Friday, June 14, 2024

ಸತ್ಯ | ನ್ಯಾಯ |ಧರ್ಮ

ತುಳುನಾಡಿನ ಭೂತಗಳು ದೇವರ ಬಳಿ ಬೊಗಸೆ ಒಡ್ಡಿ ಬೇಡುವವರು ಖಂಡಿತಾ ಅಲ್ಲ

ನಾವು ತುಳುವರು ಎಂದು ಹೆಮ್ಮೆಯಿಂದ ಹೇಳುವ ತುಳುನಾಡು “ಪರಶುರಾಮ ಸೃಷ್ಟಿ” ಎಂಬ ಐತಿಹ್ಯವನ್ನು ಸುಳ್ಳಿನ ಸರಮಾಲೆಯನ್ನಾಗಿ ಪೋಷಿಸಲಾಗಿದೆ. ಒಂದು ಸಮುದಾಯದಿಂದ ನಿರ್ಮಾಣಗೊಂಡ ಸಾಮಾಜಿಕ ಸಂರಚನೆ ತುಳುವರದಲ್ಲ. “ಪತ್ತಪ್ಪೆ ಬಾಲೆಲು ಒಂಜಪ್ಪೆ ಬಾಲೆಲು ಆದ್ ಬದುಕೊಡು” (ಹತ್ತು ತಾಯಿಯ ಮಕ್ಕಳು ಒಂದು ತಾಯಿಯ ಮಕ್ಕಳಾಗಿ ಬದುಕಬೇಕು) ಎನ್ನುವುದು ಹಿರಿಯರ ರೂಢಿಯ ಮಾತು. ಚಾರಿತ್ರಿಕವಾಗಿಯೂ ಕಬ್ಬಿಣದ ಯುಗಕ್ಕಿಂತ ಮೊದಲೇ ಶಿಲಾಯುಗದ ಸಂದರ್ಭದಲ್ಲಿ ತುಳುನಾಡಿನಲ್ಲಿ ಆದಿಮಾನವರು ಬದುಕಿದ್ದರು ಎನ್ನುವುದಕ್ಕೆ ಚಾರಿತ್ರಿಕ ದಾಖಲೆಗಳು ಸಿಗುತ್ತವೆ.

ಜೀವಜಗತ್ತಿಗೆ ಸಮೀಪವಾಗಿ ನೀರು, ಗಾಳಿ, ಮರ, ಕಲ್ಲು, ಆಕಾಶ, ಭೂಮಿ ಎಲ್ಲದರಲ್ಲೂ ತಾವು ನಂಬಿದ ಸತ್ಯವನ್ನು ದೈವವೆಂದು ಆರಾಧಿಸುತ್ತಾರೆ. ಅದರ ಮೂಲಕ ಜೀವಜಗತ್ತನ್ನು ಹತ್ತಿರದಿಂದ ಕಾಣುವ ತುಳುವರು ಭೂತಾರಾಧನೆಯನ್ನು ಸಂಕೀರ್ಣ ಚೌಕಟ್ಟಿನಲ್ಲಿ ಇಟ್ಟು ನೋಡುತ್ತಾರೆ. ದೈವಗಳ ಉಗಮ ಪ್ರಸರಣದ ಬಗೆಗೆ ಇರುವ ಸಂಧಿ, ಪಾಡ್ದನ, ಪಾರಿಗಳಲ್ಲಿ ಅದು ದೇವರ ಸೃಷ್ಟಿ ಎಂಬ ಉಲ್ಲೇಖ ಇಲ್ಲ. ದೇವರು ಭೂತಗಳನ್ನು ಸೃಷ್ಟಿಸಿದುದು ಅಲ್ಲ. ಆದಿಮ ಜಗತ್ತಿನ ಜೀವಪರ ಚಿಂತನೆ ಇಲ್ಲಿ ಇದ್ದು ಅದು ಕಟ್ಟಿಕೊಡುವ ಸಾಂಸ್ಕೃತಿಕ ವಿವರಗಳು ತುಳುನಾಡು ವೈದಿಕ ಮೂಲದ್ದು ಅಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತದೆ. ದೆಯ್ಯೊಲೆ ನಲಿಕೆಯಲ್ಲಿ ಹಾಡುವ ಸಿರಿ ಪಾಡ್ದನದಲ್ಲಿ ಅತಿಕಾರೆ ಬತ್ತದ ತಳಿಯೊಂದಿಗೆ ಬರುವ ಸಾರಮಾನಿ ಬೂತೊಲು ಗಂಡಗಣಗಳ ವಿವರಣೆ ಬರುತ್ತದೆ. ದೈವ ದೇವರ ಅಧೀನ ಅಲ್ಲ ಅದು ಸಮಾನಾಂತರವಾದುದು. ಈ ನೆಲದ ಒಡೆತನ ಆಳ್ವಿಕೆಗೆ ಸಮೀಕರಿಸಿ ದೈವಾರಾಧನೆ ನಡೆಯುತ್ತದೆ. ತುಳುನಾಡಿನ ಭೂತಗಳು ದೇವರ ಬಳಿ ಬೊಗಸೆ ಒಡ್ಡಿ ಬೇಡುವ ದವಗಗಳು ಖಂಡಿತಾ ಅಲ್ಲ. ಇದು ತುಳುನಾಡಿನ ಪ್ರತಿಯೊಬ್ಬರಿಗೂ ಮಾಡುವ ಅವಮಾನವಾಗಿದೆ.

ತುಳುನಾಡು ಮಾತೃಮೂಲ ಕುಟುಂಬ ವ್ಯವಸ್ಥೆಯನ್ನು ಹೊಂದಿದೆ. ಹೆಣ್ಣನ್ನು ಕೇಂದ್ರ ಸ್ಥಾನದಲ್ಲಿ ಇರಿಸಿ ಹೆಣ್ಣಿನಿಂದ ವಂಶ, ಕುಟುಂಬ, ಭೂಮಿಯ ಒಡೆತನವನ್ನು ಹೊಂದಿ ಕುಟುಂಬವನ್ನು ಸಂರಚಿಸಿದವರು ತುಳುವರು. ಹೆಣ್ಣು ಹುಟ್ಟುವ ಅವಕಾಶ ಮಾತ್ರವಲ್ಲ ಅಧಿಕಾರವನ್ನು ಕೊಟ್ಟವರು ತುಳುವರು. ಸಂತತಿಯ ಬೆಳವಣಿಗೆಯಲ್ಲಿ ಹೆಣ್ಣಿನ ಮಹತ್ತ್ವವನ್ನು ತಿಳಿದವರು. ಆಕೆಯನ್ನು ನಿಗ್ರಹಿಸಲು ಶಿರ ಕಡಿವ ಕಾಯಕದ ಕಾರ್ಯ ಮಾಡಿದ ಪರಶುರಾಮ ಈ ನಾಡನ್ನು ಸೃಷ್ಟಿಸಲು ಸಾಧ್ಯವೇ?

ದೈವಾರಾಧಕರಾದ ತುಳುವರು ನೆಲಮೂಲದ ಪಿಸುಮಾತುಗಳಿಗೆ ಕಿವಿಯಾದವರು. ಆಗಸದಲ್ಲಿ ನಿಂತು ಈ ಮಣ್ಣನ್ನು ಕಂಡವರಲ್ಲ. ಅವರು ಈ ನೆಲದ ಸತ್ಯವನ್ನು ಅರಗಿಸಿಕೊಂಡವರು. ಅವರನ್ನು ಪರಶುರಾಮ ಸೃಷ್ಟಿಸಿದ ನಾರಾಯಣನ ಕೃಪೆ ಎನ್ನಲು ಸಾಧ್ಯವೇ? ಕಪೋಲಕಲ್ಪಿತ ಪುರಾಣಗಳಿಗೆ ಇದೂ ಒಂದು ಸಾಕ್ಷಿ ಅಷ್ಟೇ…..!

ಜ್ಯೋತಿ ಚೇಳೈರು
ಚಿಂತಕರು

Related Articles

ಇತ್ತೀಚಿನ ಸುದ್ದಿಗಳು