Friday, April 26, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಯವರಿಗೆ ಕರ್ನಾಟಕದಲ್ಲಿ ಇಪ್ಪತ್ತೇಳು ಸೀಟು ಸಾಕಂತೆ…!! ಕುಮಾರಸ್ವಾಮಿ ಗೆಲ್ಲೋದು ಬೇಡವಂತೆ!!!-ಮಾಚಯ್ಯ ಎಂ ಹಿಪ್ಪರಗಿ

ಬಿಜೆಪಿಯವರಿಗೆ ಕರ್ನಾಟಕದಲ್ಲಿ ಇಪ್ಪತ್ತೇಳು ಸೀಟು ಸಾಕಂತೆ…!! ಕುಮಾರಸ್ವಾಮಿ ಗೆಲ್ಲೋದು ಬೇಡವಂತೆ!!!
-ಮಾಚಯ್ಯ ಎಂ ಹಿಪ್ಪರಗಿ

ಇವತ್ತು ಪಾರ್ಕಿನಲ್ಲಿ ಆ ಮುಖ ಕಂಡು ನನಗೆ ತುಂಬಾ ಅಚ್ಚರಿಯಾಯ್ತು. ಅವ ನನ್ನ ವಾಕಿಂಗ್ ಗೆಳೆಯ. ಆದರೆ ಕಳೆದ ಒಂದೂವರೆ ತಿಂಗಳಿಂದ ವಾಕಿಂಗೂ ಬರುತ್ತಿರಲಿಲ್ಲ, ಫೋನಿಗೂ ಸರಿಯಾಗಿ ಸಿಗುತ್ತಿರಲಿಲ್ಲ. ಇವತ್ತು ದಿಢೀರ್ ಭೇಟಿಯಾದ. ಒಂದಷ್ಟು ಉಭಯ ಕುಶಲೋಪರಿಯ ನಂತರ ವಿಚಾರಣೆಗಿಳಿದು, “ಯಾಕಯ್ಯ ಈ ನಡುವೆ ನೀನು ಕಾಣಿಸ್ತಾನೇ ಇಲ್ವಲ್ಲ. ಬ್ಯುಸಿನಾ?” ಎಂದೆ.

“ಎಲೆಕ್ಷನ್ ಅಲ್ವೇನಯ್ಯಾ, ಸ್ವಲ್ಪ ಕೆಲಸದ ಒತ್ತಡ ಜಾಸ್ತಿನೇ ಇದೆ” ಅಂದ. ಅಂದಹಾಗೆ ಅವನನ್ನು ನಿಮಗೆ ಪರಿಚಯಿಸೋದನ್ನೆ ಮರೆತಿದ್ದೆ. ನನ್ನಂತೆಯೇ ಅವನೂ ನಿವೃತ್ತ ಜೀವಿ. ಜೊತೆಗೆ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಅಧಿಕಾರದಲ್ಲಿದ್ದಾಗ ಚೆನ್ನಾಗೇ ದುಡ್ಡು ಮಾಡಿರುವ ಈ ಆಸಾಮಿ ಆಗಾಗ್ಗೆ ’ನಮ್ಮ ದೇಶಕ್ಕೆ ಭ್ರಷ್ಟಾಚಾರವೇ ಕಳಂಕ. ಇಲ್ಲದಿದ್ರೆ ನಾವು ಜಪಾನನ್ನು ಯಾವತ್ತೋ ಬೀಟ್ ಮಾಡ್ತಿದ್ವಿ ಅಂತ ಪುಂಗ್ತಾ ಇರ‍್ತಾನೆ. ಇವನೂ ಒಂಥರ ಪುಂಗಿದಾಸ. ಈ ಸಾಮರ್ಥ್ಯವನ್ನು ಮನಗಂಡೇ ಬಿಜೆಪಿಯವರು ಅದೆಂತದೋ ಬ್ಲಾಕ್ ಅಧ್ಯಕ್ಷನನ್ನಾಗಿಯೋ, ಪ್ರಚಾರ ಸಮಿತಿಯ ಕಾರ್ಯದರ್ಶಿಯನ್ನಾಗಿಯೋ ನೇಮಕ ಮಾಡಿದಾರೆ.

“ಶ್ರಮ ಯಾಕೆ ಪಡ್ತೀರಯ್ಯಾ… ನಿಮ್ಮ ನಾಯಕರೆಲ್ಲ ಕರ್ನಾಟಕದಲ್ಲಿ ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟೂ ಸೀಟು ಗೆಲ್ತೀವಿ ಅಂತ ಅಷ್ಟು ಕಾನ್ಫಿಡೆಂಟಾಗಿ ಹೇಳ್ತಾ ಇದಾರೆ. ಆರಾಮಾಗಿ ಇರೋದು ತಾನೆ” ಎಂದು ರೇಗಿಸಿದೆ.

“ಅದ್ರಲ್ಲಿ ಯಾವ ಡೌಟೂ ಇಲ್ಲ ಬಿಡು. ಇಪ್ಪತ್ತೆಂಟು ಫಿಕ್ಸು. ಆದ್ರೆ ನಮಗೆ ಇಪ್ಪತ್ತೇಳು ಸಾಕು ಮಾರಾಯ. ಇನ್ನೊಂದು ಬ್ಯಾಡ” ಅಂದ. ಕುತೂಹಲಕ್ಕೆ ಕೈಹಾಕಿ ಕೆದಕಿದ್ದ. ಸುಮ್ಮನಿರಲಾದೀತೆ?

“ಇಪ್ಪತ್ತೇಳು ಸಾಕಾ? ಬೇಡವಾಗಿರೋ ಇನ್ನೊಂದು ಯಾವ್ದಯ್ಯ?”

“ಮಂಡ್ಯದಲ್ಲಿ ನಮ್ಮ ಮೈತ್ರಿ ಕ್ಯಾಂಡೇಟು ಸೋತ್ರೆ ಒಳ್ಳೆದು ಕಣಯ್ಯ”

“ಮಂಡ್ಯ? ಅಲ್ಲಿ ಕುಮಾರಸ್ವಾಮಿ ಅಲ್ವೇನಯ್ಯಾ ನಿಮ್ಮ ಅಭ್ಯರ್ಥಿ. ಅವರೇ ಸೋತುಹೋಗಲಿ ಅಂತೀಯಲ್ಲಯ್ಯಾ?” ನನ್ನ ಕುತೂಹಲವನ್ನು ಪ್ರಶ್ನೆಯಾಗಿಸಿದೆ.

“ಬೇಸಿಕಲಿ ನಮಗೆ ಈ ಮೈತ್ರಿನೆ ಬೇಡವಾಗಿತ್ತು ಕಣಯ್ಯ. ಆದ್ರೂ ಹೈಕಮಾಂಡಿನೋರು ಮಾಡ್ಕೊಂಡಿದಾರೆ. ಆ ಅಪ್ಪ-ಮಕ್ಕಳ ಮುಖ ನೋಡಿದಾಗಲೆಲ್ಲ, ಅವರು ಈ ಹಿಂದೆ ಮಾಡಿರೋ ನಂಬಿಕೆ ದ್ರೋಹ ನೆನೆಸ್ಕೊಂಡ್ರೆ ಮೈ ಉರಿಯುತ್ತೆ ಕಣಯ್ಯ. ಅದ್ಕೆ ಅವರಿಗೆ ಈ ಸಲ ಸರಿಯಾಗಿ ಪಾಠ ಕಲಿಸ್ಬೇಕು ಅಂತ ನಮ್ಮ ಪಾರ್ಟಿಯವ್ರು ತೀರ್ಮಾನ ಮಾಡ್ಕೊಂಡವ್ರೆ”

“ಇದು ಮೋಸ ಅಲ್ವೇನಯ್ಯಾ? ಮೈತ್ರಿಧರ್ಮಕ್ಕೆ ಅನ್ಯಾಯ ಮಾಡಿದಂಗೆ ಆಗಲ್ವಾ?” ಕೇಳಿದೆ ನಾನು.

“ಆ ಫ್ಯಾಮಿಲಿಯವ್ರು ಮೋಸ ಮಾಡದೆ ಇರೋ ಒಬ್ಬನೇ ಒಬ್ಬ ರಾಜಕಾರಣಿಯನ್ನ ಕರ್ನಾಟಕದಲ್ಲಿ ತೋರಿಸಯ್ಯ ನೀನು! ಜಾತಿಜಾತಿ ಅಂತ ಹೇಳ್ಕೊಂಡು ನಮ್ ಜಾತಿಯವ್ರನ್ನೆ ತುಳಿದ್ರು. ಅವ್ರು ಬಿಜೆಪಿಗೆ ಮೋಸ ಮಾಡಿಲ್ವಾ… ಕಾಂಗ್ರೆಸಿಗೆ ಮೋಸ ಮಾಡಿಲ್ವಾ… ಆಮೇಲ್ ನೋಡಿದ್ರೆ, ಬೇರೆ ಪಾರ್ಟಿಯವ್ರು ನಮಿಗೆ ಮೋಸ ಮಾಡಿದ್ರು ಅಂತ ಕಥೆ ಕಟ್ತಾರೆ. ಅಂತವ್ರಿಗೆ ಮೋಸ ಮಾಡೋದ್ರಲ್ಲಿ ಏನ್ ತಪ್ಪಿಲ್ಲ ಬಿಡು” ದೃಢವಾಗಿತ್ತು ಅವನ ಉತ್ತರ.

ಸ್ವಲ್ಪ ಹೊತ್ತು ಸುಮ್ಮನೇ ಹೆಜ್ಜೆ ಹಾಕಿ, ನನ್ನ ಬಳಿಸಾರಿ, ಯಾವುದೋ ಗುಟ್ಟು ಹೇಳುವವನಂತೆ ಮೆತ್ತನೆ ದನಿಯಲ್ಲಿ ಉಸುರಿದ, “ನಿಜವಾದ ವಿಷ್ಯ ಏನ್ ಗೊತ್ತೇನಯ್ಯಾ? ಈ ಕುಮಾರಸ್ವಾಮಿ ಏನಾದ್ರು ಗೆದ್ಧ್ ಬಿಟ್ರೆ, ನನ್ನ ಕೇಂದ್ರ ಮಂತ್ರಿ ಮಾಡಿ ಅಂತ ಗಂಟು ಬೀಳ್ತಾನೆ. ಇಲ್ಲ ಅನ್ನೋಕ್ಕೆ ಆಗಲ್ಲ. ಹಾಗೇನಾದ್ರೂ ಅವನನ್ನ ಮಂತ್ರಿ ಮಾಡ್ಬಿಟ್ರೆ, ಈ ಓಲ್ಡ್ ಮೈಸೂರ್ ಸೀಮೇನಲ್ಲಿ ಮತ್ತೆ ಜೆಡಿಎಸ್ ಪಾರ್ಟಿಗೆ ಜೀವ ಬಂದ್ಬಿಡುತ್ತೆ. ಅಪ್ಪ-ಮಕ್ಕಳನ್ನ ಯಾವತ್ತೂ ನಂಬಕ್ಕಾಗಲ್ಲ. ಯಾವಾಗ ಕೈಕೊಡ್ತಾರೋ ಏನೋ? ಸುಮ್ನೆ ಅವ್ರ ಪಾರ್ಟಿ ಬೆಳೆಯೋದಕ್ಕೆ ನಾವ್ಯಾಕೆ ಸಪೋರ್ಟ್ ಮಾಡ್ಬೇಕು. ಅದ್ಕೆ, ಕುಮಾರಸ್ವಾಮಿ ಸೋತುಬಿಟ್ರೆ, ಜೆಡಿಎಸ್ ಪಾರ್ಟಿ ಮತ್ತ್ಯಾವತ್ತೂ ತಲೆ ಎತ್ತದಂಗೆ ಆಗುತ್ತೆ. ರಾಜಕಾರಣ ಬರೀ ನಮಿಗಷ್ಟೇ ಗೊತ್ತು ಅಂತ ಅಪ್ಪ-ಮಕ್ಕಳು ಅನ್ಕೊಂಡಿದಾರೆ. ನಮ್ಮ ಹೈಕಮಾಂಡಿನೋರು ಉತ್ತರಭಾರತದಲ್ಲಿ ನೀರು ಕುಡಿದಿರೋರು.. ಕೊಡ್ತಾರ್ ನೋಡು!!”

ನನ್ನ ಹೆಜ್ಜೆಗಳು ಸಟ್ಟನೆ ನಿಂತವು. ನನ್ನ ಆಘಾತವನ್ನು ಕಂಡು ಹಿರಿಹಿರಿ ಹಿಗ್ಗಿದ ಆ ಗೆಳೆಯ “ಏನಯ್ಯಾ ಇಷ್ಟಕ್ಕೇ ಶಾಕ್ ಆದ್ರೆ ಹೆಂಗೆ.. ನಾವು ಅಧಿಕಾರಕ್ಕೆ ಬರಲಿ, ಇನ್ನೂ ನಮ್ಮತ್ರ ಏನೇನ್ ಅಸ್ತ್ರ ಇದಾವೆ ಗೊತ್ತಾ!!” ಎಂದ. ನನಗೂ ಹೌದೆನ್ನಿಸಿತು.

  • ಮಾಚಯ್ಯ ಎಂ ಹಿಪ್ಪರಗಿ

Related Articles

ಇತ್ತೀಚಿನ ಸುದ್ದಿಗಳು