ವೆನೆಜುವೆಲಾ, ಇರಾನ್ ನಂತರ ಕ್ಯೂಬಾದ ಸರದಿ: ಅಧ್ಯಕ್ಷ ಟ್ರಂಪ್ ಎಚ್ಚರಿಕೆ

ನ್ಯೂಯಾರ್ಕ್: ವೆನೆಜುವೆಲಾ ಮತ್ತು ಇರಾನ್ ನಂತರ ಅಮೆರಿಕಾ ಸೈನ್ಯವು ಕ್ಯೂಬಾ ಮೇಲೆ ದಾಳಿ ನಡೆಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ಮಾರ್ಚ್ 27ರ ಶುಕ್ರವಾರದಂದು ಮಿಯಾಮಿಯಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡುತ್ತಾ ಅವರು ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ವೆನೆಜುವೆಲಾ ಮತ್ತು ಇರಾನ್ ವಿರುದ್ಧ ಅಮೆರಿಕಾ ಸೈನ್ಯವು ಸಾಧಿಸಿದ ವಿಜಯಗಳನ್ನು ಶ್ಲಾಘಿಸಿದ ಟ್ರಂಪ್, “ನಾನು ಈ ಬಲಿಷ್ಠ ಸೈನ್ಯವನ್ನು ಕಟ್ಟಿದ್ದೇನೆ. ಇದನ್ನು ಬಳಸುವ ಅಗತ್ಯ ಬರುವುದಿಲ್ಲ ಎಂದು ನಾನು ಈ ಹಿಂದೆ ಹೇಳಿದ್ದೆ, ಆದರೆ ಕೆಲವೊಮ್ಮೆ ಬಳಸಬೇಕಾಗುತ್ತದೆ. ಈಗ ಮುಂದಿನ ಸರದಿ ಕ್ಯೂಬಾದ್ದು” ಎಂದು ಹೇಳಿದರು. ಈ ಮಾತುಗಳನ್ನು ಹೇಳಿದ ತಕ್ಷಣವೇ ಅವರು ತಮಾಷೆಯ ಧಾಟಿಯಲ್ಲಿ “ನಾನು ಹಾಗೆ ಹೇಳಿಲ್ಲ ಎಂದುಕೊಳ್ಳಿ” ಎಂದು ಮಾತು ಬದಲಿಸಿದರು.

ಕಳೆದ ಕೆಲವು ವಾರಗಳಿಂದ ತಮ್ಮ ಸರ್ಕಾರವು ಕ್ಯೂಬಾದ ನಾಯಕತ್ವದ ಕೆಲವು ವರ್ಗಗಳೊಂದಿಗೆ ಮಾತುಕತೆ ಆರಂಭಿಸಿದೆ ಮತ್ತು ಕ್ಯೂಬಾ ವಿರುದ್ಧ ನೇರ ಸೈನಿಕ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸುಳಿವು ನೀಡಿದರು.

ಕ್ಯೂಬಾದ ಆರ್ಥಿಕ ಸ್ಥಿತಿ ಮತ್ತು ತೈಲ ಬಿಕ್ಕಟ್ಟು: ಭವಿಷ್ಯದಲ್ಲಿ ಸಂಭವಿಸಬಹುದಾದ ಸೈನಿಕ ಘರ್ಷಣೆಯನ್ನು ತಪ್ಪಿಸಲು ತಮ್ಮ ದೇಶವು ಅಮೆರಿಕಾದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಿಯಾಜ್-ಕಾನೆಲ್ ಒಪ್ಪಿಕೊಂಡಿದ್ದಾರೆ. ಈಗಾಗಲೇ ಅಮೆರಿಕಾ ಹೇರಿರುವ ಕಠಿಣ ನಿರ್ಬಂಧಗಳಿಂದಾಗಿ ಕ್ಯೂಬಾಗೆ ಪೂರೈಕೆಯಾಗುತ್ತಿದ್ದ ತೈಲ ಆಮದು ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ವಿದ್ಯುತ್ ಸ್ಥಾವರಗಳು ಮತ್ತು ಸಾರಿಗೆ ವ್ಯವಸ್ಥೆ ಸ್ತಬ್ಧವಾಗಿದ್ದು, ಕ್ಯೂಬಾದ ಆರ್ಥಿಕ ವ್ಯವಸ್ಥೆಯು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಹಿಂದೆ ವೆನೆಜುವೆಲಾವು ಕ್ಯೂಬಾಗೆ ಹೆಚ್ಚಿನ ಪ್ರಮಾಣದ ತೈಲವನ್ನು ಪೂರೈಸುತ್ತಿತ್ತು. ಆದರೆ, ಈ ವರ್ಷದ ಜನವರಿಯಲ್ಲಿ ಅಮೆರಿಕಾ ನಡೆಸಿದ ಕಾರ್ಯಾಚರಣೆಯ ನಂತರ ವೆನೆಜುವೆಲಾದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ ಮತ್ತು ವಾಷಿಂಗ್ಟನ್‌ನ ಒತ್ತಡದಿಂದಾಗಿ ಕಾರಕಾಸ್‌ನ ಹೊಸ ಸರ್ಕಾರವು ಕ್ಯೂಬಾಗೆ ತೈಲ ಪೂರೈಕೆಯನ್ನು ಸ್ಥಗಿತಗೊಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು