ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಅಮೇರಿಕಾದ ಎರಡು ಸುದ್ದಿ ವಾಹಿನಿಗಳು ಸುದ್ದಿ ಮಾಡಿವೆ. ಸರ್ಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಈ ಮಾಧ್ಯಮಗಳ ಮಾಡಿರುವ ವರದಿ ಈಗ ಪಾಕಿಸ್ಥಾನ ಮಾತ್ರವಲ್ಲದೇ ಭಾರತದಲ್ಲೂ ಹೆಚ್ಚು ಸುದ್ದಿಯಾಗುವ ಸಾಧ್ಯತೆ ಎತ್ತಿ ತೊರಿಸಿದೆ.
ಒಂದು ವೇಳೆ ಈ ಭೇಟಿ ದೃಢಪಟ್ಟರೆ, ಸುಮಾರು ಎರಡು ದಶಕಗಳ ಹಿಂದೆ, 2006 ರಲ್ಲಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಪಾಕಿಸ್ತಾನಕ್ಕೆ ಭೇಟಿ ನೀಡಿದ ನಂತರ ಅಮೆರಿಕದ ಅಧ್ಯಕ್ಷರೊಬ್ಬರು ನೀಡುತ್ತಿರುವ ಮೊದಲ ಭೇಟಿ ಇದಾಗಲಿದೆ. ಆದರೆ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರರು, ಟ್ರಂಪ್ ಅವರ ನಿರೀಕ್ಷಿತ ಭೇಟಿಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಇಸ್ಲಾಮಾಬಾದ್‌ಗೆ ಬಂದ ನಂತರ ಟ್ರಂಪ್ ಭಾರತಕ್ಕೂ ಭೇಟಿ ನೀಡಲಿದ್ದಾರೆ ಎಂದು ಎರಡು ಟಿವಿ ಸುದ್ದಿ ವಾಹಿನಿಗಳು ತಿಳಿಸಿವೆ.
ಕಳೆದ ತಿಂಗಳು ಟ್ರಂಪ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಶ್ವೇತಭವನದಲ್ಲಿ ಅಭೂತಪೂರ್ವ ಸಭೆಯಲ್ಲಿ ಆತಿಥ್ಯ ವಹಿಸಿದಾಗ ಅಮೆರಿಕ-ಪಾಕಿಸ್ತಾನ ಸಂಬಂಧಗಳು ಮತ್ತಷ್ಟು ಗಟ್ಟಿಯಾದಂತೆ ಕಂಡುಬಂದವು.
ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಿ, “ನಾವು ಘೋಷಿಸಲು ಏನೂ ಇಲ್ಲ” ಎಂದು ಹೇಳಿದರು ಮತ್ತು ಅಧ್ಯಕ್ಷರ ವೇಳಾಪಟ್ಟಿಯ ಕುರಿತು ಶ್ವೇತಭವನವು ದೃಢೀಕರಣವನ್ನು ನೀಡಲು ಸಾಧ್ಯವಾಗಬಹುದು ಎಂದು ಹೇಳಿದರು.