Friday, June 14, 2024

ಸತ್ಯ | ನ್ಯಾಯ |ಧರ್ಮ

ತುಳುನಾಡಿನ ‘ಪರ್ಬ’ ‘ದೊಡ್ಡಬ್ಬ’ ಎಂಬ ಜನ ಮೂಲ ಹಬ್ಬ.

ತುಳು ಹಾಗೂ ಅರೆಬಾಸೆಯವರ ‘ಪರ್ಬ’  ಅಥವಾ  ‘ದೊಡ್ಡಬ್ಬ’ ವೇ ಇಂದು ಬಲೀಂದ್ರ ಪೂಜೆಯಾಯಿತೇ? ವ್ಯಾಪಕ ಆಚರಣೆಯಲ್ಲಿದ್ದ ಜನಪದೀಯ ಹಬ್ಬವೊಂದು ಪುರಾಣ ಕತೆಗೆ ಪ್ರೇರಣೆಯಾಯಿತೇ? ಓದಿ.. ಕೃಷಿಕ ಗೋಪಾಲ್‌ ಪೆರಾಜೆಯವರ ಲೇಖನ

ಈ ಮೇಲಿನ ಎರಡು ಪದಗಳಲ್ಲಿ ಮೊದಲಿನದು ‘ತುಳು’ ಭಾಷೆಗೆ ಸಂಬಂಧಿಸಿದರೆ ಎರಡನೆಯದು ಅರೆಬಾಸೆಗೆ ಸಂಬಂಧಿಸಿದೆ.  ‘ಪರ್ಬ’ ಅಥವಾ ‘ದೊಡ್ಡಬ್ಬ’ ಇಂದು ‘ಬಲಿಂದ್ರ’ ಅಥವಾ ‘ದೀಪಾವಳಿ’ ಎಂದು ಕರೆಯಲ್ಪಡುತ್ತಿದೆ. ಬಹುಷ: ಪುರಾಣ ಕಥೆಯೊಂದರ ರಚನೆಯ ನಂತರ ಈ ಹೆಸರುಗಳು ಬಂದಿರಬೇಕು. ಅದರ ಬಗ್ಗೆ ಸ್ವಲ್ಪ ವಿವರಣೆಗಳನ್ನು ಮತ್ತೆ ನೋಡೋಣ.

ಹಬ್ಬದ ಆಚರಣೆಯ ಸಂದರ್ಭ…

ಮೊದಲಿಗೆ ಈ ಹಬ್ಬದ ಆಚರಣೆಯ ಸಂದರ್ಭ ಮತ್ತು ಅದು ಜನಸಾಮಾನ್ಯರಲ್ಲಿ ಏಕೆ ‘ದೊಡ್ಡಬ್ಬ’ವಾಗಿ ಗುರುತಿಸಿಕೊಂಡಿತು ಎಂಬುದನ್ನು ನೋಡಬೇಕಾಗುತ್ತದೆ. ಒಂದು ಕಾಲದಲ್ಲಿ ಬತ್ತದ ಬೇಸಾಯವೇ ಪ್ರಧಾನವಾಗಿದ್ದ ತುಳುನಾಡಿಗೆ ‘ಕೆಡ್ಡಾಸ’ ‘ಬಿಸು’ ‘ಹೊಸ್ತು’  ‘ಪರ್ಬʼ ಆಚರಣೆಗಳು ನಿಜಕ್ಕೂ ಪರ್ವ ದಿನಗಳೇ ಆಗಿದ್ದವು. ಫೆಬ್ರವರಿ ‘ಕೆಡ್ಡಾಸ’ ದಲ್ಲಿ ಭೂಮಿತಾಯಿ ಮುಟ್ಟು ಆಗಿರುತ್ತಾಳೆ ನಂತರ ಬರುವ ಏಪ್ರಿಲ್ ನ  ‘ಬಿಸು’ ಹಬ್ಬಕ್ಕೆ ಭೂಮಿಗೆ ನೇಗಿಲು ಮುಖಾಂತರ ಉಳುಮೆ ಆರಂಭವಾಗುತ್ತದೆ. ಸೆಪ್ಟೆಂಬರ್ ಹೊತ್ತಿಗೆ ಬಸಿರಾದ ಭೂಮಿಯಿಂದ ಭತ್ತದ ತೆನೆಗಳು ಎದ್ದು ನಿಂತಿರುತ್ತವೆ. ಆಗ ಬರುವುದೇ ‘ಹೊಸ್ತು’ ಮನೆ ತುಂಬಿಸುವ ಹಬ್ಬ. ಈಗ ಭತ್ತದ ಕಣಜ ಮನೆ ತುಂಬಿದೆ. ಒಕ್ಕಲಿನವರ ಸಂತೋಷ, ಖುಷಿಗಳು ಕಳೆಕಟ್ಟಿವೆ. ದೊಡ್ಡಬ್ಬ ಅಥವಾ ಪರ್ಬಕ್ಕೆ ರಂಗ ಸಜ್ಜುಗೊಳ್ಳುವ ಮೂಲಕ ತುಳುನಾಡಿನ ಬಹುದೊಡ್ಡ ಹಬ್ಬದ ಆಚರಣೆ ನಡೆಯುತ್ತದೆ.

ಹಲವು ಸಾಂಪ್ರದಾಯಿಕ ಕಟ್ಟಳೆಗಳೊಂದಿಗೆ ಮೂರು ದಿನಗಳ ನಿರಂತರ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ ಹಬ್ಬ. ತುಳುನಾಡಿನ ಬೇರೆ ಬೇರೆ ಭಾಗಗಳು ಮತ್ತು ಜನಾಂಗಗಳು ಹೇಗೆ ಇದನ್ನು ಕಂಡವು ಎನ್ನುವ ವಿವರಕ್ಕೆ ಹೋಗದೆ ಮುಖ್ಯವಾಗಿ ಅರೆಬಾಸೆ ಗೌಡರ ಹಿನ್ನೆಲೆಯಲ್ಲಿ ಇದನ್ನು ನೋಡಲೆತ್ನಿಸುವೆ.

ಅರೆಬಾಸೆ ಗೌಡರ ಹಬ್ಬದ ತಯಾರಿ

ಕನಿಷ್ಠ  ಒಂದು ವಾರದ ಮೊದಲೇ ಹಬ್ಬಕ್ಕೆ ತಯಾರಿಯನ್ನು ಜನ ಶುರು ಮಾಡುತ್ತಾರೆ. ಅಂಗಳದ ಮಧ್ಯೆ ಪ್ರತಿಷ್ಠಾಪಿಸಲಿರುವ ಹಾಲು ಸುರಿಸುವ ಹಾಲೆಮರದ, ಅಂದರೆ  ಕಾಂಡದಲ್ಲಿ ಮೂರು ಗೆಲ್ಲುಗಳು ಟಿಸಿಲೊಡೆದ ಒಂದು ಗಿಡವನ್ನು ಆಯ್ಕೆ ಮಾಡುತ್ತಾರೆ. ಅಂತಹ ಮರದ ಕೊಂಬೆಯನ್ನು ಕತ್ತರಿಸಿ ತಂದು ಅಮಾವಾಸ್ಯೆಯ ದಿನ ಅಂಗಳದಲ್ಲಿ ನೆಡುತ್ತಾರೆ. ಕಾಡು ಬೆಟ್ಟಗಳಲ್ಲಿ ಸಿಗುವ  ಕೇಪ್ಳ ಹೂ, ಕೇನೆ ಕಾಯಿ, ಹಂದಿ ಬಳ್ಳಿ ಕಾಯಿ, ನರಿಕೊಂಬು, ನೆಲಗುಬ್ಬಿ, ಮಾರಾಟಿ ಮಲ್ಲಿಗೆ, ಚೆಂಡು ಹೂವು, ಇತ್ಯಾದಿ ಮಾಲೆಗಳಿಂದ ಮರವನ್ನು ಶೃಂಗರಿಸುವರು. ಈ ಶೃಂಗಾರಕ್ಕಾಗಿ ಮರದ ಕಂಠ ಭಾಗಕ್ಕೆ ಬಿದಿರ ಸಲಾಕೆಯೊಂದನ್ನು ಅಡ್ಡ ಕಟ್ಟಿ ಅದರ ಎರಡು ತುದಿಗಳಿಗೆ ವೀಳ್ಯದ ಎಲೆ ಮತ್ತು ಅಡಿಕೆ ಸುರಿದು ನೇತು ಹಾಕುತ್ತಾರೆ. ಮರಕ್ಕೆ ಅರ್ಧ ಚಂದ್ರಾಕೃತಿ ಅಥವಾ ತ್ರಿಕೋನ ಆಕಾರದಲ್ಲಿ ಮಾಡಿದ ಚೆಂಡು ಹೂಗಳನ್ನು ಸುರಿದ ಮುಡಿಯೊಂದನ್ನು ಕಿರೀಟ ರೀತಿಯಲ್ಲಿ ಕಟ್ಟುವರು. ಮರದ ಕೊರಳಿಗೆ ಅಂದರೆ ಕಂಠ ಭಾಗಕ್ಕೆ ಒಂದು ಹಿಡಿಯಷ್ಟು ದಪ್ಪದ ಭತ್ತದ ಕದಿರನ್ನು ಕಟ್ಟಬೇಕು. ಆ ಪವಿತ್ರ ಮರದ ಪೂಜ್ಯ ಭಾಗವೇ ಭತ್ತದ ಕದಿರು. ಇದಾದ ನಂತರ ಮೂರು ದಿನ ರಾತ್ರಿಗಳಲ್ಲಿ ಮರದ ಅಡಿ ಭಾಗದ ಅಂಗಳಕ್ಕೆ ಸೆಗಣಿ ಸಾರಿಸಿ,  ಮಣೆ ಇಟ್ಟು ಅದರ ಮೇಲೆ ಜೋಡು ಬಾಳೆಗಳ ಎಲೆ ಹಾಸಿ,  ಎಡೆ ಇರಿಸುವರು. ಮರದ ಟಿಸಿಲೊಡೆದ ಭಾಗದಲ್ಲಿ  ಹಣತೆ ಇಟ್ಟು,  ಕೈ ಮುಗಿಯುತ್ತ ‘ಪೊಲಿ ಪೊಲಿಯೇ ಬಾ’ ಎಂದು ಮನೆ ಮಂದಿ ಕೂಗುವರು. ಅಂದರೆ ‘ಸಮೃದ್ಧಿಯೇ ಮನೆಯೊಳಗೆ ತುಂಬಿ ತುಂಬಿ ಬಾ’ ಎಂಬ ಅರ್ಥ.  ಈ ಮರ ಹಾಕುವುದರಲ್ಲಿ ಕೆಲವೆಡೆ ಏಕಮರ, ಕೆಲವೆಡೆ ಜೋಡು ಮರ, ಮೂರು ಮರಗಳನ್ನು ನೆಡುವವರು ಇರುತ್ತಾರೆ. ಮನೆಯೊಳಗೆ ಬುಟ್ಟಿಗಳಲ್ಲಿ ಹುಳಿದೋಸೆ ( ಉದ್ದಿನ ದೋಸೆ) ಅಪ್ಪ ಮತ್ತು ಬಾಳೆಹಣ್ಣು  ತುಂಬಿರುತ್ತವೆ. ಹಬ್ಬದ ಊಟದಲ್ಲಿ ಮಾಂಸಾಹಾರ ಬಹು ಮುಖ್ಯ ಭಾಗ. ಇಲ್ಲಿ ಮರ ಹಾಕುವುದರಲ್ಲಿ ಮಾತ್ರವಲ್ಲ ಆಚರಣೆಯ ವಿಚಾರದಲ್ಲಿ ಕೂಡ ಮನೆಮನೆಗಳಲ್ಲಿ ಊರೂರುಗಳಲ್ಲಿ ವೈವಿಧ್ಯತೆ ತುಂಬಿರುತ್ತದೆ.

ಇದೊಂದು ಆದಿಮ ಆಚರಣೆ…

ಇದೊಂದು ಆದಿಮಕಾಲದ ಪ್ರಕೃತಿ ಪೂಜೆಯ ಭಾಗವೇ ಸರಿ. ಮರ, ಮಾಲೆ, ಫಲವಸ್ತುಗಳು ಎಲ್ಲವೂ  ನೆಲದ ಪೂಜೆಯ ಭಾಗಗಳಾಗಿವೆ.  ಮೂರು ದಿನಗಳಲ್ಲಿ ಫಲ ಕೊಡುವ ಹೊಲಗದ್ದೆಗಳು, ಉಳುಮೆಗೆ ಹೆಗಲುಕೊಟ್ಟ ಹಟ್ಟಿಯ ದನಗಳು, ಭೂತಗುಡಿಗಳು ಸೇರಿದಂತೆ ಗತಿಸಿದ ಹಿರಿಯರಿಗೆ ಎಡೆ ಇಡುವುದು ಎಲ್ಲ ಆರಾಧನೆಗಳು ರೂಢಿಯ ಕಟ್ಟಳೆಗಳಿಂದಲೇ ನೆರವೇರುತ್ತವೆ. ಒಂದು ಕಾಲದಲ್ಲಿ ಬೇಸಾಯದ ಪ್ರತಿ ಮನೆಗಳ ಮುಂದೆ ನಡೆಯುತ್ತಿದ್ದ ಈ ಪೂಜಾ ಪದ್ಧತಿಯಲ್ಲಿ ಪೂಜಾರಿ, ಪುರೋಹಿತ, ದೈವ ನರ್ತಕ, ಜೋಯಿಸ ಯಾರಿಗೂ ಪ್ರವೇಶವೇ ಇರಲಿಲ್ಲ. ಹಾಗಾಗಿಯೇ ಇದೊಂದು ಆದಿಮ ಆಚರಣೆ.  ಅಗೋಚರ, ಆಧ್ಯಾತ್ಮ, ಧರ್ಮಶಾಸ್ತ್ರಗಳ ಸೋಂಕು ಇಲ್ಲಿಲ್ಲ.

ದೀಪಾವಳಿ ಅಲ್ಲ.. ದೊಡ್ಡಬ್ಬ…

ಈ ಹೊತ್ತು ದೀಪಾವಳಿ ಎಂದು ಕರೆಯಲ್ಪಡುವ ಈ ಹಬ್ಬಕ್ಕೆ ಒಂದೆರಡು ತಲೆಮಾರುಗಳ ಹಿಂದೆ ಈ ಹೆಸರು  ಇರಲಿಲ್ಲ. ಈ ವಿಷಯ ಕುರಿತಂತೆ  ಅಧ್ಯಯನ ನಡೆಸಿದ ಸಂದರ್ಭದಲ್ಲಿ ಅರೆಬಾಸೆಯ 80 ವರ್ಷ ದಾಟಿದ ಹಿರಿಯರು ಅದನ್ನು ‘ದೊಡ್ಡಬ್ಬ’ ಎಂದು ಕರೆಯುತ್ತಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದರು. ಅವರು ಬಲಿ ಚಕ್ರವರ್ತಿ, ವಾಮನ ಅವತಾರ ಕಥೆಯನ್ನು ಕೇಳಿರಲಿಲ್ಲ. ಅಂದರೆ ವ್ಯಾಪಕ ಆಚರಣೆಯಲ್ಲಿದ್ದ ಜನಪದೀಯ ಹಬ್ಬವೊಂದು ಪುರಾಣ ಕತೆಗೆ ಪ್ರೇರಣೆಯಾಗಿದೆ ಅಷ್ಟೆ. ಜನಪದ ಅಧ್ಯಯನಕಾರರು, ಇತಿಹಾಸಕಾರರು ಈಗಾಗಲೇ ನಡೆಸಿರುವ ಸಂಶೋಧನೆಗಳ ಆಧಾರದಲ್ಲಿ ಅನೇಕ ಜನಪದ ಆಚರಣೆಗಳು ಪುರಾಣಗಳ ಭಾಗವಾಗಿ ಕಥೆಗಳ ರೂಪವನ್ನು ಪಡೆದಿವೆ, ಮತ್ತು ಈಗ ಅವುಗಳನ್ನೇ ನಿಜವೆಂದು ಬಿಂಬಿಸಲಾಗುತ್ತಿದೆ.  ಹೀಗಾದಾಗ ಜನಪದ ಆಚರಣೆಗಳಲ್ಲಿ ವೈದಿಕ ಕ್ರಮಗಳ ಅಳವಡಿಕೆ ಸುಸೂತ್ರವಾಗುತ್ತದೆ, ಸಲೀಸಾಗುತ್ತದೆ. ಬತ್ತದ ಕೃಷಿಯ ಕಣ್ಮರೆಯೊಂದಿಗೆ ಬಿಸು, ಹೊಸ್ತು, ದೊಡ್ಡಬ್ಬಗಳು ಜನರ ಮಧ್ಯೆ ಇಲ್ಲವಾಗುತ್ತಿದ್ದು ಅಥವಾ ನೆಪ ಮಾತ್ರಕ್ಕೆ ಎಂಬಂತೆ ಆಚರಣೆಯಲ್ಲಿದ್ದು ಅವುಗಳೆಲ್ಲ ದೇವಾಲಯಗಳಿಗೆ ಸೇರ್ಪಡೆಗೊಳ್ಳುತ್ತಿರುವುದು ನಮ್ಮ ಕಣ್ಣೆದುರಿಗೆ ನಡೆಯುತ್ತಿವೆ. ಅದರ ಪರಿಣಾಮಗಳು ಏನು ಎಂತು ಎಲ್ಲರಿಗೂ ತಿಳಿದ ಸಂಗತಿ.

ಗೋಪಾಲ್‌ ಪೆರಾಜೆ
ಕೃಷಿಕರು, ಸಾಮಾಜಿಕ ಕಾರ್ಯಕರ್ತರು. ಸುಳ್ಯದ ನಿವಾಸಿ.

Related Articles

ಇತ್ತೀಚಿನ ಸುದ್ದಿಗಳು