ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕಗಳ (Tariffs) ವಿಷಯದಲ್ಲಿ ಯೂಟರ್ನ್ ತೆಗೆದುಕೊಂಡಿದ್ದಾರೆ. ದಿನಸಿ ವಸ್ತುಗಳ ಬೆಲೆಗಳು ಹೆಚ್ಚಾಗುತ್ತಿರುವುದರಿಂದ ಜನರಲ್ಲಿ ಆಕ್ರೋಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಈ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಕಾಫಿ, ಟೀ, ಮಸಾಲ ಪದಾರ್ಥಗಳು, ಬೀಫ್, ಬಾಳೆಹಣ್ಣು ಮತ್ತು ಕಿತ್ತಳೆ ರಸ ಸೇರಿದಂತೆ 200ಕ್ಕೂ ಹೆಚ್ಚು ಆಹಾರ ಉತ್ಪನ್ನಗಳ ಮೇಲಿನ ಸುಂಕಗಳನ್ನು ಅವರು ಹಿಂಪಡೆದಿದ್ದಾರೆ. ಇತ್ತೀಚೆಗೆ ವರ್ಜೀನಿಯಾ, ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್ ನಗರಗಳಲ್ಲಿ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಡೆಮಾಕ್ರೆಟಿಕ್ ಪಕ್ಷದವರು ಗೆಲುವು ಸಾಧಿಸಿದ ನಂತರ ಟ್ರಂಪ್ ತಮ್ಮ ಹಾದಿಯನ್ನು ಬದಲಾಯಿಸಿದ್ದಾರೆ.
ಅವರು ಏರ್‌ಫೋರ್ಸ್ ಒನ್ ವಿಮಾನದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, ಕಡಿಮೆ ಮತ್ತು ಮಧ್ಯಮ ಆದಾಯದ ಜನರಿಗೆ ಮುಂದಿನ ವರ್ಷದಿಂದ 2,000 ಡಾಲರ್‌ಗಳನ್ನು ಪಾವತಿಸಲಾಗುವುದು ಎಂದು ಹೇಳಿದರು. ಸುಂಕಗಳಿಂದ ಬರುವ ಆದಾಯದಿಂದಲೇ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಸುಂಕಗಳಿಂದಾಗಿ ಜನರಿಗೆ ಲಾಭಾಂಶ (Dividend) ನೀಡಲು ಅವಕಾಶ ದೊರೆತಿದ್ದು, ಅದೇ ಸಮಯದಲ್ಲಿ ಸಾಲಗಳನ್ನು ಸಹ ಕಡಿಮೆ ಮಾಡುತ್ತೇವೆ ಎಂದು ಅವರು ಹೇಳಿದರು. ಟ್ರಂಪ್ ಅವರ ಈ ನಿರ್ಧಾರವನ್ನು ಭಾರತೀಯ ರಫ್ತುದಾರರು ಸ್ವಾಗತಿಸಿದ್ದಾರೆ.
