ರಾಮ ಮಂದಿರ ದೇಣಿಗೆ ವಿವಾದದ ನಡುವೆ ಹೊಸ ಆರೋಪ: ಶಿವಸೇನೆ ದಾನ ಮಾಡಿದ 4 ಕೆಜಿ ಬೆಳ್ಳಿ ಇಟ್ಟಿಗೆ ಎಲ್ಲಿ? : ಸಂಜಯ್ ರಾವತ್ ಪ್ರಶ್ನೆ

ಮುಂಬೈ/ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರ ದೇಣಿಗೆ ಅವ್ಯವಹಾರ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷ ದಾನವಾಗಿ ನೀಡಿದ್ದ 4 ಕೆಜಿ ಬೆಳ್ಳಿ ಇಟ್ಟಿಗೆ ನಾಪತ್ತೆಯಾಗಿದೆ ಎಂಬ ಗಂಭೀರ ಆರೋಪವನ್ನು ರಾಜ್ಯಸಭಾ ಸಂಸದ ಸಂಜಯ್ ರಾವತ್ ಮಾಡಿದ್ದಾರೆ.

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ರಾಮ ಮಂದಿರ ನಿರ್ಮಾಣದ ಸಂದರ್ಭದಲ್ಲಿ ಶಿವಸೇನೆ ಮುಖ್ಯಸ್ಥರಾದ ಉದ್ಧವ್ ಠಾಕ್ರೆ ಅವರು ಸಾವಿರಾರು ಶಿವಸೈನಿಕರು ಮತ್ತು ಸಂತರ ಸಮ್ಮುಖದಲ್ಲಿ 1 ಕೋಟಿ ರೂಪಾಯಿ ಹಾಗೂ 4 ಕೆಜಿ ಬೆಳ್ಳಿ ಇಟ್ಟಿಗೆಯನ್ನು ದೇಣಿಗೆಯಾಗಿ ನೀಡಿದ್ದರು ಎಂದು ಹೇಳಿದ್ದಾರೆ. ಆದರೆ ಈ ದೇಣಿಗೆಗೆ ಸಂಬಂಧಿಸಿದಂತೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಇದುವರೆಗೆ ಯಾವುದೇ ಅಧಿಕೃತ ರಶೀದಿ ಅಥವಾ ಸ್ವೀಕೃತಿ ಪತ್ರ ಲಭ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.

“ಶಿವಸೇನೆ ದಾನ ಮಾಡಿದ ಪವಿತ್ರ ಬೆಳ್ಳಿ ಇಟ್ಟಿಗೆ ಎಲ್ಲಿ ಹೋಯಿತು? ಅದಕ್ಕೆ ಸಂಬಂಧಿಸಿದ ದಾಖಲೆಗಳು ಎಲ್ಲಿವೆ? ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಹೊಣೆಗಾರರನ್ನು ಪತ್ತೆಹಚ್ಚಬೇಕು” ಎಂದು ಸಂಜಯ್ ರಾವುತ್ ಆಗ್ರಹಿಸಿದ್ದಾರೆ.

ರಾಮ ಮಂದಿರ ದೇಣಿಗೆ ವಿವಾದಕ್ಕೆ ಸಂಬಂಧಿಸಿದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪ್ರಾಥಮಿಕ ವರದಿ ಹೊರಬಂದ ಬೆನ್ನಲ್ಲೇ ಈ ಪ್ರಶ್ನೆಗಳನ್ನು ರಾವತ್ ಮುಂದಿಟ್ಟಿದ್ದಾರೆ. ಜೊತೆಗೆ, ಈ ಪ್ರಕರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿರುವ ಕಾರಣ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಎಸ್‌ಐಟಿ ಪ್ರಾಥಮಿಕ ವರದಿಯ ಶಿಫಾರಸುಗಳ ಆಧಾರದ ಮೇಲೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಕೃಷ್ಣ ಮೋಹನ್ ನೀಡಿದ ದೂರಿನ ಮೇರೆಗೆ ಇದುವರೆಗೆ 8 ಮಂದಿಯನ್ನು ಬಂಧಿಸಲಾಗಿದೆ.

ಆದರೆ, ತನಿಖೆ ಮತ್ತು ಬಂಧನಗಳು ನಡೆದಿದ್ದರೂ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ ಎಂಬ ಸಂಜಯ್ ರಾವತ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ, ಶಿವಸೇನೆ ದಾನ ಮಾಡಿದರೆಂದು ಹೇಳಲಾಗುತ್ತಿರುವ 4 ಕೆಜಿ ಬೆಳ್ಳಿ ಇಟ್ಟಿಗೆಯ ಕುರಿತು ಟ್ರಸ್ಟ್ ಅಥವಾ ತನಿಖಾ ಸಂಸ್ಥೆಗಳ ಪ್ರತಿಕ್ರಿಯೆ ಏನಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು