ನಾನು ರೀಲ್‌ ನಾಗವಲ್ಲಿ ಅಲ್ಲ, ಟ್ರೋಲ್‌ಗಳ ಪಾಲಿಗೆ ಒರಿಜಿನಲ್‌ ನಾಗವಲ್ಲಿ: ಪ್ರತಿಭಾ ಕುಳಾಯಿ ಕಿಡಿ

ಮಂಗಳೂರು : ಆರ್‌ ಎಸ್‌ ಎಸ್‌, ಬಿಜೆಪಿಯ ಟ್ರೋಲ್‌ ಗಳು ಇಂತಹ ಟ್ರೋಲ್‌ ಮೂಲಕ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ. ನಾನು ರಾಣಿ ಅಬ್ಬಕ್ಕ ಹುಟ್ಟಿದ ಊರಿನಲ್ಲಿ ಹುಟ್ಟಿದವಳು. ನಾನು ಆ ಸಿನಿಮಾದಲ್ಲಿನ ರೀಲ್ ನಾಗವಲ್ಲಿ ಅಲ್ಲ, ಒರಿಜಿನಲ್ ನಾಗವಲ್ಲಿ.‌ ಈ ಟ್ರೋಲ್‌ಗಳಿಗೆಲ್ಲಾ ಹೆದರುವವಳಲ್ಲʼ ಎಂದು ಮಾಜಿ ಕಾರ್ಪೊರೇಟರ್‌, ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ ಇಂದು ಕೆಂಡಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುರಿತು ಬರುತ್ತಿರುವ ಕೀಳು ಮಟ್ಟದ ಅಪಪ್ರಚಾರ ಮತ್ತು ಟ್ರೋಲ್‌ ಕುರಿತು ಸುದ್ದಿಗಾರರೊಂದಿಗೆ ಮಾತಾಡಿದ ಅವರು ಬಿಜೆಪಿಯವರು ಮಹಿಳೆಯರನ್ನು ನಡೆಸಿಕೊಳ್ಳುವ ಸಂಸ್ಕಾರದ ಕುರಿತು ಕಿಡಿಕಾರಿದ್ದಾರೆ.

ಇತ್ತೀಚೆಗೆ ನಡೆದ ಸೂರತ್‌ಕಲ್‌ ಟೋಲ್‌ ಗೇಟ್‌ ತೆರವು ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ ವಿರುದ್ದ  ಕಾಂತಾರ–2, ನಾಗವಲ್ಲಿ ಇನ್ನಿತರ ಹೆಸರುಗಳನ್ನಿಟ್ಟು ವಿಡಿಯೋ ಮಾಡಿ ಟ್ರೋಲ್‌ ಮಾಡಿದ್ದಲ್ಲದೇ ಅಶ್ಲೀಲವಾಗಿ ಟ್ರೋಲ್‌ ನಡೆದಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಟೋಲ್‌ ಗೇಟ್‌ ವಿರೋದಿ ಹೋರಾಟದ ಸಂದರ್ಭದಲ್ಲಿ ನೆಲದ ಮೇಲೆ ಬಿದ್ದಿರುವ ಪ್ರತಿಭಾ ಕುಳಾಯಿ ಅವರನ್ನು ಪೊಲೀಸರು ಎಳೆಯುತ್ತಿರುವ ಫೋಟೋವೊಂದನ್ನು ಫೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದ ಕೆ.ಆರ್.ಶೆಟ್ಟಿ ಅಡ್ಯಾರ್‌ ಪದವು ಎಂಬ ವ್ಯಕ್ತಿಯ ಪೋಸ್ಟನ್ನು ಆರೆಸ್ಸೆಸ್‌ ಬಿಜೆಪಿ ಬೆಂಬಲಿತ ಕಹಳೆ ನ್ಯೂಸ್‌ ಸಂಪಾದಕ ಶ್ಯಾಮ ಸುದರ್ಶನ್‌ ಭಟ್‌ ಹೊಸಮೂಲೆ ಹಂಚಿಕೊಂಡಿದ್ದ. ಅದರಲ್ಲಿ ಅವನು “ಮಲಗಿ ಒಳ್ಳೆ ಅಭ್ಯಾಸ ಉಂಟು ಮಾರ್ರೆ, #ಓರಾಟ, #ಪ್ರತಿಭೆ #ಕುಳಾಯಿ ಎಂದು ರೇಪಿಸ್ಟ್‌ ಭಾಷೆಯಲ್ಲಿ ಬರೆದುಕೊಂಡಿದ್ದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ತನ್ನನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅಖಿಲ ಬಾರತೀಯ ವಿದ್ಯಾರ್ಥಿ ಪರಿಷತ್‌ ಗಳಲ್ಲಿ ಕೆಲಸ ಮಾಡಿದವನು ಎಂದು ಸಹ ಈ ಶ್ಯಾಮ ಭಟ್‌ ಪರಿಚಯ ಬರೆದುಕೊಂಡಿದ್ದನಲ್ಲದೇ ಹಲವು ಬಿಜೆಪಿ ಮುಖಂಡರ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ.

ಆರೆಸ್ಸೆಸ್‌ ಬೆಂಬಲಿತ ಕಹಳೆ ನ್ಯೂಸ್‌ ಸಂಪಾದಕ ಆರ್‌ ಎಸ್‌ ಎಸ್‌ ಕಾರ್ಯಕರ್ತ ಶ್ಯಾಮ ಸುದರ್ಶನ್‌ ಭಟ್‌ ಹೊಸಮೂಲೆಯ ಪೋಸ್ಟ್‌
ಆರ್‌ ಎಸ್‌ ಎಸ್‌ ಕಾರ್ಯಕರ್ತ ಶ್ಯಾಮ ಸುದರ್ಶನ್‌ ಭಟ್‌ ಹೊಸಮೂಲೆಯ ಪ್ರೊಫೈಲ್‌

“ನಾನು ಒಂದು ಹಿಂದುಳಿದ ವರ್ಗದ ಮಹಿಳೆಯಾಗಿ ಬಿಲ್ಲವ ಸಮಾಜಕ್ಕೆ ಸೇರಿದವಳು. ಒಂದು ಸಲ ಬಿಜೆಪಿ ಉಪಾಧ್ಯಕ್ಷ ಜಗದೀಶ್‌ ಅಧಿಕಾರಿ ನಮ್ಮ ಸಮುದಾಯದ ಬಗ್ಗೆ ತುಂಬಾ ಕೇವಲವಾಗಿ ಮಾತನಾಡಿದ್ದ. ಜನಾರ್ಧನ್‌ ಪೂಜಾರಿ ಬಗ್ಗೆ ಕೇವಲವಾಗಿ ಮಾತನಾಡಿದ್ದ. ಆ ದಿನಗಳಲ್ಲಿ ನಾನು ಜಗದೀಶ್‌ ಅಧಿಕಾರಿಯ ಮುಖಕ್ಕೆ ಮಸಿ ಬಳಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಘೋಷಿಸಿದ ನಂತರ ಸ್ವತಃ ಅವರೇ ಬಂದು ನನ್ನ ಬಳಿ ಕ್ಷಮೆ ಕೇಳಿದ್ದಾರೆ ಎಂದು ಹೇಳಿದರು.

ಹಾಲಪ್ಪ, ರಘುಪತಿ ಭಟ್‌, ರೇಣುಕಾಚಾರ್ಯ, ಜಾರಕಿಹೊಳಿ ಇಂತಹ ನಾಚಿಕೆಗೆಟ್ಟವರು ಲಂಚದ ಹೆಸರಿನಲ್ಲಿ ಅವರ ವಿಡಿಯೋ ವೈರಲ್‌ ಆಗಿವೆ.  ಇವತ್ತು ರಾಜಕಾರಣ ಮಾಡುತ್ತಾ ಇದಾರೆ, ಚುನಾವಣೆಗೆ ನಿಲ್ಲುತ್ತಾ ಇದ್ದಾರೆ, ಜನರನ್ನು ಹೆದರಿಸುತಿದ್ದಾರೆ. ಈ ಟೋಲ್‌ ಗೇಟ್‌ ಎಂಬುದು ಶಾಸಕರುಗಳಿಗೆ ವಸೂಲಿ ಕೇಂದ್ರವಾಗಿದೆ ಅದಕ್ಕೆ ಅದನ್ನು ಮುಚ್ಚುತ್ತಿಲ್ಲ ಎಂದು ಪ್ರತಿಭಾ ಕುಳಾಯಿ ಕಿಡಿಕಾರಿದ್ದಾರೆ.

“RSS ಪತ್ರಿಕೆ ನಡೆಸುವ ಶ್ಯಾಮ್‌ ಸುದರ್ಶನ್‌ ಭಟ್ ಹೊಸಮೂಲೆ  ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಅತ್ಯಂತ ಕೆಟ್ಟದಾಗಿ ಬಿಂಬಿಸಿ ಅವಾಚ್ಯ ಶಬ್ಧಗಳಿಂದ ಹರಿದು ಬಿಟ್ಟಿದ್ದಾರೆ. ಇವರು ಯಾವುದೇ ಮೇಲಿನ ಸ್ಥಾನದಲ್ಲಿದ್ದರೂ ನಾನು ಒಬ್ಬ ಮಹಿಳೆಯಾಗಿ ಏನು ಮಾಡಬೇಕೋ ಅದನ್ನು ಮಾಡಿ ತೋರಿಸ್ತೇನೆ, ಈ ರೀತಿ ಮಾತನಾಡುವವರ ಮನಸ್ಥಿತಿ ಅವರ ಮನೆಯವರೂ  ಇದೇ ರೀತಿ  ಚಿಂತನೆವುಳ್ಳವರೋ ಏನೋʼ  ಇಂತಹವರಿಗೆ ಮಹಿಳೆಯಾಗಿ ತಕ್ಕ ಪಾಠ ಕಲಿಸುತ್ತೇನೆ ಎಂದೂ ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರತಿಭಾ ಕುಳಾಯಿ ತಮ್ಮ ಕುರಿತು ಅವಾಚ್ಯ ಶಬ್ದಗಳಿಂದ ಫೇಸ್ಬುಕ್‌ ನಲ್ಲಿ ಬರೆದಿದ್ದ ಈ ಆರೆಸ್ಸೆಸ್‌ ಕಾರ್ಯಕರ್ತರ ಮೇಲೆ ಪೊಲೀಸ್‌ ಕಮಿಶನರ್‌ ಅವರಲ್ಲಿ ದೂರು ಸಲ್ಲಿಸಿದ್ದು ಎಫ್‌ ಐ ಆರ್‌ ದಾಖಲಾಗಿದೆ.


Related Articles

ಇತ್ತೀಚಿನ ಸುದ್ದಿಗಳು