ಕೊಚ್ಚಿ: ಭಾರತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)
ದೇಶಕ್ಕೆ ಅಂಟಿದ ಕ್ಯಾನ್ಸರ್ ಎಂದು ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ ಶುಕ್ರವಾರ ಪುನರುಚ್ಚರಿಸಿದ್ದಾರೆ.
ನನ್ನ ಹೇಳಿಕೆಗಳ ಕುರಿತು ನನಗೆ ವಿಷಾದವಿಲ್ಲ ಮತ್ತು ಆ ಕುರಿತು ಕ್ಷಮೆ ಕೇಳುವ ಪ್ರಮೇಯವೇ ಇಲ್ಲ ಎಂದು ಅವರು ಹೇಳಿದರು. ಆ ವಿಷಯವಾಗಿ ಅವರು ನಾನು ಕ್ಷಮೆಯಾಚಿಸಬೇಕು ಎಂದು ಬಯಸುತ್ತಿದ್ದಾರೆ, ನಾನು ಹೇಳಿಕೆ ಹಿಂಪಡೆಯಬೇಕು ಎಂದು ಎದುರು ನೋಡುತ್ತಿದ್ದಾರೆ. ಆದರೆ ಅದೆಲ್ಲ ನಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
“ಒಮ್ಮೆ ಹೇಳಿದ ನಂತರ ಅದನ್ನು ಹಿಂದಕ್ಕೆ ತೆಗೆದುಕೊಳ್ಳುವುದರಲ್ಲಿ ಅಥವಾ ಕ್ಷಮೆಯಾಚಿಸುವುದರಲ್ಲಿ ನನಗೆ ನಂಬಿಕೆಯಿಲ್ಲ” ಎಂದು ತುಷಾರ್ ಗಾಂಧಿ ಹೇಳಿದರು. ಅವರು ಎರ್ನಾಕುಲಂನ ಅಲುವಾದಲ್ಲಿರುವ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವೈಕಂ ಸತ್ಯಾಗ್ರಹದಲ್ಲಿ ಭಾಗವಹಿಸಿದ ನಂತರ, ಮಹಾತ್ಮರು ಮಾರ್ಚ್ 18, 1925ರಂದು ಈ ಸಂಸ್ಥೆಗೆ ಭೇಟಿ ನೀಡಿದರು. ತುಷಾರ್ ಆ ಭೇಟಿಯ ಶತಮಾನೋತ್ಸವವನ್ನು ಆಚರಿಸಲು ಕ್ಯಾಂಪಸ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶ್ರೀ ನಾರಾಯಣ ಗುರುಗಳು ಶಿವಗಿರಿ ಮಠದಲ್ಲಿ ಮಹಾತ್ಮರನ್ನು ಭೇಟಿಯಾದ ಶತಮಾನೋತ್ಸವದ ಸಂದರ್ಭದಲ್ಲಿ ನೀಡಿದ ಭಾಷಣದಲ್ಲಿ ತುಷಾರ್ ಅವರು ಆರ್‌ಎಸ್‌ಎಸ್ ಕುರಿತು ಮೇಲಿನ ಹೇಳಿಕೆಗಳನ್ನು ನೀಡಿದ್ದಾರೆ.
ಬುಧವಾರ ಸಂಜೆ ತಿರುವನಂತಪುರದ ಹೊರವಲಯದಲ್ಲಿ ತುಷಾರ್ ಗಾಂಧಿಯವರನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಅಡ್ಡಗಟ್ಟಿದರು. ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಈ ಘಟನೆಯು ದೇಶದ್ರೋಹಿಗಳನ್ನು ನ್ಯಾಯ ವ್ಯಾಪ್ತಿಗೆ ತರಬೇಕೆಂಬ ತನ್ನ ದೃಢಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಇದಲ್ಲದೆ, ಮಲಯಾಳಿಗಳು ವಿರೋಧ ಪಕ್ಷಗಳನ್ನು ಸಹ ಗೌರವಿಸುವ ಸಂಸ್ಕೃತಿಯನ್ನು ಹೊಂದಿದ್ದಾರೆ ಮತ್ತು ಜನರ ಹಕ್ಕುಗಳನ್ನು ರಕ್ಷಿಸುವುದರಲ್ಲಿಯೂ ಖ್ಯಾತವಾಗಿರುವ ಕೇರಳದಲ್ಲಿ ಇಂತಹ ಘಟನೆ ನಡೆದಿರುವುದು ತನಗೆ ಆಘಾತವನ್ನುಂಟು ಮಾಡಿದೆ ಎಂದು ಅವರು ಹೇಳಿದರು.
ಈ ರೀತಿಯ ವಿಷಕಾರಿ ಜನರನ್ನು ರಾಜ್ಯದಿಂದ ಹೊರಗೆ ಕಳುಹಿಸಬೇಕು. ಈ ಹೋರಾಟ ಸ್ವಾತಂತ್ರ್ಯ ಹೋರಾಟಕ್ಕಿಂತ ಮುಖ್ಯ ಎಂದು ಅವರು ಪ್ರತಿಕ್ರಿಯಿಸಿದರು.