ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ನಡುವಿನ ವ್ಯಾಪಾರ ಅವಕಾಶಗಳನ್ನು ತೋರಿಸುವ ಮೂಲಕ ಯುದ್ಧ ನಿಲ್ಲಿಸುವಂತೆ ಒತ್ತಡ ಹೇರಿದ್ದಾಗಿ ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಗಳನ್ನು ಉತ್ಪ್ರೇಕ್ಷೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಳ್ಳಿಹಾಕಿದ್ದಾರೆ.
ಸೋಮವಾರ ನ್ಯೂಯಾರ್ಕ್‌ನಲ್ಲಿ ‘ನ್ಯೂಸ್‌ವೀಕ್’ಗೆ ನೀಡಿದ ಸಂದರ್ಶನದಲ್ಲಿ, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದಾಗ ನಾನೂ ಆ ಕೋಣೆಯಲ್ಲಿದ್ದೆ ಎಂದು ಹೇಳಿದರು.
”ಮೇ 9ರಂದು ಪಾಕಿಸ್ತಾನ ಭಾರತದ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆಸಬಹುದು ಎಂದು ವಾನ್ಸ್ ಫೋನಿನಲ್ಲಿ ಹೇಳಿದರು. ಮೋದಿ ಆ ಮಾತುಗಳನ್ನು ನಿರ್ಲಕ್ಷಿಸಿದರು. ಇದಲ್ಲದೆ, ಹಾಗೇನಾದರೂ ನಡೆದರೆ ತಾನೂ ಪ್ರತಿಕ್ರಿಯಿಸಬೇಕಾಗುತ್ತದೆ ಎನ್ನುವ ಸಂಕೇತಗಳನ್ನು ನೀಡಿದರು.
ಮರುದಿನ ಪಾಕಿಸ್ತಾನ ನಮ್ಮ ಮೇಲೆ ದಾಳಿ ನಡೆಸಿತು. ನಾವು ತಕ್ಷಣ ಪ್ರತಿಕ್ರಿಯಿಸಿದೆವು. ಮರುದಿನ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ನನಗೆ ಕರೆ ಮಾಡಿ ಪಾಕಿಸ್ತಾನ ಮಾತುಕತೆಗೆ ಸಿದ್ಧವಿದೆ ಎಂದರು.
ಅಂದು ಏನಾಯಿತು ಎನ್ನುವುದನ್ನು ನಾನು ನೋಡಿದ್ದರಿಂದ ಇದನ್ನೆಲ್ಲ ನಿಮಗೆ ಹೇಳುತ್ತಿದ್ದೇವೆ. ಉಳಿದದ್ದನ್ನು ನಿಮಗೆ ಬಿಡುತ್ತೇನೆ” ಎಂದು ಅವರು ಹೇಳಿದರು.