ಕಳೆದ ಬಜೆಟ್ಟಿನಲ್ಲಿ ಏಳು ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದ ಸರಕಾರವು ಈಗ ವಿಚಿತ್ರ ಷರತ್ತುಗಳನ್ನು ಹಾಕುವ ಮೂಲಕ ಈ ಜಿಲ್ಲೆಗಳ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಈ ವಿವಿಗಳಿಗೆ ಯಾವುದೇ ಹೊಸ ಜಮೀನು ಮಂಜೂರು ಮಾಡದೆ, ಯಾವುದೇ ಹೊಸ ಸಿಬ್ಬಂದಿ ನೇಮಿಸದಂತೆ ಷರತ್ತಿನಲ್ಲಿ ತಿಳಿಸುವ ಮೂಲಕ ಉತ್ತರ ಕರ್ನಾಟಕ ಮತ್ತು ಕರ್ನಾಟಕ ಇತರ ಜಿಲ್ಲೆಗಳಿಗೆ ಘೋರ ಅನ್ಯಾಯವನ್ನು ಎಸಗಿದೆ.
ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಸಹಿ ಮಾಡಿರುವ ಕರ್ನಾಟಕ ಸರ್ಕಾರದ ನಡಾವಳಿಗಳ ಅಧಿಕೃತ ಆದೇಶ ಪೀಪಲ್ ಮೀಡಿಯಾಗೆ ಲಭ್ಯವಾಗಿದ್ದು, ಹಿಂದುಳಿದ ಜಿಲ್ಲೆಗಳಿಗೆ ವಿಶೇಷವಾಗಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರ ಕನಸಿಗೆ ತಣ್ಣೀರೆರಚಿರುವುದು ಸ್ಪಷ್ಟವಾಗುತ್ತದೆ.
ಪ್ರಸ್ತುತ ಹೊಸ ವಿವಿಗಳನ್ನು ಘೋಷಿಸಲಾಗಿರುವ ಏಳು ಜಿಲ್ಲೆಗಳಲ್ಲಿ, ನಾಲ್ಕು ಉತ್ತರ ಕರ್ನಾಟಕದವು. ಬಹುತೇಕ ಎಲ್ಲವೂ ಹಿಂದುಳಿದ ಜಿಲ್ಲೆಗಳು, (ಹಾಸನ ಹೊರತುಪಡಿಸಿ) ಕಳೆದ ಬಜೆಟ್ಟಿನಲ್ಲಿ ಈ ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ಈಗ ಷರತ್ತುಗಳನ್ನು ನೋಡಿದರೆ, ಇರುವ ಸ್ನಾತಕೋತ್ತರ ಕೇಂದ್ರಗಳನ್ನೇ ವಿವಿಗಳೆಂದು ಘೋಷಿಸಿ ಕೈ ತೊಳೆದುಕೊಂಡಿದೆ ಸರ್ಕಾರ. ಹೊಸ ಕಟ್ಟಡವಾಗಲಿ, ಸಿಬ್ಬಂದಿಯಾಗಲಿ, ಭೂಮಿಯಾಗಲಿ ಮಂಜೂರಾಗದ ಇರುವ ವ್ಯವಸ್ಥೆಗೇ ಹೊಸ ಹೆಸರಿಟ್ಟು ವಿವಿ ಘೋಷಣೆಯೆಂದರೆ ಅದನ್ನು ಹೇಗೆ ಒಪ್ಪುವುದೆನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.
ಸಾಂಪ್ರದಾಯಿಕ ವಿವಿಗಳಿಗಿಂತ ಭಿನ್ನವಾಗಿ “ತಂತ್ರಜ್ಞಾನದ ಗರಿಷ್ಠ ಬಳಕೆ”ಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಬಳಸದೇ ಈ ವಿವಿಗಳನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆಯಂತೆ! ಇದರ ಅರ್ಥವೇನು? ಈಗ ಕಾರ್ಯನಿರ್ವಹಿಸುತ್ತಿರುವ ವಿವಿಗಳು ತಂತ್ರಜ್ಞಾನ ಬಳಸಿಕೊಳ್ಳದೆ, ಮಾನವ ಸಂಪನ್ಮೂಲ ಪೋಲು ಮಾಡುತ್ತಿವೆಯೇ? ಹೊಸ ವಿವಿಗಳು ಗರಿಷ್ಠ ತಂತ್ರಜ್ಞಾನ ಬಳಸಿಕೊಳ್ಳಬಹುದಾದರೆ ಹಳೆಯ ವಿವಿಗಳು ಯಾಕೆ ಬಳಸಿಕೊಳ್ಳಲಾಗದು?
ಈ ಜಿಲ್ಲೆಗಳ ಜನರು ತಮ್ಮ ಜಿಲ್ಲೆಗೂ ವಿವಿ ಬಂತು ಎಂದು ಹರ್ಷಪಟ್ಟಿದ್ದರು. ಈಗ ಇರುವ ಸ್ನಾತಕೋತ್ತರ ಕೇಂದ್ರಕ್ಕೇ ಬೋರ್ಡು ಬದಲಾಯಿಸುತ್ತಿದೆ ಸರ್ಕಾರ. ಉಳಿದಿರುವುದು ಜಮೀನು, ಕಟ್ಟಡ ವರ್ಗಾವಣೆಯ ತಾಂತ್ರಿಕ ಕೆಲಸಗಳು ಮಾತ್ರ. ಇದನ್ನೇ ಹೊಸ ವಿಶ್ವ ವಿದ್ಯಾಲಯ ಸ್ಥಾಪನೆಯೆನ್ನುವುದಾದರೆ ಇದನ್ನು ಕೇವಲ ಗಿಮಿಕ್ ಎನ್ನದೆ ಬೇರೆ ಯಾವ ಹೆಸರಿನಿಂದ ಕರೆಯಲು ಸಾಧ್ಯ?
ವಿವಿಗಳ ಸ್ಥಾಪನೆಗೆ ಸಂಬಂಧಸೊದಂತೆ ಸರಕಾರವು ಒಟ್ಟು 12 ಷರತ್ತುಗಳನ್ನು ವಿಧಿಸಿದ್ದು, ಮೊದಲ ಮೂರು ಷರತ್ತುಗಳು ಈ ಕೆಳಕಂಡಂತಿವೆ.
- ನೂತನ 07 ವಿಶ್ವವಿದ್ಯಾಲಯಗಳು ಪ್ರಸ್ತುತ ಇರುವ ಸ್ನಾತಕೋತ್ತರ ಕೇಂದ್ರಗಳಲ್ಲಿಯೇ ಕಾರ್ಯನಿರ್ವಹಿಸತಕ್ಕದ್ದು,
- ನೂತನ 07 ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಯಾವುದೇ ಜಮೀನನ್ನು ಖರೀದಿಸುವಂತಿಲ್ಲ ಹಾಗೂ ಹೊಸ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ.
- ಈಗಾಗಲೇ ಮಾತ್ರ ವಿಶ್ವವಿದ್ಯಾಲಯಗಳಿಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಅವಶ್ಯ ಹುದ್ದೆಗಳನ್ನು ಈ 07 ನೂತನ ವಿಶ್ವವಿದ್ಯಾಲಯಗಳಿಗೆ ಬಳಸಿಕೊಳ್ಳುವುದು ಹಾಗೂ ಯಾವುದೇ ಹೊಸ ಹುದ್ದೆಗಳನ್ನು ಸೃಜಿಸುವಂತಿಲ್ಲ. ಈ ಉದ್ದೇಶಕ್ಕಾಗಿ ಯಾವುದೇ ಹೊಸ ಹುದ್ದೆಗಳನ್ನು ಸೃಜಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ.