ಭೋಪಾಲ್: ಇಲಿಗಳು ಕಚ್ಚಿದ ಪರಿಣಾಮ ಇಬ್ಬರು ನವಜಾತ ಶಿಶುಗಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬಿಜೆಪಿ ಆಡಳಿತದ ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಇಂದೋರ್‌ನ ಮಹಾರಾಜ ಯಶವಂತ್ ರಾವ್ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಿನಗಳ ಅಂತರದಲ್ಲಿ ಈ ಘಟನೆಗಳು ಸಂಭವಿಸಿವೆ. ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (NICU) ಚಿಕಿತ್ಸೆ ಪಡೆಯುತ್ತಿದ್ದ ದೇವಾಸ್‌ನ ಗಂಡು ಶಿಶು ಮತ್ತು ಖಾಂಡ್ವಾದ ಹೆಣ್ಣು ಶಿಶುವನ್ನು ಇಲಿಗಳು ಕಚ್ಚಿದ್ದವು.
ಆದರೆ, ಈ ನವಜಾತ ಶಿಶುಗಳ ಸಾವಿಗೆ ಇಲಿ ಕಡಿತ ಕಾರಣವಲ್ಲ, ಬದಲಾಗಿ ಜನ್ಮಜಾತ ಅನಾರೋಗ್ಯವೇ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಇಬ್ಬರ ದೇಹಗಳ ಮೇಲೂ ಇಲಿ ಕಚ್ಚಿದ ಗುರುತುಗಳಿರುವುದು ನಿಜ ಎಂದು ಅವರು ಒಪ್ಪಿಕೊಂಡಿದ್ದಾರೆ.
ನವಜಾತ ಶಿಶುಗಳನ್ನು ಇರಿಸಲಾಗಿದ್ದ ಘಟಕದಲ್ಲಿ ಒಂದು ದೊಡ್ಡ ಇಲಿಯು ಓಡಾಡುತ್ತಿರುವುದು ನಿಜ ಎಂದು ಆಸ್ಪತ್ರೆಯ ಸಿಬ್ಬಂದಿ ಕೂಡ ಒಪ್ಪಿಕೊಂಡಿದ್ದಾರೆ.