Thursday, June 13, 2024

ಸತ್ಯ | ನ್ಯಾಯ |ಧರ್ಮ

ತುಳುವರ ನವರಾತ್ರಿಯ ಪಿಲಿ ನಲಿಕೆ

ಹುಲಿವೇಷ ಎಂಬ ಕಲೆ ಕರಾವಳಿಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ವರ್ಷದಲ್ಲಿ ಕೆಲವೇ ದಿನಗಳ ಕಾಲ ಕಾಣ ಸಿಗುವ ಹುಲಿವೇಷಗಳು ಕರಾವಳಿ ಭಾಗದ ಜನರಲ್ಲಿ ವಿಶೇಷ ಗೌರವವನ್ನು ಉಳಿಸಿಕೊಂಡಿವೆ. ತುಳುವರ ಈ ಕಲಾ ಪರಂಪರೆಯ ಬಗ್ಗೆ ಲೇಖಕಿ ಡಾ. ಜ್ಯೋತಿ ಚೇಳೈರು ವಿಶೇಷವಾಗಿ ಬೆಳಕು ಚೆಲ್ಲಿದ್ದಾರೆ.   

 ಕರಾವಳಿಯಲ್ಲಿ ಪಿಲಿ ನಲಿಕೆ (ಹುಲಿ ಕುಣಿತ) ಯಾವಾಗ ಆರಂಭವಾಗಿರಬಹುದು? ಎಂದು ಪ್ರಶ್ನಿಸಿದಾಗ, ಹುಡುಕಾಡಿದಾಗ ಸಿಗುವ ಮಾಹಿತಿ ಬಹಳ ಕಡಿಮೆಯೇ. ಅದರೆ, ಹುಲಿ ಕುಣಿಯುವ ತಂಡಗಳ ಮೂವತ್ತರ ಸಂಭ್ರಮ, 40ರ ಸಂಭ್ರಮದ  ಪಿಲಿನಲಿಕೆಗೆ ಶುಭ ಕೋರುವ ಫ್ಲೆಕ್ಸ್ ಗಳು ಬೇಕಾದಷ್ಟು ಕಾಣುತ್ತವೆ. ಪಿಲಿ ನಲಿಕೆಯ ಮೂಲ ಎಲ್ಲಿ ಎಂದರೆ ಮಹತ್ವದ ಮಾಹಿತಿಗಳು ಎಲ್ಲೂ  ಲಭ್ಯವಾಗಲಿಲ್ಲ. ಒಂದು ಉಲ್ಲೇಖದ ಪ್ರಕಾರ “ಮಂಗಳಾಪುರ” ಎಂಬ ಹೆಸರಿಗೆ ಕಾರಣವಾದ ಮಂಗಳಾದೇವಿಯ ವಾಹನ ಹುಲಿಯಾಗಿರುವುದರಿಂದ ಹುಲಿವೇಷ ಹಾಕಿ ಕುಣಿಯುವ ಪರಂಪರೆ ಬಂದಿರಬೇಕು ಎಂದು ತಿಳಿದು ಬರುತ್ತದೆ. ನಾಥ ಪಂಥದ ನಂತರದಲ್ಲಿ ಬಂದ ವೈದಿಕ ಪರಂಪರೆಯ ಪ್ರಭಾವ ಈ ಪುರಾಣದ ಕತೆಗಳಲ್ಲಿ ಇದೆ. ಪ್ರಾಚೀನತೆಯ ದೃಷ್ಟಿಯಿಂದ ಗಮನಿಸುವುದಾದರೆ ತುಳು ಜಾನಪದದಲ್ಲಿ ಇರುವ ಆರಾಧನಾ ಪರಂಪರೆಯಲ್ಲಿ ಬರುವ ಪಿಲಿಭೂತ( ಹುಲಿ ಭೂತ), ಪಿಲ್ಚಂಡಿ (ಹುಲಿ ಚಂಡಿ)ಯ ಕಲ್ಪನೆ ಪ್ರಾಚೀನವಾದುದು. ಪಿಲಿಪಂಜಿ (ಹುಲಿ ಹಂದಿ) ಕುಣಿತವು ತುಳುನಾಡಿನ ಬೇಟೆ ಸಂಬಂಧಿ ಕುಣಿತಗಳಲ್ಲಿ ಒಂದು. ಹಂದಿ ಮತ್ತು ಹುಲಿ ಪ್ರಧಾನ ವೇಷಧಾರಿಗಳಾಗಿ ಎರಡು ಜಿಂಕೆ ಮತ್ತು ಕೋವಿ ಹಿಡಿದ ಒಬ್ಬ ದೊರೆಯ ವೇಷವೂ ಇರುತ್ತದೆ. ಇಲ್ಲಿ ಹಾಡುವ ಹಾಡು ಪಿಲಿಪಂಜಿ ಕುಣಿತದ ಈಶ್ವರ ದೇವರ ಸೃಷ್ಟಿ ಮತ್ತು ಹುಲಿ ಬೇಟೆಯ ವಿವರಗಳಿರುವಂತಹುದು. ಪಿಲಿಭೂತ ಮತ್ತು ಪಿಲಿಕೋಲವನ್ನು ಗಮನಿಸುವಾಗ ಭೂತದ ಹುಟ್ಟಿನ ಕತೆಗಿಂತಲೂ  ಮಹಿಮೆಯನ್ನು ಸಾರುವ ಸಂಗತಿಗಳು ಮುಖ್ಯ ನೆಲೆಗೆ ಬರುತ್ತವೆ.

ದುರ್ಗೆಯನ್ನು ಗ್ರಹಿಸಿದ್ದು ಪಿಲ್ಚಂಡಿಯಾಗಿ..

ದುರ್ಗೆಯನ್ನು ನಮ್ಮ ಜನಪದರು ಗ್ರಹಿಸಿದ್ದು ʼಪಿಲ್ಚಂಡಿʼಯಾಗಿ. ಕಾರಣಿಕದ ಈ ದೈವವು ಶಕ್ತಿದಾಯಕವಾದುದು. ಹುಲಿಯ ಮೇಲೆ ಕುಳಿತ ದುರ್ಗೆ ಎನ್ನುವುದಕ್ಕಿಂತಲೂ ಬಾಯಿತೆರೆದು ನಿಂತ ಹುಲಿಯ ಉರುಗಳು ಆಲಡೆಗಳಲ್ಲಿಯೂ ಇವೆ. ಸಿರಿ ಮತ್ತು ಚಿಕ್ಕುವಿನ ಆರಾಧನಾ ಸ್ಥಳಗಳಲ್ಲೂ ಬಾಯಿ ತೆರೆದು ಉಗ್ರವಾಗಿ ನಿಂತಿವೆ‌. ನಮ್ಮ ಆರಾಧನೆಯ ಪರಂಪರೆಯು ಹಲವಾರು  ಸತ್ಯಗಳನ್ನು ತನ್ನ ಮಡಿಲಲ್ಲಿ ಹುದುಗಿರಿಸಿಕೊಂಡಿರುತ್ತದೆ. ಅದರಲ್ಲಿ ಹಲವಾರು ಸೂಕ್ಷ್ಮ ಎಳೆಗಳನ್ನು ಹೆಣೆದು ಭಯ ಮತ್ತು ಭಕ್ತಿಯನ್ನು ಸಾಕಾರ ಗೊಳಿಸುವುದರೊಂದಿಗೆ ಪ್ರೀತಿ ಮತ್ತು ನೀತಿಯ, ಸಮನ್ವಯತೆಯ ಹಂಬಲವೂ ಇರುತ್ತದೆ. ಕಾಪುವಿನಲ್ಲಿ ನಡೆಯುವ ಪಿಲಿ ಕೋಲವು ಇದಕ್ಕಿಂತಲೂ ಭಿನ್ನವಾಗಿ ಪಿಲಿ ಕೋಲ ಕಟ್ಟಿದವರು ಯಾರನ್ನು ಮುಟ್ಟುತ್ತಾರೋ ಅವರು ಬರುವ ವರುಷದ ಕೋಲಕ್ಕಿಂತ ಮೊದಲೇ ಸಾಯುತ್ತಾರೆ. ಇಲ್ಲದೇ ಹೋದರೆ ಕೋಲ ಕಟ್ಟಿದವರೇ ಸಾಯುತ್ತಾರೆ ಎಂಬ ನಂಬಿಕೆ ಇದೆ. ಈ ಎಲ್ಲಾ ಆರಾಧನೆಗಳಿಗಿಂತಲೂ ಭಿನ್ನವಾದುದು ನವರಾತ್ರಿಯ ದುರ್ಗಾಪೂಜೆ ಮತ್ತು ಪಿಲಿನಲಿಕೆ.

೧೯೨೮ ರಲ್ಲಿ ಪಿಲಿ ನಲಿಕೆ!

ಪಿಲಿನಲಿಕೆ ಯಾವಾಗ ಆರಂಭವಾಯಿತು ಎಂದು ಹುಡುಕಾಡಿದಾಗ ಸ್ನೇಹಿತರಿಂದ ಲಭಿಸಿದ್ದು 1928ರಲ್ಲಿ ಹಾಕಿದ್ದ ಹುಲಿವೇಷದ ಕಪ್ಪು ಬಿಳಿಪಿನ ಭಾವಚಿತ್ರ. ವೇಷ ಹಾಕುವವರು ಸಾಮಾನ್ಯವಾಗಿ ತಳ  ಸಮುದಾಯಗಳು. ಕುಣಿಸುವವರು ಮಾತ್ರ ಮೇಲ್ವರ್ಗದವರು ಆಗಿರುತ್ತಾರೆ. ಇಂದಿಗೂ ಕಟೀಲು ದೇವಸ್ಥಾನದ ಸುತ್ತಲಿನ ಊರುಗಳನ್ನು ಪ್ರತಿನಿಧಿಸಿ ನಡೆಯುವ ದಸರಾ ಮೆರವಣಿಗೆಯಲ್ಲಿ ಎಕ್ಕಾರಿನ ಹುಲಿ, ಕೊಡೆತೂರಿನ ಹುಲಿ, ಕಟೀಲಿನ ಹುಲಿ ಎಂದು ಊರವರು ವೇಷ ಹಾಕಿ ಮೆರವಣಿಗೆಯ ವಿಜೃಂಭಣೆಯನ್ನು ಹೆಚ್ಚಿಸುತ್ತಾರೆ. ದೇವಿಗೆ ಹರಕೆ ಹೊತ್ತವರು ಗಂಡು ಹೆಣ್ಣು ಮಕ್ಕಳಿಗೆ ಒಂದು ದಿನದ ವೇಷ ಹಾಕುವುದು ಸಾಮಾನ್ಯ ಮತ್ತು ಸಂಭ್ರಮವೂ ಕೂಡಾ. ಇಲ್ಲಿ ಹಾಕುವ ವೇಷವು ಸಾಂಪ್ರದಾಯಿಕವಾಗಿದ್ದು, ಮೈಗೆ ಬಣ್ಣ ಬಳಿಯಲು ಒಂದು ಇಡೀ ದಿನ ಕೈಯ್ಯಗಲಿಸಿ ಊಟ,  ಶೌಚ ಎಲ್ಲವನ್ನೂ ಮರೆತು ನಿಲ್ಲಬೇಕಿತ್ತು. ಅದಕ್ಕಾಗಿ ಉಪವಾಸ ವ್ರತ ನಡೆಸಿ ವೇಷ ಹಾಕುತ್ತಿದ್ದರು. ಬೇರೆ ಊರುಗಳಿಂದ ಬಂದು ವೇಷ ಹಾಕುವವರು ಒಮ್ಮೆ ಹುಲಿವೇಷದ ಬಣ್ಣ ಬಳಿದರೆ ಅದನ್ನು ತೆಗೆಯುವುದು ಒಂಬತ್ತು ದಿನಗಳ ನಂತರ. ವೇಷ ಕಳಚುವಾಗ ಸಂಗ್ರಹವಾದ ಹಣದ ಒಂದು ಪಾಲನ್ನು ದೇವಿಗೆ ಹರಕೆಯಾಗಿ ಒಪ್ಪಿಸಬೇಕು. ಇಲ್ಲಿ ಲಾಭ ನಷ್ಟದ ಪ್ರಶ್ನೆ ಇಲ್ಲ.

ಪಿಲಿನಲಿಕೆಯ  ಸ್ವರೂಪ ಬದಲಾಗಿದೆ

ಕಾಲಚಕ್ರದಲ್ಲಿ ಪಿಲಿನಲಿಕೆಯ  ಭಾವ,  ಲಯ, ಸ್ವರೂಪಗಳೂ ಬದಲಾಗಿವೆ. ಹುಲಿನೃತ್ಯ ಕೇವಲ ನೃತ್ಯವಲ್ಲ.  ಅದು ಬಲಾಢ್ಯತೆಯ ಪ್ರದರ್ಶನ. ಇಲ್ಲಿ ಕುಣಿತಗಾರರಿಗೆ ದೈಹಿಕ ಶ್ರಮವೇ ಪ್ರಧಾನ. ಹಾಗಾಗಿ ನೃತ್ಯದಲ್ಲಿ ಮೈನವಿರೇಳಿಸುವಂತಹ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ. ಒಂದು, ಮೂರು, ಐದು ಪೌಲದಲ್ಲಿ ಗಿರಕಿ ಹೊಡೆಯುವುದು, ತೇಲ್ ಬಗ್ಗುವುದು, ಚಕ್ರದಂಡದ ಮೂಲಕ ಜನರ ಮನರಂಜಿಸುವುದು, ನೆಲದ ಮೇಲೆ ಹಣದ ನೋಟು ಇಟ್ಟು ಹಿಂಬದಿಯಿಂದ ಬಾಗಿಸಿ ಬಾಯಲ್ಲಿ ಕಚ್ಚಿ ತೆಗೆಯುವುದು ಮುಂತಾದ ಕಸರತ್ತುಗಳೂ ಪ್ರದರ್ಶನಗೊಳ್ಳುತ್ತವೆ. ವಿಶಿಷ್ಟ ಪ್ರಯೋಗಗಳಲ್ಲಿ ಕುರಿ ಹೊಡೆಯುವುದು, ಎಂದರೆ ಕುರಿಯನ್ನು ಬಾಯಿಯಲ್ಲಿ ಕಚ್ಚಿ  ತನ್ನ ಹಿಂದಕ್ಕೆ ಎಸೆಯುವುದೂ ಇತ್ತು. ಅ ಕುರಿ  ಕುಣಿದವರಿಗೆ ಸಲ್ಲುತ್ತದೆ. ಪ್ರಾಣಿ ಹಿಂಸೆಯನ್ನು ನಿಷೇಧಿಸುವ ಹೆಸರಿನಲ್ಲಿ ಈಗ ಅಕ್ಕಿಮುಡಿಯನ್ನು ಬಾಯಲ್ಲಿ ಕಚ್ಚಿ ತಮ್ಮ ಬೆನ್ನ ಹಿಂದೆ ಎಸೆಯುತ್ತಾರೆ. ಬೆನ್ನು, ಸೊಂಟ, ಕತ್ತು ಹೆಚ್ಚು ಶ್ರಮ ಬಯಸುತ್ತ ಕುಣಿತವು ನೈಪುಣ್ಯ ಮತ್ತು ಜಾಣ್ಮೆಯನ್ನೂ ನಿರೀಕ್ಷಿಸುತ್ತದೆ. ಒಟ್ಟಾರೆ ಪಿಲಿನಲಿಕೆಯಲ್ಲಿ ಅಬ್ಬರ ಸಂಭ್ರಮಗಳಿಂದ ಬಣ್ಣ ಬಣ್ಣದ ಹುಲಿವೇಷದ ನೃತ್ಯ ಪ್ರದರ್ಶನ ಗೊಳ್ಳುತ್ತದೆ. ಆರ್ಥಿಕವಾಗಿ ಒಂದಿಷ್ಟು ಬಂಡವಾಳವನ್ನು ಇದು ಬಯಸುತ್ತದೆ. ತಾಸೆಯ ಪೆಟ್ಟಿಗೆ ಮೈಮರೆಯುವ, ಕಿವಿಯಿಂದ ಆಲಿಸಿ ಕಣ್ಣ ನೋಟದ ಕುತೂಹಲದಿಂದ ಗಮನಿಸುವ ತುಳುವರು ಹುಲಿಕುಣಿತವನ್ನು ಪೋಷಿಸುವವರೂ ಹೌದು.

ಪರಂಪರೆ ಮತ್ತು ಆಧುನಿಕತೆಯ ಮುಖಾಮುಖಿ

ಇಲ್ಲಿ ಹೊಸ ಹೊಸ ಪ್ರಯೋಗಗಳು ಜಾರಿಗೊಳ್ಳುತ್ತಿವೆ. ಪರಂಪರೆ ಮತ್ತು ಆಧುನಿಕತೆಯ ಮುಖಾಮುಖಿಯಲ್ಲಿ ಪಿಲಿನಲಿಕೆ ಸಾಗುತ್ತದೆ. ಇಂದು ಸಾಂಪ್ರದಾಯಿಕ ತಾಸೆಯ ಪೆಟ್ಟಿಗಿಂತ ಹಿಂದಿ ಸಿನಿಮಾದ ಹಾಡುಗಳಿಗೂ ಹುಲಿಗಳು ಕುಣಿಯುತ್ತವೆ. ಹಾಕುವ ಬಣ್ಣಗಾರಿಕೆಯಲ್ಲೂ ಹೊಸ ಪ್ರಯೋಗಗಳಾಗಿವೆ. ಹಿಂದೆ ತಾಯಿ ಹುಲಿ ಆಕರ್ಷಣೆಯ ಕೇಂದ್ರವಾದರೆ ಇಂದು ಮರಿ ಹುಲಿಗಳಿಗೆ ವಿಶೇಷ ಆಕರ್ಷಣೆ ಇದೆ, ಸ್ಪರ್ಧೆ ಇದೆ. ಸ್ಪರ್ಧೆಯಲ್ಲಿ ಮರಿ ಹುಲಿಯ ಹೆಜ್ಜೆಯೂ ಮುಖ್ಯವಾಗಿದೆ.

ಹುಲಿವೇಷದ ಬಣ್ಣಗಾರಿಕೆ

ಇಲ್ಲಿ ಕುಣಿತದಷ್ಟೇ ಬಣ್ಣಗಾರಿಕೆ ವಿಶಿಷ್ಟವಾದುದು. ವೆಲ್ವೆಟ್‌ ನಿಂದ ಮಾಡಿದ ಕಡುಬಣ್ಣದ ಚಲ್ಲಣವೊಂದು ಬಿಟ್ಟು ಉಳಿದಂತೆ ಮೈಗೆಲ್ಲಾ ಹಳದಿ, ಕಪ್ಪು, ಬಿಳಿ, ಬಣ್ಣ ಬಳಿದು ಬಾಲ ಕಟ್ಟಿ, ಹುಲಿಯ ಮುಖವಾಡ ಧರಿಸಿಕೊಂಡು ತಂಡವಾಗಿ ಬಂದು ಊರ ಮನೆಗಳ ಮುಂದೆ ಕುಣಿಯುತ್ತಾರೆ. ಕುಣಿತ ಮುಗಿಯೋ ಹೊತ್ತಿಗೆ ಇಂತಿಷ್ಟು ಹಣ ನೀಡುವುದು ವಾಡಿಕೆ. ಹುಲಿ ವೇಷದಲ್ಲೂ ಪಟ್ಟೆಪಿಲಿ, ಚಿಟ್ಟೆಪಿಲಿ, ಬಂಗಾಲಿ ಪಿಲಿ, ಕರಿಪಿಲಿಗಳೆಂಬ ಭಿನ್ನ ರೀತಿಯ ಬಣ್ಣಗಾರಿಕೆಯಿದೆ. ಕೆಲವೊಮ್ಮೆ ಹಸಿರು ಬಣ್ಣದ ಹುಲಿಗಳೂ ಇರುತ್ತವೆ. ಇಲ್ಲಿ ವೇಷಧಾರಿಯಲ್ಲಿ ನೈಜತೆ ತುಂಬುವವರು ಕಲಾವಿದರು. ತಮ್ಮ ಕುಂಚಗಳಿಂದ ಹುಲಿವೇಷ ಹಾಕುವವರಿಗೆ ವೈವಿಧ್ಯಮಯ ಬಣ್ಣ ಬಳಿದು ಕಾಡಿನ ಹುಲಿಯನ್ನು ಊರಿಗೆ ತಂದು ಬಿಡುವ ಪ್ರತಿಭಾವಂತರಿವರು.

ವೇಷಕ್ಕೆ ನಿಲ್ಲುವುದೆಂದರೆ..

ಹುಲಿವೇಷದ ವೇಷಕ್ಕೆ ನಿಲ್ಲುವುದೆಂದರೆ ನಿಲ್ಲುವುದೇ. ಮೈಯ ಕೈಕಾಲಿನ ರೋಮಗಳನ್ನು ತೆಗೆದು ಪೈಂಟ್ ಹಚ್ಚಲು ಆರಂಭಿಸಿದಾಗ ಮೈಯ್ಯೆಲ್ಲಾ ಉರಿಯ ಅನುಭವ. ಹಿಂದೆಲ್ಲಾ ಅವರು  ರಚ್ಚೇವಿನ (ಕೆಸುವಿನ ಎಲೆ) ಅಗಲ ಎಲೆಯಲ್ಲಿ ಅಥವಾ ಬಾಳೆ ಎಲೆಯ ಮೇಲೆ ಮಲಗುತ್ತಿದ್ದರು. ಈಗ ಹಾಕುವ ಬಣ್ಣದ ಗುಣಮಟ್ಟದಲ್ಲಿ ವ್ಯತ್ಯಾಸ ಬಂದಿದೆ. ಒಂದು ದಿನಕ್ಕೆ ಬಣ್ಣ ಹಚ್ಚಿದವರೂ ಬಣ್ಣ ತೆಗೆಯುವುದು ಕಷ್ಟವೇ. ಬಣ್ಣ ತೆಗೆಯಲು ‘ನೆಗರಗುಂಡಿ’ ಯಲ್ಲಿ ಇಳಿದು ಚಿಮಿಣಿ ಎಣ್ಣೆ ಹಚ್ಚಿ ಮರಳನ್ನು ಹಾಕಿ ತೆಂಗಿನ ನಾರುವಿನಿಂದ ತಿಕ್ಕಿ ತೆಗೆಯುವುದು ಒಂದು ದೊಡ್ಡ ಕಾಯಕವೇ ಆಗಿತ್ತು ಎನ್ನುವುದು ಕಟೀಲಿನಲ್ಲಿ ವೇಷ ಹಾಕುತ್ತಿದ್ದ ಸಂಜೀವಣ್ಣನ ಅನುಭವದ ಮಾತು.  ಆಗ ಹುಲಿ ವೇಷ ಹಾಕುತ್ತಿದ್ದವರಲ್ಲಿ ಊರಿನ ಗುತ್ತಿನ ಮನೆಯವರೂ ಪಾಲು ಪಡೆಯುತ್ತಿದ್ದರು. ದಿವಂಗತ ರಘುರಾಮ ಶೆಟ್ಟರು ಅಂತಹ ಗುತ್ತಿನ ಮನೆಯ ದೊಡ್ಡ ಹುಲಿಯೇ ಆಗಿದ್ದರು.  ದೇಹದ ಗಾತ್ರ, ಶಕ್ತಿ ಸಾಮರ್ಥ್ಯಗಳಿಂದ ಹುಲಿಯು ಪಟ್ಟೆ ಪಿಲಿಯೋ ಮರಿ ಪಿಲಿಯೋ ಎಂದು ತಿಳಿಯುತ್ತಿತ್ತು. ಹಿಂದೆ ಮನೆ ಮನೆಗೆ ತೆರಳುತ್ತಿರುವ ಹುಲಿವೇಷಗಳ ಸಂಖ್ಯೆ ನಿಯಮಿತವಾಗಿ ಇತ್ತು. ತಾಯಿ ಮಕ್ಕಳ ಕುಟುಂಬವೆಂಬಂತೆ ತಾಯಿ ಹುಲಿ ಮರಿ ಹುಲಿಗಳನ್ನು ತನ್ನ ಮಡಿಲೊಳಗೆ ಇರಿಸಿ ಹಾಲೂಡಿಸುವ, ಪೋಷಿಸುವ ನೃತ್ಯವನ್ನು ಹುಲಿಯ ಹೆಜ್ಜೆಯ ಹಿನ್ನೆಲೆಯಲ್ಲಿ ವಿವರಿಸಲಾಗುತ್ತಿತ್ತು. ಬಡಿಯುವ ತಾಸೆಯ ಪೆಟ್ಟಿನ ಲಯಕ್ಕೆ ಅನುಗುಣವಾಗಿ ನಿಧಾನ ಮತ್ತು ವೇಗವಾಗಿ ಹೆಜ್ಜೆ ಹಾಕಲಾಗುತ್ತದೆ. ಅಂದು ಒಂದು ತಂಡದಲ್ಲಿ ಹತ್ತಿಪ್ಪತ್ತು ಹುಲಿಗಳು ಕಾಲ್ನಡಿಗೆಯಲ್ಲಿ ಊರೂರು ಸುತ್ತುತ್ತಿದ್ದ ಹುಲಿಗಳು ಇಂದಿಲ್ಲ. ಕುಣಿಯತ್ತಲೇ ಸಾಗುವಾಗ ಇಳಿಸಂಜೆಗೆ ಬಳಲಿ ಬಸವಳಿದು ಊರಿನ ದೇವಸ್ಥಾನದ, ದೈವಸ್ಥಾನದ ಅಂಗಣಗಳಲ್ಲಿ  ರಾತ್ರಿ ಕಳೆಯುತ್ತಿದ್ದರು. ವೃತ ನಿಷ್ಠರಾಗಿ ಬಾಳುತ್ತಿದ್ದ  ಹಿರಿಯರು ತಾವು ಹಾಕುವ ವೇಷ ದೇವಿಯ ಸೇವೆ ಎಂದೇ ಭಾವಿಸುತ್ತಿದ್ದರು.

ಕೊರೋನೋತ್ತರ ಕಾಲದಲ್ಲಿ ಪಿಲಿ ನಲಿಕೆ

ಪಿಲಿ ನಲಿಕೆಯು ಕೊರೋನೋತ್ತರ ಕಾಲದಲ್ಲಿ ಬಹಳ ವಿಜೃಂಭಣೆಯಿಂದ ಸಾಗುತ್ತಿದೆ. ಪಿಲಿಪರ್ಬ (ಹುಲಿ ಹಬ್ಬ), ಪಿಲಿನಲಿಕೆ( ಹುಲಿ ಕುಣಿತ)ದ ಗೊಬ್ಬು (ಆಟ) ಸ್ಪರ್ಧೆಗಳು ಹೆಚ್ಚುತ್ತಿವೆ. ಉಳ್ಳವರ ಮನೆಯಂಗಳದಲ್ಲಿ ಬಲಾಢ್ಯತೆಯಿಂದ ಕುಣಿಯುವ ಹುಲಿಗಳೊಂದಿಗೆ ಕೆಲವರ ಹೆಸರಿನಲ್ಲೂ ಹುಲಿಗಳು ಬೀದಿಗಿಳಿಯುತ್ತವೆ. ʼಇಂತವರ ಹುಲಿʼ ಎನ್ನುವ ಮೂಲಕ ಒಂದು ಪ್ರತಿಷ್ಠೆಯನ್ನು ಅವುಗಳು ಹೊಂದಿವೆ. ಅದರೊಂದಿಗೆ ಅದು ವಸೂಲಿಯ ಒತ್ತಾಯವಾಗಿಯೂ ಹೊರ ಹೊಮ್ಮಿದೆ. ಪಿಲಿನಲಿಕೆಯ ಸಂಗ್ರಹದಿಂದ ಅಶಕ್ತರಿಗೆ ಸಹಾಯ ಹಸ್ತ ನೀಡುತ್ತೇವೆ ಎನ್ನುವವರ ಸಂಖ್ಯೆಯೂ ಹೆಚ್ಚಿದೆ.

ಹೆಣ್ಣು ಹುಲಿಗಳು!

ಹುಲಿ ವೇಷ ಹಾಕಿ ಕುಣಿಯುವ ಹೆಣ್ಣು ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಹುಲಿಯಂತೆ ಕುಣಿಯಲು ಕೈ ಮತ್ತು ಕಾಲಿನ ಚಲನೆ ವೇಗವಾಗಿ ಸಾಗಬೇಕಾದುದು ಮತ್ತು ಕಾಲನ್ನು ಎತ್ತಿ ಇಡುವ ಹೆಜ್ಜೆಯ ಕುಣಿತಗಳನ್ನು ಹೆಣ್ಣು ಮಕ್ಕಳು ಕುಣಿಯುವ ಮೂಲಕ ತಮ್ಮ ಅನನ್ಯತೆಯನ್ನು ಮೆರೆದಿದ್ದಾರೆ. ಗಂಡುಮಕ್ಕಳು ಬರಿಮೈಗೆ ಬಣ್ಣ ಬಳಿದರೆ ಹೆಣ್ಣು ಮಕ್ಕಳು ಮೈತುಂಬಾ ಬಟ್ಟೆ ತೊಟ್ಟು ತೊಡುವ ಮುಖವಾಡಗಳಿಂದಲೇ ಹುಲಿಯ ವ್ಯಗ್ರತೆಯನ್ನು ಆವಿರ್ಭವಿಸುತ್ತಾರೆ.

ಪೂರ್ವ ತಯಾರಿ

ಮಾರ್ನೆಮಿ(ನವರಾತ್ರಿ) ಬರುವ ಪೂರ್ವದಲ್ಲಿ ಪೂರ್ವತಯಾರಿ ಮತ್ತು ಸಿದ್ಧತೆಯ ತಾಸೆಯ ಪೆಟ್ಟುಗಳು ಹುಲಿವೇಷದ ಮುನ್ನುಡಿಗಳು. ಗುಡ್ಡದ ತುದಿಯಲ್ಲೋ, ಊರಾಚೆಗಿನ ಸ್ಥಳಗಳಲ್ಲೋ ಹಿರಿಯರು ಕಿರಿಯರಿಗೆ ಪಿಲಿನಲಿಕೆಯ ಹೆಜ್ಜೆಗಳನ್ನು ಕಲಿಸುತ್ತಾರೆ. ವಾದ್ಯ ಸಂಗೀತ, ಕುಣಿತದ ಹೆಜ್ಜೆ, ಬಣ್ಣದ ವಿನ್ಯಾಸ, ದೈಹಿಕ ಸಾಮರ್ಥ್ಯ ಮತ್ತು ಶ್ರಮದೊಂದಿಗೆ ಪರಸ್ಪರ ನಂಬಿಕೆ ವ್ಯವಹಾರ ಸಾಮಾಜೀಕರಣದಲ್ಲಿ ಪ್ರಮುಖ ಅಂಶಗಳಾಗಿವೆ. ಪಿಲಿ ನಲಿಕೆಯೂ ಒಂದು ಕಲಾ ಪ್ರಕಾರವಾಗಿದ್ದು ಇದಕ್ಕೆ ಮನ್ನಣೆ ಗೌರವಗಳು ಸಲ್ಲಬೇಕು. ಸಂಗೀತ, ಬಣ್ಣಗಾರಿಕೆ, ಕುಣಿತ ಮೂರೂ ಮೇಳೈಸಿದ ಪಿಲಿ ನಲಿಕೆ ಸಾಂಸ್ಕೃತಿಕ ಚಲನೆಯಲ್ಲಿ ಬದಲಾವಣೆಗಳನ್ನು ಪಡೆದುಕೊಂಡರೂ ದೇಶ ವಿದೇಶಗಳ ವೇದಿಕೆಗಳಲ್ಲಿ ಪ್ರದರ್ಶನಗೊಂಡು ತುಳುವರ ಕಲಾಪರಂಪರೆಯ ಒಂದು ಭಾಗವಾಗಿದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಡಾ. ಜ್ಯೋತಿ ಚೇಳೈರು
ಉಪನ್ಯಾಸಕಿ, ಕವಯಿತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಗಿರುವ ಇವರು ಕನ್ನಡ ಮತ್ತು ತುಳು ಎರಡೂ ಭಾಷೆಯ ಸಾಹಿತ್ಯ ಕೃಷಿಯಲ್ಲಿ  ತೊಡಗಿ ಕೊಂಡವರು.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ನವರಸಗಳಲ್ಲಿ ನವದುರ್ಗೆಯರು- ಶೈಲಪುತ್ರಿ
ನವರಾತ್ರಿ ಪ್ರಯುಕ್ತ ಇದೊಂದು ವಿಶೇಷ ಸರಣಿಯನ್ನು Peepal / ಪೀಪಲ್ ಹೊರತಂದಿದೆ. ನವರಾತ್ರಿಯ ನವದುರ್ಗೆಯರನ್ನು ನವರಸಗಳಲ್ಲಿ ವರ್ಣಿಸುವ ಕೆಲಸವನ್ನು ಕವಯತ್ರಿ ಶೋಭಾ ಗಂಗಾಧರ್‌ ಮೃಗ ನಯನಿ ಅವರು ಮಾಡಿದ್ದಾರೆ. ಇದೊಂದು ವಿನೂತನ ಪ್ರಯತ್ನ. ಈ ವಿಡಿಯೋದಲ್ಲಿ ನವದುರ್ಗೆಯರಲ್ಲಿ ಮೊದನೆಯವಳಾದ ಶೈಲಪುತ್ರಿಯ ವಿವರಣೆಯಿದೆ.
https://youtu.be/1T3a6WmL34w

ಇದೇ ವಿಡಿಯೋವನ್ನು ಪೀಪಲ್‌ ಫೆಸ್ಬುಕ್‌ ಪೇಜಿನಲ್ಲಿ ನೋಡಲು- https://www.facebook.com/peepaltvkannada/videos/778665506774796

Related Articles

ಇತ್ತೀಚಿನ ಸುದ್ದಿಗಳು