ಕತಾರ್‌ನ ರಾಸ್ ಲಫ್ಫಾನ್ ಗ್ಯಾಸ್ ಸಂಕೀರ್ಣದಲ್ಲಿ ಸ್ಫೋಟ: 12 ಭಾರತೀಯರ ಸಾವು

ದೋಹಾ: ಕತಾರ್‌ನ ರಾಸ್ ಲಫ್ಫಾನ್ ಕೈಗಾರಿಕಾ ನಗರಿಯಲ್ಲಿರುವ ಅನಿಲ ಸಂಸ್ಕರಣಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟ ಮತ್ತು ಅಗ್ನಿದುರಂತದಲ್ಲಿ ಕನಿಷ್ಠ 12 ಭಾರತೀಯ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ ಅಧಿಕೃತವಾಗಿ ಖಚಿತಪಡಿಸಿದೆ.

ಮೃತರ ವಿವರಗಳ ಕುರಿತು ಕತಾರ್ ಅಧಿಕಾರಿಗಳು ತಮಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿರುವ ರಾಯಭಾರ ಕಚೇರಿಯು, ಸಂತ್ರಸ್ತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದೆ. “ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನಮ್ಮ ಆಳವಾದ ಸಂತಾಪಗಳು ಹಾಗೂ ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ,” ಎಂದು ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿದೆ.

ಅಪಘಾತದಲ್ಲಿ ಗಾಯಗೊಂಡಿರುವ ಉಳಿದ ಎಲ್ಲಾ ಭಾರತೀಯರ ಪರಿಸ್ಥಿತಿ ಸದ್ಯ ಸ್ಥಿರವಾಗಿದ್ದು, ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಮೃತಪಟ್ಟವರ ಪಾರ್ಥಿವ ಶರೀರಗಳನ್ನು ಆದಷ್ಟು ಬೇಗ ಭಾರತಕ್ಕೆ ಮರಳಿ ತರಲು ಅಗತ್ಯವಿರುವ ಎಲ್ಲಾ ರಾಜತಾಂತ್ರಿಕ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಕತಾರ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

ವಿಶ್ವದ ಅತಿ ದೊಡ್ಡ ಇಂಧನ ಕೇಂದ್ರಗಳಲ್ಲಿ ಒಂದಾದ ರಾಸ್ ಲಫ್ಫಾನ್ ಕೈಗಾರಿಕಾ ನಗರಿಯಲ್ಲಿ ಜೂನ್ 21 ರ ಭಾನುವಾರ ಸಂಜೆ ಈ ಭೀಕರ ದುರಂತ ಸಂಭವಿಸಿದೆ. ಕೈಗಾರಿಕಾ ಸಂಕೀರ್ಣದ ಕಾರ್ಖಾನೆಯೊಂದರಲ್ಲಿ ಕಾರ್ಯಾಚರಣೆಯ ವೇಳೆಯಲ್ಲಾದ ತಾಂತ್ರಿಕ ದೋಷದಿಂದಾಗಿ ಈ ಸ್ಫೋಟ ಸಂಭವಿಸಿದ್ದು, ಒಟ್ಟು 13 ಜನರು ಸಾವನ್ನಪ್ಪಿದ್ದಾರೆ ಮತ್ತು 66 ಮಂದಿ ಗಾಯಗೊಂಡಿದ್ದಾರೆ ಎಂದು ಕತಾರ್‌ನ ಆಂತರಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಘಟನೆಗೆ ನಿಖರವಾದ ತಾಂತ್ರಿಕ ಕಾರಣಗಳನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಇನ್ನು, ಸ್ಫೋಟದ ನಂತರ ಯಾವುದೇ ಅನಿಲ ಸೋರಿಕೆ ಅಥವಾ ಅಪಾಯಕಾರಿ ರಾಸಾಯನಿಕ ಹೊರಸೂಸುವಿಕೆ ಪತ್ತೆಯಾಗಿಲ್ಲ ಮತ್ತು ಸಾರ್ವಜನಿಕ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಕತಾರ್ ಸರ್ಕಾರದ ಸ್ವಾಮ್ಯದ ಇಂಧನ ಕಂಪನಿಯಾದ ‘ಕತಾರ್‌ಎನರ್ಜಿ’ (QatarEnergy) ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿದ್ದು, ರಾಸ್ ಲಫ್ಫಾನ್ ಕೈಗಾರಿಕಾ ನಗರಿ ವ್ಯಾಪ್ತಿಯಲ್ಲಿರುವ ‘ಬರ್ಜಾನ್’ ಸ್ಥಳೀಯ ಅನಿಲ ಪೂರೈಕೆ ಘಟಕದಲ್ಲಿ ಭಾನುವಾರ ಸಂಜೆ ಕಾರ್ಯಾಚರಣೆಯನ್ನು ಪುನರಾರಂಭಿಸುವ ಸಮಯದಲ್ಲಿ ಈ ಸ್ಫೋಟ ಮತ್ತು ಅಗ್ನಿ ದುರಂತ ಸಂಭವಿಸಿದೆ ಎಂದು ತಿಳಿಸಿದೆ. ಘಟನೆ ನಡೆದ ತಕ್ಷಣವೇ ತುರ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿವೆ ಎಂದು ಕಂಪನಿ ವಿವರಿಸಿದೆ.

Related Articles

ಇತ್ತೀಚಿನ ಸುದ್ದಿಗಳು