಿಕೊಳ್ಳಲು ಶುರು ಮಾಡಿದರೆ ಮುಂದೆ ಉದ್ಯೋಗ ಪಡೆಯುವುದಿರಲಿ, ತಲೆ ಎತ್ತಲಾಗದ ಸ್ಥಿತಿ ತಮಗೆ ಬರುವ ಬಗ್ಗೆ ಯೋಚಿಸಲು ಶುರು ಮಾಡುತ್ತಾರೆ.
ಆಗಿರುವ ಗೊಂದಲ ಸರಿಪಡಿಸಿಕೊಳ್ಳಲು ಇಲಾಖೆ ಕೊಟ್ಟ ಹೆಲ್ಪ್ ಲೈನ್ ನಂಬರ್ ಕೂಡಾ ಯಾವ ನರಪಿಳ್ಳೆ ಕೂಡಾ ಸ್ವೀಕರಿಸಲು ಲಭ್ಯರಿರಲಿಲ್ಲ. ಇಂತಹ ಅದ್ವಾನವನ್ನು ಇನ್ಯಾರಿಗೆ ಹೇಳಬೇಕು ಕೇಳಬೇಕು.? ಇದು ಮುಕ್ತವಾಗಿ ಹೇಳಿಕೊಳ್ಳಲೂ ಆಗದ ಪ್ರಕರಣ. ಹಾಗಾಗಿ ಶೃತಿಯವರು ಪರೀಕ್ಷೆ ಬರೆಯುದೋ ಬಿಡುವುದೋ ಎನ್ನುವ ಗೊಂದಲಕ್ಕೆ ಬಿದ್ದಿದ್ದಾರೆ.
ನಂತರ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರವನ್ನು ಸಂಪರ್ಕಿಸಿ ಈ ರೀತಿ ಅನ್ಯಾಯ ಆಗಿದೆ, ಏನು ಮಾಡುವುದು ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರೆ ‘ಓ ಮಿಸ್ಸಾಗಿ ಯಾವ್ದೋ ಒಂದು ಮಾಡೆಲ್ ಫೋಟೋ ಬಂದಿದೆ. ಪರವಾಗಿಲ್ಲ ನಾವು ನಿಮಗೆ ಪರೀಕ್ಷೆ ಬರೆಯೋಕೆ ಅವಕಾಶ ಮಾಡಿಕೊಡುತ್ತೇವೆ. ಬನ್ನಿ’ ಎಂಬ ರೀತಿಯಲ್ಲಿ “ಏನೂ ನಡೆದೇ ಇಲ್ಲ” ಎಂಬಂತೆ ಉತ್ತರ ಬಂದಿದೆ.
ಅಭ್ಯರ್ಥಿ ಪರೀಕ್ಷೆ ಬರೆಯಲು ಇಲಾಖೆ ಅವಕಾಶ ಏನೋ ಮಾಡಿಕೊಟ್ಟಿದೆ. ಆದರೆ ಈ ಗೊಂದಲದಿಂದ ಅಭ್ಯರ್ಥಿಗೆ ಆದ ಗೊಂದಲ, ಪರೀಕ್ಷೆಗೆ ಓದಲು ಆದ ತೊಡಕಿನಿಂದ ಓದಲಾಗದೇ ಒಂದಷ್ಟು ಅಂಕ ಕಡಿಮೆ ಬಂದರೆ ಪ್ರವೇಶಾತಿಯಲ್ಲಿ ವಿನಾಯಿತಿ ಸಿಗುವುದೇ? ಖಂಡಿತಾ ಇಲ್ಲ. ಈಗಾಗಲೇ PSI ಪರೀಕ್ಷಾ ಹಗರಣದಲ್ಲಿ ವಯೋಮಿತಿ ಅಡಿಯಲ್ಲಿ ಅರ್ಹತೆ ಕಳೆದುಕೊಂಡ ಅಭ್ಯರ್ಥಿಗಳು ಯಾವುದೇ ತಪ್ಪನ್ನು ಮಾಡದೇ ಜೀವನಪರ್ಯಂತ ಕೊರಗುವ ಹಂತಕ್ಕೆ ಬಂದಿದ್ದರೆ ಸರ್ಕಾರ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಇಲ್ಲಿ ಉಲ್ಲೇಖನೀಯ.
ತನಗಾದ ಅನ್ಯಾಯದ ಬಗ್ಗೆ ಶಿಕ್ಷಕರ ಹುದ್ದೆಯ ಆಕಾಂಕ್ಷಿ ಅಭ್ಯರ್ಥಿ ಶೃತಿ ಪೀಪಲ್ ಮೀಡಿಯಾ ಜೊತೆಗೆ ತಮಗಾದ ಅನುಭವ ಹಂಚಿಕೊಂಡು ತಮ್ಮ ಅಳಲು ತೋಡಿಕೊಂಡರು. ಇದೊಂದು ಪ್ರಕರಣದಿಂದ ಎಷ್ಟು ಮನನೊಂದಿದ್ದೇನೆ ಎಂಬ ಬಗ್ಗೆಯೂ ಹೇಳಿಕೊಂಡಿದ್ದಾರೆ. ಇತ್ತ ಇರೋ ಒಂದು ಹೆಲ್ಪ್ ಲೈನ್ ಕೂಡಾ ಕರೆ ಸ್ವೀಕರಿಸದೇ ಹೋದಾಗ ಪ್ರತಿಯೊಂದನ್ನೂ ಮೌಖಿಕವಾಗಿ ಅಧಿಕಾರಿಗಳೊಂದಿಗೆ ಹಂಚಿಕೊಳ್ಳುವಾಗ ಆಗುವ ಮುಜುಗರದ ಬಗ್ಗೆ ಆತಂಕದಿಂದಲೇ ತಮ್ಮ ಅನುಭವವನ್ನು ಹಂಚಿಕೊಂಡರು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೀಪಲ್ ಮೀಡಿಯಾ ಪ್ರವೇಶ ಪತ್ರದ ಬಗ್ಗೆ ಒಮ್ಮೆ ಕ್ರಾಸ್ ಚೆಕ್ ಮಾಡಲು ಶೃತಿಯವರ ಐಡಿ ಮತ್ತು ಪಾಸ್ವರ್ಡ್ ಇಟ್ಟು ಆನ್ಲೈನ್ ಮೂಲಕ ಪರಿಶೀಲಿಸಲಾಯಿತು. ಈ ಕ್ಷಣಕ್ಕೂ ಅವರ ಪ್ರವೇಶ ಪತ್ರದಲ್ಲಿ ಬರುತ್ತಿರುವುದು ಸನ್ನಿ ಲಿಯೋನ್ ಅರೆಬೆತ್ತಲೆ ಫೋಟೋ. ಅರ್ಜಿ ಸಲ್ಲಿಸುವಾಗ ಏನಾದರೂ ಮಿಸ್ಟೇಕ್ ಆಗಿರಬಹುದೇ ಎಂದು ಪರಿಶೀಲಿಸಿದಾಗ ಅಂತಹ ಯಾವುದೇ ಲೋಪ ಅಭ್ಯರ್ಥಿ ಕಡೆಯಿಂದ ಆಗಿಲ್ಲ ಎಂಬುದನ್ನು ಪೀಪಲ್ ಮೀಡಿಯಾ ದೃಢೀಕರಿಸಿಕೊಂಡಿದೆ. ಇದಕ್ಕೆ ಮೇಲೆ ನೀಡಿರುವ ಸಲ್ಲಿಸಿದ ಅರ್ಜಿಯ ಪ್ರಿಂಟೌಟ್‌ನ ಫೋಟೋ ಸಾಕ್ಷಿಯಾಗಿದೆ. ಹೀಗಾಗಿ ಇಲ್ಲಿ ಪ್ರಮಾದ ಮತ್ತು ಹೊಣೆಗೇಡಿತನ ಆಗಿರುವುದು ಶಿಕ್ಷಣ ಇಲಾಖೆಯ ಕಡೆಯಿಂದಲೇ ಎಂಬುದು ಸ್ಪಷ್ಟ. ಪ್ರಕರಣ ಬೆಳಕಿಗೆ ಬಂದಮೇಲೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಲಿಲ್ಲ ಎಂದರೆ, ಶಿಕ್ಷಣ ಇಲಾಖೆ ಅದೆಷ್ಟು ಬೇಜವಾಬ್ದಾರಿ ಹೊಂದಿರಬಹುದು. ಅಥವಾ ಎಂತಹ ಅಕ್ರಮಗಳಿದ್ದರೂ ಸಚಿವ ಬಿ.ಸಿ.ನಾಗೇಶ್ ಕೃಪೆಯಿಂದ ಬಚಾವಾಗಬಹುದು ಎಂಬ ನಿರಾತಂಕವೋ?
ಸಾವಿರಾರು ಆಕಾಂಕ್ಷಿಗಳು ಶಿಕ್ಷಕರ ಹುದ್ದೆಗೆ ಪ್ರವೇಶಾತಿಯನ್ನು ಬಯಸಿ ಈಗಾಗಲೇ ನವೆಂಬರ್ 6 ಕ್ಕೆ ಪರೀಕ್ಷೆ ಬರೆದಿದ್ದಾರೆ. ಸಧ್ಯ ಇದೊಂದು ಪ್ರಕರಣ ಪೀಪಲ್ ಮೀಡಿಯಾ ಇಂದ ಬೆಳಕಿಗೆ ಬಂದಿದೆ. ಆದರೆ ಅದೆಷ್ಟು ಪ್ರಕರಣ ಬೆಳಕಿಗೆ ಬಾರದೇ ಉಳಿದಿವೆಯೋ ಗೊತ್ತಿಲ್ಲ. ಇಲ್ಲಿ ಬೆಳಕಿಗೆ ಬಂದಿದ್ದು ಒಂದು ಪ್ರಕರಣ. ಎಷ್ಟೋ ಅಭ್ಯರ್ಥಿಗಳು ಇದನ್ನು ಹೇಳಿಕೊಳ್ಳಲೂ ಆಗದೇ ಅಧಿಕಾರಿಗಳೊಂದಿಗೆ ಅಲ್ಲಲ್ಲೇ ಅನುಮತಿ ಪಡೆದು ಪರೀಕ್ಷೆ ಬರೆದಿರಬಹುದು ಎಂಬ ಅನುಮಾನ ದಟ್ಟವಾಗಿದೆ. ಸ್ಪಷ್ಟವಾಗಿ ಇದೊಂದು ನಾಚಿಕೆಗೇಡಿನ ಪ್ರಕರಣ.
ಈ ಬಗ್ಗೆ ಪೀಪಲ್ ಮೀಡಿಯಾ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಸಂಪರ್ಕಿಸಿದೆ. ಆದರೆ ಸಾಹೇಬ್ರು ಮೀಟಿಂಗ್ ನಲ್ಲಿ ಇದ್ದಾರೆ ಎಂಬ ಪ್ರತಿಕ್ರಿಯೆ ಅಷ್ಟೆ ಸಿಕ್ಕಿದೆ. ಇನ್ನು ಇಲಾಖೆಯ ಕಮಿಷನರ್ ಕಛೇರಿ ಸಂಪರ್ಕಿಸಿದರೂ ಕಛೇರಿ ದೂರವಾಣಿ ಕರೆ ಹೆಲ್ಪ್ ಲೈನ್ ಸೆಂಟರ್ ಗಿಂತ ಭಿನ್ನವಾಗೇನೂ ಇಲ್ಲ.
ಹಾಗಾದರೆ ಆದ ಅನ್ಯಾಯದ ಬಗ್ಗೆ ಯಾರನ್ನು ಕೇಳೋದು.? ಇನ್ನೂ ಎಷ್ಟು ಅಭ್ಯರ್ಥಿಗಳಿಗೆ ಇದೇ ರೀತಿ ಆಗಿರಬಹುದು? ಇದೇನಾದರೂ ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ಸ್ಪರ್ಧೆಯಿಂದ ದೂರವಿಡಲು ಒಂದು ವ್ಯವಸ್ಥಿತ ಹುನ್ನಾರವೇ? ತನಿಖೆ ನಡೆಸಿದರಷ್ಟೇ ಸತ್ಯ ಹೊರಗೆ ಬರಲು ಸಾಧ್ಯ. ಅರ್ಥಿಗಳ ಮನೋಸ್ಥೈರ್ಯ ಕುಗ್ಗಿಸಲು ಇಂತಹ ವಿಕೃತಿ ಪ್ರದರ್ಶಿಸಿದರೆ ಒಂದೋ ಅಭ್ಯರ್ಥಿ ಪರೀಕ್ಷೆ ಬರೆಯದೇ ದೂರ ಉಳಿಯಬಹುದು. ಆಗ ತಮ್ಮದೇ ಅಭ್ಯರ್ಥಿಗಳನ್ನು ಒಳಗೆ ಪ್ರವೇಶಿಸುವ ಹುನ್ನಾರ ಕೂಡಾ ನಡೆದಿರುವುದು ಸಾಧ್ಯತೆ ಇದೆ. ಈ ಕೃತ್ಯ ಉದ್ದೇಶಪೂರ್ವಕವಾಗಿ ನಡೆಸಿದ ಹಗರಣ ಎಂದೇ ಅಭ್ಯರ್ಥಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಇಲಾಖೆ ಇದೂ ಸಹ ಕಣ್ತಪ್ಪಿನಿಂದಾದ ಪ್ರಮಾದ ಎಂದು ಕೈತೊಳೆದುಕೊಳ್ಳುವ ಕಾಟಾಚಾರದ ಹಗರಣ ಇದಲ್ಲ. ಈ ಪ್ರಕರಣದಲ್ಲಿ ಯಾರ ಕಡೆಯಿಂದ ಈ ತಪ್ಪು ನಡೆದಿದೆ ಎಂಬುದನ್ನು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲವೆಂದರೆ ಸಚಿವ ಬಿ.ಸಿ.ನಾಗೇಶ್ ನೇರವಾಗಿ ಪ್ರಕರಣದ ಹೊಣೆ ಹೊರಬೇಕಾಗುತ್ತದೆ.