ರಾಮ ಮಂದಿರ ದೇಣಿಗೆ ಅವ್ಯವಹಾರ: ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ, 7.5 ಕೋಟಿ ರೂ. ಹಣ ದುರುಪಯೋಗ ಆರೋಪ

ಅಯೋಧ್ಯೆ: ರಾಮ ಮಂದಿರ ದೇಣಿಗೆ ಹಣದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆಗಾರಿಕೆ ಹೊತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಟ್ರಸ್ಟ್‌ನ ಉನ್ನತ ಮಟ್ಟದ ಈ ರಾಜೀನಾಮೆಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ.

ದೇವಾಲಯದ ಖಾತೆಗಳಿಂದ ಸುಮಾರು 7.5 ಕೋಟಿ ರೂ. ಕಾಣೆಯಾಗಿದೆ ಎಂಬ ಆರೋಪಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ. ಅಧಿಕೃತ ಅಂಕಿ ಅಂಶಗಳನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಾಥಮಿಕ ವರದಿ ಸಲ್ಲಿಸಿದ ಬಳಿಕ ರಾಜೀನಾಮೆ ನಿರ್ಧಾರ ಪ್ರಕಟವಾಗಿದೆ.

ಈ ಪ್ರಕರಣದಲ್ಲಿ ಈಗಾಗಲೇ ಎಂಟು ಮಂದಿಯನ್ನು ಬಂಧಿಸಲಾಗಿದೆ. ದೇವಾಲಯದ ನಗದು ದೇಣಿಗೆ ಎಣಿಕೆಯಲ್ಲಿ ತೊಡಗಿದ್ದ ಆರು ಸಿಬ್ಬಂದಿ ಸೇರಿದಂತೆ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ್ ಹಾಗೂ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ದೇಣಿಗೆ ಹಣದ ದುರುಪಯೋಗದ ಸುಳಿವುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದ್ದು, ಎಫ್‌ಐಆರ್‌ನಲ್ಲಿ ಟ್ರಸ್ಟ್‌ನ ಪ್ರಮುಖ ಪದಾಧಿಕಾರಿಗಳ ವಿರುದ್ಧ ನೇರ ಹೊಣೆಗಾರಿಕೆ ನಿಗದಿಪಡಿಸಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಇದೇ ವೇಳೆ ದೇಗುಲದ ಹಣಕಾಸು ವ್ಯವಹಾರಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲು ಟ್ರಸ್ಟ್ ಹಿಂದೇಟು ಹಾಕಿರುವುದು ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಜನವರಿ 2024ರಲ್ಲಿ ಉದ್ಘಾಟನೆಯಾದ ಬಳಿಕ ರಾಮ ಮಂದಿರಕ್ಕೆ ದೇಶದ ವಿವಿಧ ಭಾಗಗಳಿಂದ ಭಾರಿ ಪ್ರಮಾಣದ ದೇಣಿಗೆ ಹರಿದುಬರುತ್ತಿದೆ. ಟ್ರಸ್ಟ್‌ನ ಇತ್ತೀಚಿನ ವಾರ್ಷಿಕ ವರದಿ ಪ್ರಕಾರ, 2024-25ನೇ ಸಾಲಿನಲ್ಲಿ ಸುಮಾರು 327 ಕೋಟಿ ರೂ. ಆದಾಯ ದಾಖಲಾಗಿದೆ. ಇದರಲ್ಲಿ 153 ಕೋಟಿ ರೂ. ದೇಣಿಗೆ ಹಾಗೂ 173 ಕೋಟಿ ರೂ. ಬಡ್ಡಿ ಆದಾಯ ಸೇರಿವೆ.

ಪ್ರತಿದಿನ ಸರಾಸರಿ 70 ಸಾವಿರದಿಂದ 80 ಸಾವಿರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ವಾರಾಂತ್ಯ ಹಾಗೂ ಹಬ್ಬಗಳ ಸಂದರ್ಭದಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ.

ದೇವಾಲಯದಲ್ಲಿನ ನಗದು ದೇಣಿಗೆಗಳ ಎಣಿಕೆ ಕಾರ್ಯವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ಗೆ ವಹಿಸಲಾಗಿದೆ. ಬ್ಯಾಂಕ್ ಈ ಕಾರ್ಯಕ್ಕಾಗಿ ಖಾಸಗಿ ಏಜೆನ್ಸಿಯೊಂದನ್ನು ನೇಮಿಸಿಕೊಂಡಿದ್ದು, ನಾಲ್ಕು ದೇಣಿಗೆ ಪೆಟ್ಟಿಗೆಗಳಲ್ಲಿನ ಹಣವನ್ನು 11 ಬ್ಯಾಂಕ್ ಸಿಬ್ಬಂದಿ ಮತ್ತು ಟ್ರಸ್ಟ್‌ನ ಮೂವರು ಪ್ರತಿನಿಧಿಗಳು ಸೇರಿ ಒಟ್ಟು 14 ಸದಸ್ಯರ ತಂಡ ಎಣಿಕೆ ಮಾಡುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು