Home ಜನ-ಗಣ-ಮನ ಧರ್ಮ- ಸಂಸ್ಕೃತಿ ತುಳುನಾಡಿನ ದೈವಗಳು: ಒಂದು ಟಿಪ್ಪಣಿ

ತುಳುನಾಡಿನ ದೈವಗಳು: ಒಂದು ಟಿಪ್ಪಣಿ

0

ತುಳುನಾಡಿನ ದೈವಗಳನ್ನು ʼಹಿಂದೂ ಧರ್ಮದʼ ಚೌಕಟ್ಟಿಗೆ ಒಳಪಡಿಸುವ ಪ್ರಕ್ರಿಯೆ ಆರಂಭವಾಗಿ ಕೆಲವು ವರ್ಷಗಳೇ ಕಳೆದಿವೆ. ಈಗ ಅದಕ್ಕೆ ಮತ್ತಷ್ಟು ಚಾಲನೆ ದೊರಕಿದೆ. ʼಹಿಂದೂ ಧರ್ಮʼ ಎಂದರೇನು ಎಂಬುದನ್ನು ಯಾರೂ ಸರಿಯಾಗಿ ನಿರ್ವಚಿಸದೇ ಇರುವುದರಿಂದ ಅದರೊಳಕ್ಕೆ ಎಲ್ಲವನ್ನೂ ಸುಲಭವಾಗಿ ತುರುಕಲು ಸಾಧ್ಯವಾಗಿದೆ. ʼಹಿಂದೂವಾಗಿ ಸಾಯಲಾರೆ ʼಎಂದ ಅಂಬೇಡ್ಕರರನ್ನು ಕೂಡಾ ಇವತ್ತಿನ ಹಿಂದೂ ರಾಜಕಾರಣ ತನ್ನೊಳಗು ಮಾಡಿಕೊಂಡಿರುವಾಗ ತುಳುನಾಡಿನ ದೈವಗಳನ್ನು ಅದು ಬಿಡಲಾರದು.

ಬಹಳ ಪ್ರಾಚೀನ ಕಾಲದಲ್ಲಿ ತುಳುನಾಡಿಗೆ ವಲಸೆ ಬಂದು ನೆಲೆಯಾಗಿರುವ ತಳಸ್ತರದ ಸುಮಾರು ೩೨ ಸಮುದಾಯಗಳಿವೆ. ಇವರ ಒಟ್ಟು ಸಂಖ್ಯೆ ಸುಮಾರು ಎರಡು ಲಕ್ಷ ಇರಬಹುದು. ಆದಿ ದ್ರಾವಿಡ, ಅಜಿಲ, ನಲ್ಕೆ, ಮಾಯಿಲ, ಬಾಕುಡ, ಭೈರ, ಮೇರ, ಮುಗ್ಗೆರ್ಲು, ಮಲೆ ಕುಡಿಯ, ಬತ್ತಡ, ಪಾಣಾರ, ಮೊಗೇರ, ಪರವ, ಪಂಬದ, ಮೊದಲಾದ ಸಮುದಾಯಗಳು ಈ ಗುಂಪಿಗೆ ಸೇರುತ್ತವೆ. ಶ್ರೇಣೀಕೃತ ಸಮಾಜದ ತಳಭಾಗದಲ್ಲಿರುವ ಇವರಲ್ಲಿ ಕೆಲವರು ಭೂತಾರಾಧನೆಯ ಸಂದರ್ಭದಲ್ಲಿ ತಾವೇ ದೈವಗಳಾಗಿ, ತಾತ್ಕಾಲಿಕವಾಗಿ ನಿರ್ಮಿತವಾದ ಕಾಲ, ಸ್ಥಳ ಮತ್ತು ಸಮುದಾಯಗಳ ಒಗ್ಗೂಡುವಿಕೆಯ ಸಂದರ್ಭದಲ್ಲಿ ಜಾತಿ ಸಮಾಜದ ಶ್ರೇಣೀಕರಣದ ಮೇಲ್ತುದಿಗೆ ಚಲಿಸುತ್ತಾರೆ. ಆರಾಧನೆ ಮುಗಿದ ಮೇಲೆ ಮತ್ತೆ ಯಥಾಸ್ಥಿತಿ ಮುಂದುವರೆಯುತ್ತದೆ.

ತುಳುನಾಡಿನ ದೈವಾರಾಧನೆಯ ಕೇಂದ್ರದಲ್ಲಿರುವ ಸಾಂಸ್ಕೃತಿಕ ನಾಯಕರ ಸಂಖ್ಯೆಯು ಸಾವಿರಕ್ಕೂ ಮೀರಿದೆ ಎಂದು ವಿದ್ವಾಂಸರು ಹೇಳಿದ್ದಾರೆ. ಇದರಲ್ಲಿ ಬಬ್ಬರ್ಯ, ಆಲಿ ಮೊದಲಾದ ಮುಸ್ಲಿಮರೂ ಇದ್ದಾರೆ. ಮಂಜೇಶ್ವರದ ಉದ್ಯಾವರದಲ್ಲಿ ನಡೆಯುವ ಅರಸು ದೈವಗಳ ನೇಮದಲ್ಲಿ ಮುಸ್ಲಿಂ ಕುಟುಂಬಗಳು ಭಾಗವಹಿಸಲೇ ಬೇಕು. ಮುಸಲ್ಮಾನರಲ್ಲಿ ದೈವಾರಾಧನೆ ಇಲ್ಲ. ಹಿಂದೂ ದೇವರುಗಳಲ್ಲಿ ಮುಸಲ್ಮಾನರು ಇರುವುದು ಸಾಧ್ಯವಿಲ್ಲ. ಅಂಥ ದೈವಗಳನ್ನು ಪೂಜಿಸಲು ಬೇಕಾದ ಶಾಸ್ತ್ರೋಕ್ತ ಮಂತ್ರಗಳೂ ಇರಲಾರವು. ಆದರೆ ಭೂತಾರಾಧನೆಯಲ್ಲಿ ಇವೆರಡೂ ಸಾಧ್ಯವಾಗಿರುವುದೇ ನನ್ನಂಥವರಿಗೆ ಅದರಲ್ಲಿ ಕುತೂಹಲ ಹುಟ್ಟಲು ಕಾರಣ. ಈ ದೈವಗಳ ಕತೆಗಳನ್ನು ಪಾಡ್ದನಗಳು ನಿರೂಪಿಸುತ್ತವೆ. ಪಾಡ್ದನಗಳ ಲೋಕ ಅದ್ಭುತವಾಗಿದ್ದು ಕ್ಲಾಸಿಕಲ್‌ ಸಂಪ್ರದಾಯಕ್ಕಿಂತ ಭಿನ್ನವಾಗಿವೆ. ಉದಾಹರಣೆಗೆ, ಗುಳಿಗ ದೈವವು ತಾಯಿಯ ಬಲದ ಸಿರಿಮೊಲೆ ಒಡೆದು ಹೊರಬಂದು ಎಡದ ಮೊಲೆ ತಿಂದು ಕೈ ತಟ್ಟಿ ನಗುವುದನ್ನು ಗಮನಿಸಬೇಕು. ಪಾಡ್ದನಗಳ ಭಾಷೆ, ವಸ್ತು, ನಿರೂಪಣಾ ವಿಧಾನ ಇತ್ಯಾದಿಗಳ ಬಗ್ಗೆ ದೇಶ ವಿದೇಶಗಳ ವಿದ್ವಾಂಸರು ಸಾಕಷ್ಟು ಕೆಲಸ ಮಾಡಿದ್ದಾರೆ. ತುಳು ದೈವಗಳ ಕೆಲವು ವೈಶಿಷ್ಟ್ಯಗಳನ್ನು ಈ ಮುಂದಿನಂತೆ ಸಂಕ್ಷಿಪ್ತವಾಗಿ ಪಟ್ಟಿ ಮಾಡಬಹುದು-

ಪಾಡ್ದನಗಳಲ್ಲಿರುವ ದೈವದ ಕಥೆಗಳು ಬಹುಮಟ್ಟಿಗೆ ದುಃಖಾಂತವಾಗಿರುತ್ತವೆ. ಈ ವಿಷಯದಲ್ಲಿ ಅವು ನಮ್ಮ ಸಂಸ್ಕೃತ ಕಥನ ಪರಂಪರೆಗಿಂತ ತುಂಬಾ ಭಿನ್ನ. ಭೂತ ಕಟ್ಟುವ ಪರವನ ಹೆಂಡತಿ ಮಂಗಣೆಯ ಚೆಲುವಿಗೆ ಮರುಳಾಗಿ, ಅವಳನ್ನು ಪಡೆಯಲು ಅವಳ ಗಂಡನನ್ನೂ ಕೊಂದು, ತನ್ನ ಸರ್ವಸ್ವವನ್ನೂ ಕಳೆದುಕೊಂಡು, ಕೊನೆಗೆ ಮಂಗಣೆ ಬೆಂಕಿಗೆ ಹಾರಿದಾಗ ತಾನೂ ಬೆಂಕಿಗೆ ಹಾರಿ ಸತ್ತ ಬೊಟ್ಟುಪ್ಪಾಡಿ ಬಲ್ಲಾಳನ ಸಂಧಿಯು ನಾನು ಇದುವರೆಗೆ ಓದಿದ ಅತ್ಯುತ್ತಮ ದುರಂತ ಕಾವ್ಯಗಳಲ್ಲಿ ಒಂದು.

ಈ ಸಾಂಸ್ಕೃತಿಕ ನಾಯಕರು ದೈವಗಳಾಗಲು ಅವರ ಜಾತಿ ಅಥವಾ ಪೂರ್ವಜನ್ಮದ ಪುಣ್ಯ ವಿಶೇಷಗಳು ಕಾರಣವಾಗುವುದಿಲ್ಲ. ಆಲಿ, ಬಬ್ಬರ್ಯರು ಮುಸ್ಲಿಮರಾಗಿದ್ದರೆ, ಕಾಂತಾಬಾರೆ-ಬೂದಾಬಾರೆಯರು ಬಿಲ್ಲವ ವರ್ಗಕ್ಕೆ ಸೇರಿದವರು. ತನಿಯ ಕೊರಗ ಸಮುದಾಯಕ್ಕೆ ಸೇರಿದ ದೈವ.

ಹೆಚ್ಚಿನ ದೈವಗಳು ತಮ್ಮ ಮಧ್ಯವಯಸ್ಸಿನಲ್ಲಿ ಮಹತ್ ಸಾಧನೆ ಮಾಡಿ, ಇಲ್ಲವೇ ಸ್ಥಾಪಿತ ಮೌಲ್ಯಗಳಿಗೆ ಮುಖಾಮುಖಿಯಾಗಿ, ಸಾಯುತ್ತಾರೆ. ಕಾರ್ಕಳದಲ್ಲಿ ಗೊಮ್ಮಟನನ್ನು ಕೆತ್ತಿದ ಕಲ್ಕುಡನು ಅರಸನ ಕಾರಣದಿಂದ ತನ್ನ ಬಲದ ಕೈಯನ್ನೂ ಎಡದ ಕಾಲನ್ನೂ ಕಳಕೊಳ್ಳಬೇಕಾಗುತ್ತದೆ. ಅಣ್ಣನಿಗಾದ ಅನ್ಯಾಯವನ್ನು ತಂಗಿ ಕಲ್ಲುರ್ಟಿ ಪ್ರಶ್ನಿಸುತ್ತಾಳೆ. ಗಂಡಸರ ಅನ್ಯಾಯವನ್ನು ಪ್ರತಿಭಟಿಸಿದ ಸಿರಿಯು ಸತ್ತು ದೈವವಾಗುತ್ತಾಳೆ. ಬಳಜೇಯಿ ಮಾನಿಗದಲ್ಲಿ ಚೆನ್ನೆಮಣೆ ಆಟದಲ್ಲಿ ಮೋಸ ಮಾಡಿದ ಗಂಡನಿಗೆ ತವರು ಮನೆಯಲ್ಲಿದ್ದ ಮಾನಿಗಳು ಪೊರಕೆಗೆ ತನ್ನ ತಾಳಿ ಕಟ್ಟಿ ದಂಡಿಗೆಯಲ್ಲಿ ಕಳಿಸುತ್ತಾಳೆ.

ಕ್ಲಾಸಿಕಲ್‌ ಸಂಪ್ರದಾಯದಲ್ಲಿ ನಾಯಕರು ಅವರ ತಾಯಿಯ ಗರ್ಭದಲ್ಲಿರುವಾಗ ದೇವತೆಗಳು ಪುಷ್ಟವೃಷ್ಟಿ ಸುರಿಸುತ್ತಾರೆ. ಆದರೆ ಪಾಡ್ದನಗಳಲ್ಲಿ ಈ ಬಗೆಯ ವಿವರಗಳಿಲ್ಲ. ಈ ವೀರರ ತಾಯಂದಿರು ಗರ್ಭ ಧರಿಸುವಾಗ ಯಾವುದೇ ಶುಭ ಶಕುನಗಳು ಸಂಭವಿಸುವುದಿಲ್ಲ. ಅವರು ಕೇವಲ ಸಾಮಾನ್ಯರು.

ಈ ಸಾಂಸ್ಕೃತಿಕ ನಾಯಕರು ವೀರರಾಗಲು ಅವರು ಬೇರೊಂದು ದೈವದ ಅವತಾರವಾಗಿರುವುದು ಕಾರಣ ಅಲ್ಲ. ಅವರಿಗೆ ಯಾವುದೇ ಪೂರ್ವ ಜನ್ಮದ ಪುಣ್ಯ ವಿಶೇಷಗಳಿಲ್ಲ. ಈ ಜನ್ಮದಲ್ಲಿ ಅವರು ಸಾಧಿಸಿದ್ದೇ ಅಂತಿಮ. ಅವರ ಸಾಮಾಜಿಕ ಸ್ಥಾನಮಾನಗಳು (ಉದಾ: ಬ್ರಾಹ್ಮಣನಾಗಿರುವುದು, ಅರಸು ಕುಮಾರನಾಗಿರುವುದು) ಅವರ ವೀರತ್ವವನ್ನು ನಿರ್ಧರಿಸುವುದಿಲ್ಲ.

ದೈವಗಳಾಗಿರುವ ತುಳುನಾಡಿನ ಸಾಂಸ್ಕೃತಿಕ ನಾಯಕರು ಎಲ್ಲರಂತೆ ಜನಿಸಿ, ಬೆಳೆಯುತ್ತಾ ಬಗೆ ಬಗೆಯ ಒತ್ತಡಕ್ಕೆ ಒಳಗಾಗುತ್ತಾರೆ. ತಮ್ಮ ಪ್ರಾಮಾಣಿಕತೆ, ಬುದ್ಧಿಮತ್ತೆ, ಮತ್ತು ಸಾಹಸಗಳಿಂದ ಜನಾನುರಾಗಿಯಾಗಿರುವ ಅವರು ಸಮಾಜ ಒಡ್ಡುವ ಸವಾಲುಗಳಿಗೆ ದಿಟ್ಟವಾಗಿ ಉತ್ತರಿಸುತ್ತಾರೆ ಮತ್ತು ಅದೇ ಕಾರಣಕ್ಕೆ ಸತ್ತು ದೈವಗಳಾಗುತ್ತಾರೆ.

ಸಾಂಪ್ರದಾಯಿಕ ಕ್ಲಾಸಿಕಲ್‌ ಕಥನಗಳು ನೇರವಾಗಿಯೋ ಪರೋಕ್ಷವಾಗಿಯೂ ವರ್ಣಾಶ್ರಮ ಧರ್ಮದ ಮತ್ತು ಪ್ರಭುತ್ವದ ಪರವಾಗಿಯೇ ಇರುತ್ತವೆ. ಆದರೆ ತುಳುನಾಡಿನ ದೈವ ಕಥನಗಳು ಜಾತಿ ಸಮಾಜದ ಒಳಗಿನ ಸಂಘರ್ಷಗಳನ್ನು ಬಹಿರಂಗಕ್ಕೆ ತರುತ್ತವೆ. ಕನ್ನಲ್ಲಾಯ ದೈವವು ಜಾತಿ ಕೇಳಿ ನೀರುಕೊಟ್ಟವಳನ್ನೇ ಮಾಯಮಾಡುತ್ತದೆ. ಕೋಡ್ದಬ್ಬು ಪಾಡ್ದನವು ದಲಿತ ಹುಡುಗನೊಬ್ಬ ತನ್ನ ಸಾಮರ್ಥ್ಯದಿಂದ ವಿದ್ಯಾವಂತನಾದಾಗ ಉಳಿದವರು ಅವನ ವಿರುದ್ಧ ಹೇಗೆ ಸಂಚು ಮಾಡುತ್ತಾರೆ ಎಂಬುದನ್ನು ಮನೋಜ್ಞವಾಗಿ ವಿವರಿಸುತ್ತದೆ.

ಈ ಬಗೆಯ ಕಥನಗಳು ಭಾರತೀಯ ಸಂಸ್ಕೃತಿಯ ಸಶಕ್ತವಾದ ಒಂದು ಭಾಗವೇ ಹೌದು. ಅವನ್ನು ಬದಲಿಸಿ ಇನ್ನಾವುದೋ ಒಂದರ ಭಾಗ ಮಾಡುವುದರಿಂದ ಯಾರಿಗೂ ಹೆಚ್ಚು ಪ್ರಯೋಜನ ಇಲ್ಲ.

ಪೋಟೋ ಕೃಪೆ: ಉಷ ಕಟ್ಟೆಮನೆ

– ಡಾ. ಪುರುಷೋತ್ತಮ ಬಿಳಿಮಲೆ
ನಿವೃತ್ತ ಪ್ರಾಧ್ಯಾಪಕರು, ಜೆ.ಎನ್.ಯು, ನವದೆಹಲಿ

You cannot copy content of this page

Exit mobile version